Advertisement

ಹಿಂದಿಯಲ್ಲಿ ಸಂದಾಯವಾಯಿತು ಗುರುದಕ್ಷಿಣಾ

06:17 PM Oct 03, 2019 | mahesh |

ಮಂಗಳೂರು ಅಧಿಕೃತ ಭಾಷಾ ಅನುಷ್ಠಾನ ಸಮಿತಿ ಹಾಗೂ ಆಕಾಶವಾಣಿ ಮಂಗಳೂರು ಸಹಯೋಗದಲ್ಲಿ ಹಿಂದಿ ದಿವಸ್‌ ಆಚರಣೆ “ಇಂದ್ರ ಧನುಷ್‌’ ಅಂಗವಾಗಿ ಸರಯೂ ಮಕ್ಕಳ ಮೇಳದಿಂದ ಹಿಂದಿ ಯಕ್ಷಗಾನ “ಗುರುದಕ್ಷಿಣಾ’ ಏರ್ಪಡಿಸಲಾಗಿತ್ತು.

Advertisement

ಶ್ರೀಕೃಷ್ಣ – ಬಲರಾಮರು ಗುರು ಸಾಂದೀಪನಿಯವರ ಪುತ್ರನನ್ನು ಆತ್ಮಸ್ವರೂಪದಲ್ಲಿ ತಂದು ಗುರುದಕ್ಷಿಣೆ ನೀಡುವುದೇ ಈ ಕಥೆಯ ಸಾರ. ಕೃಷ್ಣ , ಪಂಚಜನನನ್ನು ಕೊಂದು ಅವನ ಬೆನ್ನ ಮೂಳೆಯ ಎಲುಬಿನಿಂದ ಶಂಖವನ್ನು ಸೃಷ್ಟಿಸಿ ಆ ರಾಕ್ಷಸನ ನೆನಪು ಉಳಿಯುವಂತೆ ಅದಕ್ಕೆ “ಪಾಂಚಜನ್ಯ’ ಎಂಬ ಹೆಸರನ್ನಿರಿಸುತ್ತಾನೆ. ದುಷ್ಟನ ವಧೆಯಿಂದ ಧರ್ಮಸಂಸ್ಥಾಪನೆಯ ಕೂಗಿಗಾಗಿ ಪಾಂಚಜನ್ಯ ಮೊಳಗಿತು. ಶೈಮಿನಿಯರಸನನ್ನು ಕಂಡು ಅವನಲ್ಲಿಂದ ಬಾಲಕನ ಆತ್ಮವನ್ನು ತಂದು ಗುರುಗಳ ಪಾದಕ್ಕೊಪ್ಪಿಸುವುದೇ ಈ ಪಾಂಚಜನ್ಯೋತ್ಪತ್ತಿ. ಡಾ| ದಿನಕರ ಪಚ್ಚನಾಡಿಯವರ ಪ್ರಸಂಗವನ್ನು ಹಾಗೂ ಬಿ.ಪ್ರಕಾಶ ಪೈಯವರ ಭಾಷಾಂತರವನ್ನು ಸರಯೂ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಪ್ರದರ್ಶಿಸಿದರು. ಪದ್ಯಗಳೂ ಹಿಂದಿ ಭಾಷೆಯಲ್ಲೇ ಇದ್ದದ್ದು ಪ್ರಸಂಗದ ಹೈಲೈಟ್‌. ಇದರ್‌ ಇಸ್‌ ತರಹ್‌ ರಾಮಕೃಷ್ಣನೆ ಅನುಜ್‌ ತು ಸುನು ಮೋರೇ … ಎಂಬಿತ್ಯಾದಿ ಹಾಡುಗಳು ಸತೀಶ್‌ ಶೆಟ್ಟಿ ಬೋಂದೇಲ್‌ರವರ ಮಧುರ ಕಂಠದಿಂದ ಬಹಳ ಸುಂದರವಾಗಿ ಮೂಡಿ ಬಂದು ಪ್ರಸಂಗದ ಅಂದವನ್ನು ಹೆಚ್ಚಿಸಿದುವು.

ವರ್ಕಾಡಿ ರವಿ ಅಲೆವೂರಾಯರ ನಿರ್ದೇಶನ ಈ ಯಕ್ಷ ಕಾಣೆಗಿತ್ತು. ಬಲರಾಮನಾಗಿ ಪ್ರಥಮ್‌ ರೈ, ವರುಣನಾಗಿ ಚಿಂತನ್‌ ಆರ್‌.ಕೆ., ಸಾನ್ವಿ ಜೆ. ಮತ್ತು ಅದ್ವಿತ್‌ ಸೇನಾವೀರರಾಗಿದ್ದರು. ವಿಜಯಲಕ್ಷ್ಮೀ ಎಲ…. ಪಂಚಜನನಾದರೆ ಚಿರಾಗ್‌ ಆರ್‌.ಕೆ., ಸಂಜನಾ ಜೆ. ರಾವ್‌, ಪೂರ್ವಿ ಎಸ್‌., ಹರ್ಷಿತ್‌ ಶೆಟ್ಟಿ ಬಲಗಳಾದರು. ಯಮಧರ್ಮನಾಗಿ ಅಕ್ಷಯ್‌ ಸಿ., ಮೃತ್ಯುವಾಗಿ ನಚಿತ್‌ ಕೆ., ಯಮಭಟರಾಗಿ ಸಾನ್ವಿ ಬಿ.ಕೆ., ಸಾರ್ಥಕ್‌ ಶೆಣೈ, ಹರಿಚರಣ್‌ ಆರ್‌.ಪಿ.ಯವರಿದ್ದರು. ಸುರೇಖಾ ಶೆಟ್ಟಿಯವರು ಗುರುವಾದರೆ, ಮಲ್ಲಿಕಾ ಜೀವನ್‌ ಗುರುಪತ್ನಿಯಾಗಿದ್ದರು. ಒಟ್ಟಂದದಲ್ಲಿ ಸುಂದರವಾದ ಪ್ರಸ್ತುತಿಯಾಗಿತ್ತು ಹಿಂದಿ ಯಕ್ಷಗಾನ “ಗುರುದಕ್ಷಿಣಾ’.

Advertisement

Udayavani is now on Telegram. Click here to join our channel and stay updated with the latest news.

Next