ಬೆಳ್ತಂಗಡಿ: ಮನುಷ್ಯನಾಗಿ ಹುಟ್ಟಿದ ಮೇಲೆ ತನ್ನ ಜೀವಿತಾವಧಿಯಲ್ಲಿ ಬದುಕಿಗಾಗಿ ಉತ್ತಮ ವ್ಯವಸ್ಥೆಗಳನ್ನು ಕ್ರೂಢೀಕರಿಸುವಂತೆ ಸತ್ತ ಅನಂತರವೂ ಮುಕ್ತಿ ಹೊಂದಲು ಮುಕ್ತಿ ಧಾಮದ ಅಗತ್ಯ ವಿದೆ. ದ.ಕ., ಉಡುಪಿ ಜಿಲ್ಲೆಯಲ್ಲಿ ಕೆಲವು ಹಿಂದೂ ರುದ್ರಭೂಮಿಗಳು ಪ್ರವಾಸಿ ತಾಣದಂತಿದ್ದು, ಇನ್ನುಳಿದ ಹಿಂದೂ ರುದ್ರಭೂಮಿಗಳನ್ನು ಶ್ರೀಕ್ಷೇತ್ರ ಧ.ಗ್ರಾ. ಯೋಜನೆಯಂತಹ ಸಂಸ್ಥೆ, ಸಾರ್ವ ಜನಿಕರ ಸಹಕಾರ ಹಾಗೂ ಉದ್ಯೋಗ ಖಾತರಿ ಯೋಜನೆ ಮೂಲಕ ಅಭಿವೃದ್ಧಿಗೊಳಿಸ ಲಾಗುವುದು ಎಂದು ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.
ಅವರು ಗುರುವಾರ ಧರ್ಮಸ್ಥಳದ ಶ್ರೀಕ್ಷೇತ್ರ ಧ.ಗ್ರಾ. ಯೋಜನೆಯ ಕೇಂದ್ರ ಕಚೇರಿ ಜ್ಞಾನ ವಿಕಾಸ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆ ಧರ್ಮಸ್ಥಳದ ವತಿಯಿಂದ ಡಾ| ಡಿ. ವೀರೇಂದ್ರ ಹೆಗ್ಗಡೆ ಯವರ ಆಶಯದಂತೆ ನಡೆದ ಹಿಂದೂ ರುದ್ರಭೂಮಿ ಸಂರಕ್ಷಣೆ ಮತ್ತು ನಿರ್ವಹಣೆ ಕಾರ್ಯಾ ಗಾರವನ್ನು ಉದ್ಘಾಟಿಸಿ, ರಾಜ್ಯಾದ್ಯಂತ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಪ್ರೋತ್ಸಾಹ ಜತೆಗೆ ನಿರ್ವಹಣೆಗೆ ಸ್ಥಳೀಯರಿಗೆ ತರಬೇತಿ ನೀಡುವುದು ಅಭಿನಂದನೀಯ ಎಂದು ತಿಳಿಸಿದರು.
ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಸಹಾಯ ಧನ, ಪ್ರೋತ್ಸಾಹದಿಂದ ಹಿಂದೂ ರುದ್ರಭೂಮಿ ನಿರ್ಮಾಣಗೊಂಡರೆ ಅದರ ನಿರ್ವಹಣೆ ಗ್ರಾ.ಪಂ. ವ್ಯಾಪ್ತಿಯ ಜನರ ಕರ್ತವ್ಯ ವಾಗಬೇಕು. ಹಿಂದೂ ರುದ್ರಭೂಮಿಯ ಮಾಲಕರು ಅವರೇ ಆಗಬೇಕು ಎಂದರು. ಹತ್ಯಡ್ಕ ವೇದಪಾಠ ಶಾಲೆಯ ಅಂಶುಮಾನ್ ಅಭ್ಯಂಕರ್ ರುದ್ರಭೂಮಿ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಕಳ ಸಚ್ಚರಿಪೇಟೆ ಸಾರ್ವಜನಿಕ ಹಿಂದೂ ರುದ್ರಭೂಮಿ ಅಧ್ಯಕ್ಷ ಕೆ. ಸತ್ಯಶಂಕರ್ ಶೆಟ್ಟಿ, ಕುಂದಾಪುರ ತೆಕ್ಕಟ್ಟೆ ಹಿಂದೂ ರುದ್ರಭೂಮಿಯ ಅಧ್ಯಕ್ಷ ಸುರೇಂದ್ರ ದೇವಾಡಿಗ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅತ್ಯುತ್ತಮವಾಗಿ ಹಿಂದೂ ರುದ್ರಭೂಮಿ ನಿರ್ಮಿಸಿದ ಕಾರ್ಕಳ, ಮುಡ್ಕೂರು ಸಚ್ಚೕರಿಪೇಟೆ ಸಾರ್ವಜನಿಕ ಹಿಂದೂ ರುದ್ರಭೂಮಿ, ಬೆಳ್ತಂಗಡಿ ತಾಲೂಕು ವೇಣೂರು ಹಿಂದೂ ರುದ್ರಭೂಮಿ ಅನುಷ್ಠಾನ ಸಮಿತಿ, ಬಂಟ್ವಾಳ ಕಂಚಿನಡ್ಕ ಪದವು ಸಾರ್ವಜನಿಕ ಹಿಂದೂ ರುದ್ರಭೂಮಿ ಸಮಿತಿ, ಬಂಟ್ವಾಳ ಅಮ್ಮುಂಜೆ ವಿನಾಯಕ ಫ್ರೆಂಡ್ಸ್ ಕ್ಲಬ್, ಕುಂದಾಪುರ ತೆಕ್ಕಟ್ಟೆ ಹಿಂದೂ ರುದ್ರಭೂಮಿ ಸಮಿತಿ, ಬೆಳ್ತಂಗಡಿ ಲಾೖಲ ಸಾರ್ವಜನಿಕ ಹಿಂದೂ ರುದ್ರಭೂಮಿ ಸಮಿತಿ ಇವರಿಗೆ ಅತ್ಯುತ್ತಮ ನಿರ್ವಹಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ ಸ್ವಾಗತಿಸಿ, ಎಂಜಿನಿಯರ್ ಪುಷ್ಪರಾಜ್ ವಂದಿಸಿ, ಮ್ಯಾನೇಜರ್ ಸೋಮಪ್ಪ ಪೂಜಾರಿ ನಿರೂಪಿಸಿದರು.
ಅನುದಾನ ವಿತರಣೆ
ಕ್ಷೇತ್ರದ ಮೂಲಕ ರುದ್ರಭೂಮಿಗೆ ನೀಡುವ ಅನುದಾನವನ್ನು ಶಾಸಕ ಹರೀಶ್ ಪೂಂಜ ವಿತರಿಸಿ, ಶಾಸಕನಾದ ಪ್ರಥಮ ಕಾರ್ಯವಾಗಿ ತಾಲೂಕಿನ ಎಲ್ಲ ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಅವರವರ ಗ್ರಾ.ಪಂ. ವ್ಯಾಪ್ತಿಯ ರುದ್ರಭೂಮಿಗಳಿಗೆ ಜಮೀನು ಗುರುತಿಸುವಿಕೆ ಮತ್ತು ಒತ್ತುವರಿ ಜಮೀನನ್ನು ತೆರವುಗೊಳಿಸಲು ಸೂಚಿಸಿದ್ದೇನೆ. ತಾಲೂಕಿನ ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗೆ ಸರಕಾರದ ಅನುದಾನ ನೀಡಲು ಪ್ರಯತ್ನಿಸುತ್ತೇನೆ. ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಸಮಾಜದ ಹಾಗೂ ಸಮಾಜದ ಬಂಧುಗಳ ಅಭಿವೃದ್ಧಿಗೆ ಶ್ರಮಿಸುವುದರ ಜತೆಗೆ ರಾಜ್ಯದ ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿರುವುದು ದೇಶದಲ್ಲೇ ಮಾದರಿ ಎಂದರು.