ಮುಂಬಯಿ: ಹಿಂದಿ ಬಿಗ್ ಬಾಸ್ ನ 16ನೇ ಸೀಸನ್ ಯಶಸ್ವಿಯಾಗಿ ಮುಕ್ತಾಯ ಕಂಡಿದ್ದು, 23 ವರ್ಷದ ಪುಣೆ ಮೂಲದ ರ‍್ಯಾಪರ್ ಎಂಸಿ ಸ್ಟ್ಯಾನ್ ( ಅಲ್ತಾಫ್ ಶೇಕ್) ಬಿಗ್ ಬಾಸ್ ಕಪ್ ಎತ್ತಿದ್ದಾರೆ. ರನ್ನರ್ ಅಪ್ ಆಗಿ ಶಿವ ಠಾಕರೆ ಹೊರಹೊಮ್ಮಿದ್ದಾರೆ.
ಯಾರು ಈ ಎಂಸಿ ಸ್ಟ್ಯಾನ್:? ಎಂಸಿ ಸ್ಟ್ಯಾನ್ ಹೆಸರಿನಿಂದಲೇ ಜನಪ್ರಿಯರಾಗಿರುವ ಅಲ್ತಾಫ್ ಶೇಕ್, ಹುಟ್ಟಿದ್ದು 1999 ರಲ್ಲಿ ಪುಣೆಯ ಬಡ ಮುಸ್ಲಿಂ ಕುಟುಂಬದಲ್ಲಿ. ಓದಿನಲ್ಲಿ ಅಷ್ಟಾಗಿ ಆಸಕ್ತಿ ತೋರಿಸದೆ ಹಾಡು ಹಾಗೂ ರ‍್ಯಾಪಿಂಗ್ ಮಾಡುವುದರಲ್ಲಿ ಹೆಚ್ಚು ದಿನ ಕಳೆಯುತ್ತಿದ್ದ ಅಲ್ತಾಫ್ ತನ್ನ 12 ನೇ ವಯಸ್ಸಿನಲ್ಲಿ ಕವಾಲಿಯನ್ನು ಹಾಡುವ ಮೂಲಕ ಕೆರಿಯರ್ ಆರಂಭಿಸಿದ್ದ.
ಉದ್ದ ಕೂದಲು, ಗಡ್ಡ ಮೀಸೆ ಬಿಟ್ಟು, ಒಂಥರ ಸ್ಟೈಲ್ ಮಾಡಿಕೊಂಡು ಇದ್ದ ಅಲ್ತಾಫನ್ನು ನೋಡಿ ಕುಟುಂಬದವರು ಹಾಗೂ ಅಕ್ಕಪಕ್ಕದವರು ಹೀಯಾಳಿಸುತ್ತಿದ್ದರು. ತಂದೆ – ತಾಯಿಯೂ ಮಗನ ಹಾಡುಗಾರಿಕೆಗೆ ಅಷ್ಟಾಗಿ ಬೆಂಬಲ ನೀಡಿರಲಿಲ್ಲವಾಗಿತ್ತು. ತಾನು ಹಾಡಬೇಕು, ಏನಾದರೂ ಸಾಧಸಬೇಕೆನ್ನುವ ಹಟದೊಂದಿಗೆ ಮುಂಬಯಿನಲ್ಲಿ ಒಂದಷ್ಟು ಜನರ ಮಧ್ಯ ರ‍್ಯಾಪ್ , ಬೀಟ್ ಬಾಕ್ಸಿಂಗ್ ಮಾಡಲು ಹೋಗುತ್ತಿದ್ದರು.
ಇದೇ ವೇಳೆ ಗುಂಪಿನಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದ ಎಮಿವೇ ಬಂಟೈ ಎಂಬ ರ‍್ಯಾಪರ್ ಸೇರಿದಂತೆ ಇತರರು ಸ್ಲಂ ಹುಡುಗ ಅಲ್ತಾಫ್ ನ್ನು ನೋಡಿ ನಗುತ್ತಾರೆ. ಅವಮಾನವನ್ನು ತಾಳಲಾರದೆ ಅಲ್ತಾಫ್ ಕೆಲ ಸಮಯದ ಬಳಿಕ ಅವಮಾನಿಸಿದವರ ವಿರುದ್ಧ ಸಾಹಿತ್ಯ ಬರೆದು 2018 ರಲ್ಲಿ ʼವಾಟ’ ಎನ್ನುವ ಹಾಡನ್ನು ಬರೆಯುತ್ತಾರೆ. ಈ ಹಾಡು 21 ಮಿಲಿಯನ್ ಗೂ ಹೆಚ್ಚಿನ ವೀಕ್ಷಣೆ ಪಡೆದುಕೊಳ್ಳುತ್ತದೆ. ಅವಮಾನಿಸಿವರ ಬಾಯಿ ಮುಚ್ಚುವಂತೆ ಮಾಡಿ ಅಲ್ತಾಫ್ ಶೇಕ್ ʼಎಂಸಿ ಸ್ಟ್ಯಾನ್ʼ ರ‍್ಯಾಪ್ ಜಗತ್ತಿಗೆ ಪರಿಚಯವಾಗುತ್ತಾರೆ.
