Advertisement

ನದಿ ದಾಟಲು ಹಿಂದೂ- ಕ್ರಿಶ್ಚಿಯನ್ ಸಮುದಾಯಗಳ ಸೌಹಾರ್ದತೆಯ ಸೇತುಬಂಧನ

11:14 AM Jun 07, 2020 | keerthan |

ಮಂಗಳೂರು: ಇದು ನಗರದ ಜೀವನಾಡಿ ನೇತ್ರಾವತಿಯ ನಡುವರ ಇರುವ ಪುಟ್ಟ ದ್ವೀಪ. ನದಿಯ ಮಧ್ಯಭಾಗದಲ್ಲಿದ್ದರೂ ಇಲ್ಲಿಗೆ ಹೋಗಲು ಶಾಶ್ವತ ಸೇತುವೆಯ ವ್ಯವಸ್ಥೆಯಿಲ್ಲ. ಹಾಗಾಗಿ ಇಲ್ಲಿಗೆ ಕಾರು, ಬೈಕುಗಳ ಸಂಚಾರವಿಲ್ಲ. ಇಲ್ಲಿರುವ 40ಕ್ಕೂ ಹೆಚ್ಚು ಕುಟುಂಬಗಳು ಮಳೆಗಾಲದಲ್ಲಿ ನದಿ ದಾಟಲು ದೋಣಿಯನ್ನು ಆಶ್ರಯಿಸಿದರೆ, ಬೇಸಿಗೆ ಕಾಲದಲ್ಲಿ ತಾವೇ ನಿರ್ಮಿಸುವ ಸೇತುವೆಯೇ ಆಧಾರ.

Advertisement

ನಗರದ ಅಡ್ಯಾರ್ ಬಳಿ ನೇತ್ರಾವತಿ ನದಿ ಮಧ್ಯ ಭಾಗದಲ್ಲಿರುವ ಈ ಉಳಿಯ ಎನ್ನುವ ಪ್ರದೇಶದಲ್ಲಿ ಸುಮಾರು ನಲ್ವತ್ತು ಕ್ರಿಶ್ಚಿಯನ್ ಕುಟುಂಬಗಳು ವಾಸಿಸುತ್ತಿದೆ. ಇಲ್ಲಿಗೊಂದು ಶಾಶ್ವತ ಸೇತುವೆ ನಿರ್ಮಿಸಿ ಎನ್ನುವ ಮನವಿಗೆ ಅರ್ಜಿ ಬರೆದು ಸರ್ಕಾರಿ ಕಚೇರಿ ಅಲೆದಾಡಿದರೂ, ಇವರಿಗೆ ಆ ಭಾಗ್ಯ ಇನ್ನೂ ದೊರೆತಿಲ್ಲ. ಈ ಕಾರಣಕ್ಕೆ ಪ್ರತೀ ವರ್ಷವೂ ಇವರು ತಾವೇ ನಿರ್ಮಿಸುವ ತಾತ್ಕಾಲಿಕ ಸೇತುವೆಯ ಮೊರೆ ಹೋಗಬೇಕಾಗುತ್ತದೆ.

