ಚೆನ್ನೈ: ಕೆಲ ತಿಂಗಳ ಹಿಂದೆ ತಮಿಳುನಾಡಿನ ಡಿಎಂಕೆ ಪಕ್ಷದ ಸಚಿವರೊಬ್ಬರು ಸನಾತನ ಧರ್ಮದ ಬಗ್ಗೆ ಮಾತನಾಡಿ ವಿವಾದಕ್ಕೀಡಾಗಿದ್ದರು. ಇದೀಗ ಅದೇ ಪಕ್ಷದ ಸಂಸದರೊಬ್ಬರು ಭಾಷಾ ವಿಚಾರದಲ್ಲಿ ಮಾತನಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಡಿಎಂಕೆ ಸಂಸದ ದಯಾನಿಧಿ ಮಾರನ್ ಕಾರ್ಯಕ್ರಮವೊಂದರಲ್ಲಿ ಇಂಗ್ಲಿಷ್ – ಹಿಂದಿ ಕಲಿಕೆಯ ಬಗ್ಗೆ ಮಾತನಾಡಿರುವುದು ವೈರಲ್ ಆಗಿದ್ದು,ಬಿಜೆಪಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
“ಇಂಗ್ಲಿಷ್ ಕಲಿತವರು ಐಟಿಗಳಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಉತ್ತಮ ಸಂಬಳವೂ ಇರುತ್ತದೆ. ಹಿಂದಿ ಮಾತ್ರ ತಿಳಿದಿದೆ ಎಂದು ಹೇಳುವವರು, ಇಂದು ನಮ್ಮಲ್ಲಿ(ತಮಿಳುನಾಡಿಗೆ) ಬಂದು ತಮಿಳು ಕಲಿತು ನಿರ್ಮಾಣ ಕೆಲಸ ಅಥವಾ ರಸ್ತೆಗಳು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತಾರೆ” ಎಂದು ಹೇಳಿದ್ದಾರೆ.
ಈ ವಿಡಿಯೋವನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಹಂಚಿಕೊಂಡಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ.
ದೇಶದ ಜನರನ್ನು ಜಾತಿ, ಭಾಷೆ ಮತ್ತು ಧರ್ಮದ ಮೂಲಕ ವಿಭಜಿಸಲು ಪ್ರಯತ್ನಿಸುತ್ತಿರುವ ಇಂಡಿಯಾ ಒಕ್ಕೂಟ ಮತ್ತು ಡಿಎಂಕೆ ಸಂಸದರ ವಿರುದ್ಧ ಮೈತ್ರಿಕೂಟ “ನಿಷ್ಕ್ರಿಯತೆ” ಯನ್ನು ವಹಿಸಿರುವುದು ಕಟುವಾಗಿದೆ. ಇದು “ಮತ್ತೊಮ್ಮೆ ಡಿವೈಡ್ ಮತ್ತು ರೂಲ್ ಕಾರ್ಡ್ ಅನ್ನು ಪ್ಲೇ ಮಾಡುವ ಪ್ರಯತ್ನ” ಎಂದು ಪೂನವಾಲಾ ಟ್ವಿಟರ್ ನಲ್ಲಿ ಬರೆದುಕೊಂಡದ್ದಾರೆ.
ನಿತೀಶ್ ಕುಮಾರ್, ತೇಜಸ್ವಿ ಯಾದವ್, ಲಾಲು ಯಾದವ್, ಕಾಂಗ್ರೆಸ್, ಎಸ್ಪಿ ಅಖಿಲೇಶ್ ಯಾದವ್ ಈ ಬಗ್ಗೆ ಯಾಕೆ ಮೌನವಾಗಿದ್ದಾರೆ. ನೀವು ಯಾವಾಗ ನಿಲುವು ತೆಗೆದುಕೊಳ್ಳುತ್ತೀರಿ? ಎಂದು ದಯಾನಿಧಿ ಮಾರನ್ ಅವರ ಹೇಳಿಕೆಗೆ ಉತ್ತರ ಪ್ರದೇಶ ಮತ್ತು ಬಿಹಾರದ ಇಂಡಿಯಾ ಬಣದ ನಾಯಕರಲ್ಲಿ ಪೂನವಾಲಾ ಪ್ರಶ್ನೆ ಮಾಡಿದ್ದಾರೆ.