ರಕ್ಷಿತ್ ಶೆಟ್ಟಿ ಅಭಿನಯದ “ಕಿರಿಕ್ ಪಾರ್ಟಿ’ ಚಿತ್ರವು ಹಿಂದಿಗೆ ರೀಮೇಕ್ ಆಗುತ್ತಿದೆ ಮತ್ತು ಆ ರೀಮೇಕ್‌ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ನಟಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಆ ಚಿತ್ರ ರೀಮೇಕ್ ಶುರುವಾಗುವುದಕ್ಕಿಂತ ಮುನ್ನವೇ ರಕ್ಷಿತ್ ಅಭಿನಯದ ಇನ್ನೊಂದು ಚಿತ್ರ ಹಿಂದಿಗೆ ರೀಮೇಕ್ ಆಗುತ್ತಿರುವ ಸುದ್ದಿ ಬಂದಿದೆ. ಅದೇ “ಗೋಧಿ ಬಣ್ಣ ಸಾಧಾರಣ ಮೈಕಟ್ಟು’. ಈ ಚಿತ್ರದ ಹಿಂದಿ ರೀಮೇಕ್ ಹಕ್ಕುಗಳನ್ನು ವಿಎಲ್ ಪ್ರೊಡಕ್ಷನ್ಸ್ ಎಂಬ ಸಂಸ್ಥೆ ಖರೀದಿಸಿದ್ದು, ಆ ಚಿತ್ರದ ಇನ್ನಷ್ಟು ವಿವರಗಳು ಸದ್ಯದಲ್ಲೇ ಲಭ್ಯವಾಗಲಿವೆ.
“ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರವು ಹಿಂದಿಗೆ ರೀಮೇಕ್ ಆಗುತ್ತಿದೆ ಎಂಬ ಸುದ್ದಿ ಒಂದೂ-ಮುಕ್ಕಾಲು ವರ್ಷದ ಹಿಂದೆಯೇ ಬಂದಿತ್ತು. ರೀಮೇಕ್ ಹಕ್ಕುಗಳನ್ನು ನಟ-ನಿರ್ದೇಶಕ ಪ್ರಕಾಶ್ ರೈ ಪಡೆದಿದ್ದಾರೆ ಮತ್ತು ಅವರು ಅಮಿತಾಭ್ ಬಚ್ಚನ್ ಅಭಿನಯದಲ್ಲಿ ಚಿತ್ರ ಮಾಡುತ್ತಾರೆ ಎಂದೆಲ್ಲಾ ಸುದ್ದಿ ಹಬ್ಬಿತ್ತು. ಪ್ರಕಾಶ್ ರೈ ರೀಮೇಕ್ ಹಕ್ಕುಗಳನ್ನು ಪಡೆದಿರುವುದು ಹೌದಾದರೂ, ಅದು ಬರೀ ತೆಲುಗು-ತಮಿಳಿನದ್ದು.
ಹಿಂದಿ ರೀಮೇಕ್ ಹಕ್ಕುಗಳು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಬಳಿಯೇ ಇದ್ದು, ಇದೀಗ ಕಳೆದ ವಾರ ಒಳ್ಳೆಯ ರೇಟಿಗೆ ಮಾರಾಟವಾಗಿದೆಯಂತೆ. ಚಿತ್ರದ ಹಕ್ಕುಗಳನ್ನು ಪಡೆದಿರುವ ವಿಎಲ್ ಪ್ರೊಡಕ್ಷನ್‌ನವರು ಸದ್ಯದಲ್ಲೇ ದೊಡ್ಡ ತಾರಾಗಣದೊಂದಿಗೆ ಈ ಚಿತ್ರ ನಿರ್ಮಿಸಲಿದ್ದಾರೆ ಮತ್ತು ಈ ವರ್ಷದ ಕೊನೆಯ ಹೊತ್ತಿಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.
ಅಲ್ಲಿಗೆ ರಕ್ಷಿತ್ ಮತ್ತು ಪುಷ್ಕರ್ ಜೊತೆಯಾಟದ ಎರಡು ಚಿತ್ರಗಳು ಹಿಂದೆ ರೀಮೇಕ್ ಆಗುತ್ತಿವೆ ಎನ್ನುವುದು ವಿಶೇಷ. ಅಂದಹಾಗೆ, “ಅವನೇ ಶ್ರೀಮನ್ನಾರಾಯಣ’ ಚಿತ್ರದ ಎರಡನೆಯ ಹಂತದ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಲಿದ್ದು, ಅದಕ್ಕಾಗಿಯೇ ಕಂಠೀರವ ಸ್ಟುಡಿಯೋದಲ್ಲಿ 1980ರ ದಶಕದ ಒಂದು ಪಬ್ ಸೆಟ್ ನಿರ್ಮಿಸಲಾಗಿದೆ. ಈ ಸೆಟ್‌ನಲ್ಲಿ ಒಂದು ಹಾಡು ಮತ್ತು ಫೈಟ್ ಚಿತ್ರೀಕರಣ ನಡೆಯಲಿದೆಯಂತೆ.