ಬೇಸಿಗೆ ಕಾಲದಲ್ಲಿ ನೀರಿನ ಹರಿವು, ರಭಸ ಕಡಿಮೆ ಇರುವ ಕಾರಣ ಕಬ್ಬಿಣದ  ಸರಳುಗಳನ್ನು ಜೋಡಿಸಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುತ್ತಾರೆ. ಇದರಲ್ಲಿ ಜನರು ನಡೆದುಕೊಂಡು ನದಿ ದಾಟಬಹುದಷ್ಟೇ. ಮಳೆಗಾಲ ಶುರುವಾಗುತ್ತಿದ್ದಂತೆ ಆ ತಾತ್ಕಾಲಿಕ ಸೇತುವೆಯನ್ನು ತೆಗೆಯಲು ಆರಂಭಿಸುತ್ತಾರೆ. ಕಾರಣ ಮಳೆಗಾಲದಲ್ಲಿ ನೇತ್ರಾವತಿಯುಉ ತುಂಬಿ ಹರಿಯುವುದರಿಂದ ಸೇತುವೆಯ ಮುಳುಗಡೆಯ ಭೀತಿಯ ಜೊತೆಗೆ ಕಬ್ಬಿಣದ ಸರಳುಗಳು ನೀರು ಪಾಲಾಗುವ ಭೀತಿ! ಮಳೆಗಾಲದ ಸುಮಾರು ಆರು ತಿಂಗಳು ಇವರಿಗೆ ದೋಣಿಯಾನವೇ ಗತಿ ಎಂಬಂತಾಗಿದೆ.

ವಿಶೇಷ ಏನೆಂದರೆ ಸೇತುವೆಯ ಅಗತ್ಯವೇ ಇರದ ನದಿ ಪಕ್ಕದ ಹಿಂದೂ ಸಮುದಾಯದ ಜನರೂ ಸೇತುವೆಯ ಕೆಲಸಕ್ಕೆ ಕೈ ಜೋಡಿಸುವ ಮೂಲಕ ಅಲ್ಲಿನ ಕ್ರಿಶ್ಚಿಯನ್ ಸಮುದಾಯಕ್ಕೆ ಹೆಗಲು‌ ನೀಡುವ ಕೆಲಸ ಮಾಡಿದ್ದಾರೆ.

Advertisement

ಸೇತುವೆ ನಿರ್ಮಿಸಲು ಒಂದಾಗುವ ಆ ಊರು

ಆ ಉಳಿಯದಲ್ಲಿಸುಮಾರು 40 ಕುಟುಂಬಗಳು ವಾಸಿಸುತ್ತಿದೆ. ಬಹುತೇಕರು ಕ್ರಿಶ್ಚಿಯನ್ ಸಮುದಾಯದವರು. ಆದರೆ ಸೇತುವೆ ನಿರ್ಮಾಣ ಮತ್ತು ಸೇತುವೆ ತೆಗೆಯುವ ಕಾರ್ಯಕ್ಕೆ ನದಿಯ ಮತ್ತೊಂದು ದಡದ ಹಿಂದೂಗಳು ಕೈ ಜೋಡಿಸುತ್ತಾರೆ.

ವರ್ಷವೂ ಕೆಲವೇ ಹಿಂದೂ ಯುವಕರು ಇವರ ಈ ಸೇತುವೆ ಕಟ್ಟುವ ಕೆಲಸದ ಜೊತೆ ಸೇರುತ್ತಿದ್ದರೆ ಈ ಬಾರಿ ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಯುವಕರು ಬೆಳಗ್ಗಿನ ಜಾವದಲ್ಲಿ ಕ್ರಿಶ್ಚಿಯನ್ ಸಮುದಾಯದ ಜೊತೆ ನಿಂತು ಅವರಿಗೆ ಸಾಥ್ ನೀಡಿದ್ದಾರೆ. ತಮ್ಮ ಕಷ್ಟವನ್ನು ಸರ್ಕಾರದ ಬಳಿ ತೋಡಿಕೊಂಡು ಸೊರಗಿ ಹೋಗಿದ್ದ ಇಲ್ಲಿನ ಕ್ರಿಶ್ಚಿಯನ್ ಸಮುದಾಯಕ್ಕೆ ಹಿಂದೂಗಳ ಈ ಸಹಕಾರ ತಮ್ಮ ಕಷ್ಟದ ಜೊತೆ ಯಾರು ಇಲ್ಲ ಎನ್ನುವ ಕೊರಗನ್ನು ದೂರ ಮಾಡಿದೆ. ಸೇತುವೆ ಎರಡು ಸಮುದಾಯದ ಸೇತುಬಂಧಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next