ವಿವಾದ, ಜೈಲು,ಲಕ್ಷ, ಕೋಟಿಯ ಒಡೆಯ.. : ಬಡ ಕುಟುಂಬದ ಹಿನ್ನೆಲೆಯಲ್ಲಿ ಬಂದರೂ ಎಂಸಿ ಸ್ಟ್ಯಾನ್ ಕಷ್ಟಪಟ್ಟು, ರ‍್ಯಾಪಿಂಗ್ ನಲ್ಲಿ ಏನಾದರೂ ಮಾಡಬೇಕೆನ್ನುವ ಹಟ ತೊಟ್ಟಿದ್ದರು. ತನ್ನ ರ‍್ಯಾಪ್ ನಲ್ಲಿ ಅವಾಚ್ಯ ಶಬ್ದವನ್ನು ಸಾಹಿತ್ಯದಲ್ಲಿ ಬರೆಯುತ್ತಿದ್ದರು. ಇದು ಕೆಲ ವರ್ಗಕ್ಕೆ ಇಷ್ಟವಾಗುತ್ತಿರಲಿಲ್ಲ. ಪ್ರೀತಿಗಿಂತ ಟ್ರೋಲ್ ಗಳನ್ನೇ ಹೆಚ್ಚಾಗಿ ಸ್ವೀಕರಿಸುವ ಹಂತದಲ್ಲಿದ್ದ ಸ್ಟ್ಯಾನ್, ನಡು, ನಡುವೆ ತನ್ನ ಖಡಕ್ ಸಾಹಿತ್ಯದ ರ‍್ಯಾಪ್ ನಿಂದ ಮತ್ತೆ ಗೆಲ್ಲ ತೊಡಗಿದರು. ‘ಬಸ್ತಿ ಕಿ ಹಸ್ತಿ’ ಎನ್ನುವ ರ‍್ಯಾಪ್ ಸ್ಟ್ಯಾನ್ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು.
ಔಜ್ಮಾ ಶೇಖ್ ಎನ್ನುವ ಗರ್ಲ್ ಫ್ರೆಂಡ್ ಸ್ಟ್ಯಾನ್ ಗಿದ್ದಳು. ಇಬ್ಬರ ನಡುವಿನ ಬ್ರೇಕಪ್ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಟ್ರೋಲ್ ಗೆ ಒಳಗಾಗಿತ್ತು. ಸೋಶಿಯಲ್ ಮೀಡಿಯಾದಲ್ಲೇ ಎಂಸಿ ಸ್ಟ್ಯಾನ್ ತನ್ನ ಮಾಜಿ ಗೆಳತಿಗೆ ಬೆದರಿಕೆ ಹಾಕಿದ್ದ, ತನ್ನ ಮೇಲೆ ಎಂಸಿ ಸ್ಟ್ಯಾನ್ ನ ಜನ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಔಜ್ಮಾ ಶೇಖ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಎಂಸಿ ಸ್ಟ್ಯಾನ್ ಜನಪ್ರಿಯ ಹೆಚ್ಚುತ್ತಾ ಹೋದಂತೆ, ಆತನ ದುಬಾರಿ ಜೀವನವೂ ಜನರನ್ನು ಸೆಳೆಯುತ್ತಾ ಹೋಯಿತು. ಆತ ಹಾಕುವ ಶೂಗಳ ಬೆಲೆ 80 ಸಾವಿರ ರೂಪಾಯಿದು. ಆತ ಹಾಕುವ ಸ್ನೇಕ್ ಟೈನ್ ಗೆ ಕೋಟಿ ಬೆಲೆಯಿದೆ. ಆತನ ಜಾಕೆಟ್ ಕೂಡ ಲಕ್ಷಗಟ್ಟಲೆ ಬೆಲೆಯದು. ಆತನ ‘ಅಸ್ಸಿ ಹಜಾರ್ ಕೆ ಜೂತೆʼ ಎನ್ನುವ ಡೈಲಾಗ್ ಗೆ ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ಮಿಮ್ಸ್ ಗಳು ಸಿಗುತ್ತವೆ. ಬಿಗ್ ಬಾಸ್ ಕಾರ್ಯಕ್ರಮ ನೋಡಲು 70 ಸಾವಿರ ರೂ. ಟಿವಿಯನ್ನು ಮನೆಗೆತಂದಿದ್ದಾರೆ ಎಂದು ಸ್ಟ್ಯಾನ್ ಹೇಳಿದ್ದಾರೆ.
ಹಾಡು/ ಸ್ಟೈಲ್ ಗಳಿಂದ ಭಾರೀ ಫೇಮಸ್: ದೇಶಿ ಸಾಹಿತ್ಯದಲ್ಲಿ ಮೂಡಿ ಬಂದಿರುವ ಎಂಸಿ ಸ್ಟ್ಯಾನ್ ಅವರ ಹಾಡುಗಳಿಗೆ ಯುವ ಜನರ ದೊಡ್ಡ ಕೇಳುಗ ವರ್ಗವಿದೆ. 6 ಮಿಲಿಯನ್ ಗೂ ಹೆಚ್ಚಿನ ