ಮಂಡ್ಯ: ಭಾರತ ಬಹುಭಾಷಾ, ವೈವಿಧ್ಯಮಯ ಸಂಸ್ಕೃತಿಯನ್ನು ಒಳಗೊಂಡು ವಿಶ್ವಮಟ್ಟದಲ್ಲಿ ಹೆಸರನ್ನು ಗಳಿಸಿಕೊಂಡಿದೆ. ಇದನ್ನು ಮರೆತಂತಿರುವ ಕೇಂದ್ರ ಸರ್ಕಾರ ಏಕ ದೇಶ, ಏಕ ಭಾಷೆ ಎಂಬ ಘೋಷವಾಕ್ಯದೊಂದಿಗೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಿಕೆ ಮಾಡಲು ಹೊರಟಿರುವುದಕ್ಕೆ ಸಾಹಿತಿಗಳು, ಲೇಖಕರು, ಚಿಂತಕರಿಂದ ತೀವ್ರ ವಿರೋಧ, ಆಕ್ರೋಶ ವ್ಯಕ್ತವಾಗುತ್ತಿದೆ.
ಹಿಂದಿ ಭಾಷೆಯ ಪ್ರಹಾರ: ಹಿಂದಿ ಭಾಷೆಯನ್ನು ಕಲಿಯುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಕಲಿಯಲೇಬೇಕೆಂದು ಒತ್ತಡ ಹೇರುವುದು ಸರಿಯಲ್ಲ. ಜ್ಞಾನ ಸಂಪಾದನೆಗೆ ಯಾವ ಭಾಷೆಯನ್ನು ಬೇಕಾದರೂ ಕಲಿಯಬಹುದು. ಆದರೆ, ಪ್ರಾದೇಶಿಕ ಭಾಷೆಗಳನ್ನು ಕೊಲ್ಲುವ ಪ್ರಯತ್ನಗಳನ್ನು ಎಂದಿಗೂ ನಡೆಸಬಾರದು. ಈಗಾಗಲೇ ಪ್ರಾದೇಶಿಕ ಭಾಷೆಗಳ ಮೇಲೆ ಇಂಗ್ಲಿಷ್ ನಡೆಸುತ್ತಿರುವ ಗದಾಪ್ರಹಾರವನ್ನೇ ತಡೆದುಕೊಳ್ಳಲಾಗುತ್ತಿಲ್ಲ. ಇಂತಹ ಸಂದರ್ಭದಲ್ಲೇ ಹಿಂದಿ ಭಾಷೆಯ ಪ್ರಹಾರ ನಡೆಸುವ ಕೇಂದ್ರದ ಕ್ರಮ ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಪ್ರಾದೇಶಿಕ ಭಾಷಾ ವಿರೋಧಿ ನೀತಿ: ಭಾರತೀಯ ಸಂಸ್ಕೃತಿ, ಪರಂಪರೆಯ ಬಗ್ಗೆ ಉದ್ದುದ್ದ ಭಾಷಣ ಮಾಡುವ ಬಿಜೆಪಿ ನಾಯಕರು ಪ್ರಾದೇಶಿಕ ಭಾಷೆ, ಸಂಸ್ಕೃತಿಯನ್ನು ಮರೆಯುತ್ತಿರುವುದೇಕೆ? ಒಂದೊಂದು ರಾಜ್ಯದ ಭಾಷೆಯ ಹಿನ್ನೆಲೆ, ಇತಿಹಾಸವನ್ನು ತಿಳಿದುಕೊಂಡು ಅವುಗಳನ್ನು ಉಳಿಸಿದಾಗ ಮಾತ್ರ ಆ ನೆಲದ ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಬೇಕೇ ವಿನಃ ನೆಲದ ಭಾಷೆಯೊಂದಿಗೆ ಸಂಸ್ಕೃತಿಯನ್ನು ಸಮಾಧಿ ಮಾಡುವ ಪ್ರಾದೇಶಿಕ ಭಾಷಾ ವಿರೋಧಿ ನೀತಿಯನ್ನು ಸಹಿಸಲು ಸಾಧ್ಯವಿಲ್ಲ. ಎಲ್ಲಾ ಭಾಷೆಗಳನ್ನು ಕಲಿಯುವುದಕ್ಕೆ ಮುಕ್ತ ಸ್ವಾತಂತ್ರ್ಯವಿರಬೇಕು. ವಿವಿಧ ಭಾಷೆಗಳನ್ನು ಆಸೆಪಟ್ಟು ಕಲಿಯಬೇಕೇ ವಿನಃ ಒತ್ತಡ ಹಾಕಿ ಭಾಷೆ ಕಲಿಸುವುದಕ್ಕೆ ಸಾಧ್ಯವೂ ಇಲ್ಲ. ಅದರಿಂದ ಯಾವ ಪ್ರಯೋಜನವೂ ಇಲ್ಲ ಎಂಬ ವಾದ ಮುಂದಿಡುತ್ತಿದ್ದಾರೆ.
ಪ್ರಾದೇಶಿಕ ಭಾಷೆಗಳನ್ನು ಗಟ್ಟಿಗೊಳಿಸಿ: ಕೇಂದ್ರದಲ್ಲಿ ಅಧಿಕಾರ ಸೂತ್ರ ಹಿಡಿದಿರುವ ಸರ್ಕಾರ ಬಹುಭಾಷೆಯನ್ನೊಳಗೊಂಡು ಸಂಸ್ಕೃತಿಯ ವೈವಿಧ್ಯತೆ ತೊರಿಸಬೇಕು. ಅದರಲ್ಲಿ ಏಕತೆಯನ್ನು ಸಾಧಿಸಬೇಕು. ಭಾವನಾತ್ಮಕವಾಗಿ ಬೆದರಿಕೆ ಉಂಟು ಮಾಡುವ ಪ್ರಯತ್ನ ಎಂದಿಗೂ ಸಲ್ಲದು. ಹಿಂದಿ ಬಲವಂತ ಹೇರಿಕೆಯನ್ನು ಕೈಬಿಟ್ಟು ಪ್ರಾದೇಶಿಕ ಭಾಷೆಗಳನ್ನು ಗಟ್ಟಿಗೊಳಿಸುವ ಕಾರ್ಯ ಯೋಜನೆಯನ್ನು ರೂಪಿಸುವ ಕೆಲಸಕ್ಕೆ ಕೇಂದ್ರ ಮುಂದಾಗಬೇಕು ಎನ್ನುವುದು ಅವರ ಆಗ್ರಹವಾಗಿದೆ.
