ಲಕ್ನೋ: ಲವ್ ಜೆಹಾದ್ ಕಾನೂನಿನಡಿಯಲ್ಲಿ ಉ.ಪ್ರ.ದಲ್ಲಿನ ಬಂಧನ ಪ್ರಕರಣಗಳ ನಡುವೆಯೇ ಅಲಹಾಬಾದ್ ಹೈಕೋರ್ಟ್, ಪ್ರತ್ಯೇಕ ವಾಸವಿದ್ದ ಹಿಂದೂ- ಮುಸ್ಲಿಂ ದಂಪತಿಯನ್ನು ಒಂದುಗೂಡಿಸಿದೆ!
“ಮಹಿಳೆಗೆ ತಾನು ಇಚ್ಛಿಸಿದ ಬದುಕಿನ ಹಾದಿ ಆರಿಸಿಕೊಳ್ಳುವ ಹಕ್ಕಿದೆ’ ಎಂದು ತೀರ್ಪು ನೀಡುವ ಮೂಲಕ ಹೈಕೋರ್ಟ್, 21 ವರ್ಷದ ಹಿಂದೂ ಮಹಿಳೆಯನ್ನು ಮರಳಿ ದಾಂಪತ್ಯದ ದಡಕ್ಕೆ ಸೇರಿಸಿದೆ ಹೈಕೋರ್ಟ್
ಏನಿದು ಪ್ರಕರಣ?: “ಪತ್ನಿ ಶಿಖಾಳ ಆಶಯಕ್ಕೆ ವಿರುದ್ಧವಾಗಿ ಮಕ್ಕಳ ರಕ್ಷಣ ಕಮಿಟಿ ಡಿ.7ರಂದು ಆಕೆಯನ್ನು ನನ್ನಿಂದ ಪ್ರತ್ಯೇಕಗೊಳಿಸಿದೆ’ ಎಂದು ಆರೋಪಿಸಿ ಪತಿ ಸಲ್ಮಾನ್, ಹೈಕೋರ್ಟ್ ಮೆಟ್ಟಿಲೇರಿದ್ದರು. ಮತಾಂತರಗೊಂಡಿರುವ ಹಿಂದೂ ಯುವತಿ, ಅಪ್ರಾಪ್ತ ವಯಸ್ಸಿನವಳು ಎಂದು ಕಮಿಟಿ ಆರೋಪಿಸಿತ್ತು. ಇದಕ್ಕೆ ಪೂರಕವಾಗಿ ಯುವತಿ, 1999 ಅ.4ರಲ್ಲಿ ತಾನು ಜನಿಸಿರುವುದಾಗಿ ಜನ್ಮಪ್ರಮಾಣ ಪತ್ರದ ದಾಖಲೆಗಳನ್ನು ಕೋರ್ಟಿಗೆ ಸಲ್ಲಿಸಿದ್ದಳು. ಅಲ್ಲದೆ, ತಾನು ಪತಿಯ ಜತೆ ಜೀವಿಸುವುದಾಗಿಯೂ ಕೋರ್ಟಿನ ಮುಂದೆ ಹೇಳಿದ್ದಳು.
ಯುವತಿಯ ಮನದಾಳಕ್ಕೆ ಕಿವಿಗೊಟ್ಟ ನ್ಯಾ| ಪಂಕಜ್ ನಖ್ವಿಮತ್ತು ವಿವೇಕ್ ಅಗರ್ವಾಲ್ ನೇತೃತ್ವದ ಪೀಠ, “ಯಾವುದೇ 3ನೇ ಪಕ್ಷದವರ ನಿರ್ಬಂಧ ಅಥವಾ ಅಡಚಣೆಗೊಳಪಡದೆ, ಯುವತಿಗೆ ತಾನು ಬಯಸಿದಂತೆ ಜೀವಿಸುವ ಹಕ್ಕಿದೆ’ ಎಂದು ತೀರ್ಪಿತ್ತಿದೆ. ಅಲ್ಲದೆ, ದಂಪತಿ ಮನೆಗೆ ಮರಳುವ ತನಕ ಅವರಿಗೆ ಭದ್ರತೆ ಒದಗಿಸುವಂತೆ ಪ್ರಯಾಗ್‌ರಾಜ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೈಕೋರ್ಟ್ ಆದೇಶಿಸಿದೆ.