ಉಡುಪಿ: ವಾರಾಣಸಿ ರಾಷ್ಟ್ರೀಯ ನಾಟಕ ಶಾಲೆ (ಎನ್.ಎಸ್. ಡಿ.)ಯಲ್ಲಿ ರಂಗ ಶಿಕ್ಷಣ ಪಡೆಯುತ್ತಿರುವ 20 ಮಂದಿ ವಿದ್ಯಾರ್ಥಿಗಳು ಯಕ್ಷಗಾನ ತರಬೇತಿ ಪಡೆದು ಜೂ. 25ರಂದು ಪೂರ್ಣಪ್ರಜ್ಞ ಸಭಾಂಗಣ ಹಾಗೂ ಜೂ. 26 ರಂದು ಸಂಜೆ 6 ರಿಂದ ಯಕ್ಷಗಾನ ಕಲಾ ರಂಗದ ಸಭಾಂಗಣದಲ್ಲಿ ಹೊಸ್ತೋಟ ಮಂಜುನಾಥ ಭಾಗವತ ರಚಿತ ಪ್ರಸಂಗ “ಏಕಲವ್ಯ’ ಪ್ರಸಂಗವನ್ನು ಹಿಂದಿ ಭಾಷೆಯಲ್ಲಿ ಪ್ರದರ್ಶಿಸಲು ಸಜ್ಜಾಗಿದ್ದಾರೆ.
ಇವರು ಯಕ್ಷಗಾನ ತರಬೇತಿಗೆಂದೇ ಉಡುಪಿಗೆ ಬಂದು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಪ್ರೋತ್ಸಾಹದಿಂದ ಶ್ರೀ ಅದಮಾರು ಮಠದ ಛತ್ರದಲ್ಲಿ ಯಕ್ಷಗುರು ಸಂಜೀವ ಸುವರ್ಣ ಅವರಲ್ಲಿ ಅಭ್ಯಾಸ ಆರಂಭಿಸಿದರು.
ತಂಡದಲ್ಲಿ 11 ಯುವಕರು ಹಾಗೂ 9 ಯುವತಿಯರಿದ್ದಾರೆ. ಇವರೆಲ್ಲ ಉತ್ತರ ಪ್ರದೇಶ, ಮಧ್ಯಪ್ರದೇಶ, ಝಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಮೂಲದವರು. 1 ತಿಂಗಳ ಯಕ್ಷಗಾನ ಅಭ್ಯಾಸಕ್ಕೆ ಕಳುಹಿಸಲ್ಪಟ್ಟ ವಿದ್ಯಾರ್ಥಿಗಳಿಗೆ ಸಂಸ್ಥೆಯ ನಿರ್ದೇಶಕ ಪ್ರವೀಣ್ ಕುಮಾರ್ ಗುಂಜನ್ ಮಾರ್ಗದರ್ಶನ ನೀಡುತ್ತಿದ್ದಾರೆ.
ಪ್ರತಿದಿನ ಬೆಳಗ್ಗೆ 5ರಿಂದ 8ರ ತನಕ, 10ರಿಂದ ಮಧ್ಯಾಹ್ನ 1ರ ವರೆಗೆ ಹಾಗೂ 3ರಿಂದ ಸಂಜೆ 7ರ ವರೆಗೆ ಸಪ್ತ ತಾಳಗಳು, ಹೆಜ್ಜೆ, ಕುಣಿತ, ನರ್ತನ, ಮಾತಿನ ಶೈಲಿಇತ್ಯಾದಿ ತರಬೇತಿ ಪಡೆಯುತ್ತಿದ್ದಾರೆ.
ಸಂಜೀವ ಸುವರ್ಣರ ನೇತೃತ್ವದಲ್ಲಿ ಶ್ರೀಧರ ಹೆಗಡೆ, ಪ್ರಸಾದ್ ಸುಬ್ರ ಹ್ಮಣ್ಯ ಮುದ್ರಾಡಿ ಅವರು ತಾಳ ಹಾಕಿ 15 ರಾಗ ಸಹಿತ ಪೂರ್ವ ರಂಗ ಕುಣಿತ ಕಲಿಸು ತ್ತಿದ್ದಾರೆ. ವಿದ್ಯಾರ್ಥಿಗಳು ವೇಷ ಭೂಷಣ, ಮುಖವರ್ಣಿಕೆಯನ್ನು ಕಲಿತಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಯಕ್ಷಗಾನ ಗೊತ್ತಿಲ್ಲದಿದ್ದರೂ ಕಲಾಸಕ್ತಿಯಿಂದ ತಮ್ಮನ್ನು ಸಂಪೂರ್ಣವಾಗಿ ತೊಡಗಿ ಸಿಕೊಂಡು “ಏಕಲವ್ಯ’ ಯಕ್ಷಗಾನ ಪ್ರದರ್ಶನಕ್ಕೆ ಸಜ್ಜಾಗಿದ್ದಾ ರೆ. ನಾಟ್ಯ, ಅಭಿನಯದ ತರಬೇತಿ, ರಾಗದ ಬಗ್ಗೆ ಮಾಹಿತಿ ನೀಡಲಾಗಿದೆ. ಕೇವಲ 20 ದಿನಗಳಲ್ಲಿ ಯಕ್ಷಗಾನದ ಎಲ್ಲ ನಡೆ, ಧಾಟಿಯಲ್ಲಿ ಪ್ರಬುದ್ಧತೆ ಸಾಧಿಸಲಾಗದು. ಆದರೆ ಪ್ರದರ್ಶನಕ್ಕೆ ಬೇಕಾ ದದ್ದನ್ನು ಶ್ರದ್ಧೆಯಿಂದ ಅಭ್ಯಸಿಸಿದ್ದಾರೆ. ತಮ್ಮ ಅತ್ಯಾಸಕ್ತಿಯಿಂದ ಉತ್ತರ ಪ್ರದೇಶದ ವಿದ್ಯಾರ್ಥಿಗಳು ಸಮಗ್ರ ಮಾಹಿತಿ ಕಲೆ ಹಾಕುತ್ತಾ ಕಲಾವಿದರಾಗುತ್ತಿರುವುದು ಖುಷಿಯ ಸಂಗತಿ.
-ಬನ್ನಂಜೆ ಸಂಜೀವ ಸುವರ್ಣ, ಯಕ್ಷ ಸಂಜೀವ ಯಕ್ಷಗಾನ ಕೇಂದ್ರ