Advertisement
ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಹಿನ್ನೆಲೆ, ಇತಿಹಾಸ, ಸಂಸ್ಕಾರವಿದೆ. ಒಂದು ಭಾಷೆಯನ್ನು ನಾಶ ಮಾಡುವುದು ಎಂದರೆ ಒಂದು ಜನಾಂಗವನ್ನೇ ನಾಶ ಮಾಡಿದಂತೆ. ಇದು ರಾಷ್ಟ್ರಕ್ಕೆ ಮಾಡುವ ಬಹುದೊಡ್ಡ ಮೋಸ ಎಂದು ಕಿಡಿಕಾರಿದ್ದಾರೆ.
Related Articles
Advertisement
ಮಾತೃಭಾಷೆಯಲ್ಲೇ ಶಿಕ್ಷಣ: ಪ್ರಾದೇಶಿಕ ಭಾಷೆಗಳಿಗೆ ಶಕ್ತಿ ತುಂಬುವ ಕೆಲಸಗಳು ನಡೆದಾಗ ಆಯಾ ಭಾಷೆಯಲ್ಲಿ, ಆಯಾ ನೆಲದಲ್ಲಿ ವ್ಯವಹಾರ, ಉದ್ಯೋಗ ಸಂಪಾದಿಸಲು ಸಾಧ್ಯವಾಗುತ್ತದೆ. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಮಾತೃಭಾಷೆಯಲ್ಲೇ ಮಕ್ಕಳಿಗೆ ಶಿಕ್ಷಣ ದೊರಕಿಸಬೇಕು. ಮಾತೃಭಾಷೆಯಲ್ಲಿ ಶಿಕ್ಷಣ ಕಲಿತ ಮಕ್ಕಳಿಗೆ ಉದ್ಯೋಗವಕಾಶಗಳನ್ನು ಮುಕ್ತವಾಗಿ ತೆರೆದಿಟ್ಟು ಅವರನ್ನು ಸ್ವಾಭಿಮಾನಿಗಳಾಗಿ ಬದುಕನ್ನು ಕಟ್ಟಿಕೊಡುವುದಕ್ಕೆ ಯೋಜನೆ ರೂಪಿಸಬೇಕೇ ವಿನಃ ಅಧಿಕಾರದ ಮದದಲ್ಲಿ ಸ್ಥಳೀಯ ಭಾಷೆಗಳನ್ನು ನಾಶ ಮಾಡುವ ಕುತಂತ್ರ ಆಲೋಚನೆ ವ್ಯವಸ್ಥೆಗೆ ಮಾರಕವಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರದ ಹಿಂದಿ ವಾದ ಸರಿಯಲ್ಲ:
ಹಿಂದಿಗಿಂತಲೂ ಪ್ರಾದೇಶಿಕ ಭಾಷೆಗಳು ಸ್ವಂತಿಕೆ ಮೆರೆಯುವ ಶಕ್ತಿಯನ್ನು ಹೊಂದಿವೆ. ಶಾಸ್ತ್ರೀಯ ಗುಣ, ಸಾಹಿತ್ಯ ಪರಂಪರೆಯೊಂದಿಗೆ ಶಬ್ಧ ಸಂಪತ್ತಿನ ಗಣಿಯಿಂದ ತುಂಬಿಕೊಂಡಿವೆ. ಹಿಂದಿಯೇ ಭಾರತದಲ್ಲಿ ಪ್ರಧಾನ ಭಾಷೆಯಾಗಬೇಕು ಎಂಬ ಕೇಂದ್ರ ಸರ್ಕಾರದ ವಾದ ಸರಿಯಲ್ಲ. ಪ್ರತಿಯೊಂದು ರಾಜ್ಯಕ್ಕೂ ಆ ನೆಲದ ಭಾಷೆಯೇ ಯಜಮಾನನಾಗಬೇಕು. ದೇಶೀಯ ಭಾಷೆ ಹೆಸರಿನಲ್ಲಿ ಪ್ರಾದೇಶಿಕ ಭಾಷೆಗಳ ಮೇಲೆ ಸವಾರಿ ಮಾಡುವುದು ಸರಿಯಲ್ಲ. ಪ್ರಾದೇಶಿಕ ಭಾಷೆಗಳ ಉತ್ತಮ ಬಾಂಧವ್ಯದೊಂದಿಗೆ ಸ್ನೇಹಮಯವಾಗಿ ಹಿಂದಿಯನ್ನು ಕಲಿಸಲಿ ಅದು ಸೌಹಾರ್ದದ ಸಂಕೇತವಾಗಿರುತ್ತದೆ. ಆದರೆ, ಏಕ ದೇಶ, ಏಕ ಭಾಷೆ ಎನ್ನುವುದು ಸರ್ವಾಧಿಕಾರಿ ಧೋರಣೆಯಾಗುತ್ತದೆ. ಇದು ಆರೋಗ್ಯಕರವಲ್ಲ.
● ಮಂಡ್ಯ ಮಂಜುನಾಥ್