ಆಗ್ರಾ : ಈಚಿನ ದಿನಗಳಲ್ಲಿ ವಿವಾದದ ಕೇಂದ್ರವಾಗಿರುವ ಇಲ್ಲಿನ ವಿಶ್ವ ಪ್ರಸಿದ್ಧ ಐತಿಹಾಸಿಕ ಮೊಗಲ್ ಸ್ಮಾರಕಕ್ಕೆ ವಿವಾದದಿಂದ ಮುಕ್ತಿ ದೊರಕುವಂತೆ ಕಾಣುತ್ತಿಲ್ಲ.
ಎರಡು ಹಿಂದೂ ಸಂಘಟನೆಗಳ ಕಾರ್ಯಕರ್ತರ ಸಮೂಹವೊಂದು ತಾಜ್ ಮಹಲ್ ಆವರಣದಲ್ಲಿ ಶಿವ ಚಾಳೀಸಾ ಪಠಿಸಿ ಪೊಲೀಸರಿಂದ ಬಂಧನಕ್ಕೆ ಗುರಿಯಾಗಿರುವ ಘಟನೆ ನಿನ್ನೆ ಸೋಮವಾರ ನಡೆದಿದೆ.
ತಾಜ್ ಮಹಲ್ ಸ್ಮಾರಕವು ಹಿಂದೆ ಶಿವಾಲಯವಾಗಿತ್ತೆಂದು ಬಿಜೆಪಿ ಹಿರಿಯ ನಾಯಕರೊಬ್ಬರು ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು. ಈ ಹೇಳಿಕೆಯಿಂದ ಸ್ಫೂರ್ತಿ ಪಡೆದವರಂತೆ ಎರಡು ಹಿಂದೂ ಸಂಘಟನೆಗಳ ಕಾರ್ಯಕರ್ತರ ಒಂದು ಸಮೂಹ ತಾಜ್ ಮಹಲ್ ಆವರಣದಲ್ಲಿ ನಿನ್ನೆ ಸೋಮವಾರ ಶಿವ ಚಾಳೀಸಾ ಪಠಿಸಲು ಮುಂದಾದಾಗ ಪೊಲೀಸರು ಅವರನ್ನು ಪ್ರಶ್ನಿಸುವ ಸಲುವಾಗಿ ವಶಕ್ಕೆ ತೆಗೆದುಕೊಂಡರು.
ಬಂಧಿತ ಕಾರ್ಯಕರ್ತರು ರಾಷ್ಟ್ರ ಸ್ವಾಭಿಮಾನ್ ದಳ (ಆರ್‌ಎಸ್‌ಡಿ) ಮತ್ತು ಹಿಂದೂ ಯುವ ವಾಹಿನಿ (ಎಚ್‌ವೈವಿ) ಗೆ ಸೇರಿದವರೆಂದು ಗೊತ್ತಾಗಿದೆ. ಇವರನ್ನು ವಶಕ್ಕೆ ತೆಗೆದುಕೊಂಡ ಸಿಐಎಸ್‌ಎಫ್ ಸಿಬಂದಿಗಳು ಅನಂತರ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದರು.
ಬಂಧಿತ ಕಾರ್ಯಕರ್ತರು ಲಿಖೀತ ತಪ್ಪೊಪ್ಪಿಗೆ ನೀಡಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ವರದಿಗಳು ಹೇಳಿವೆ.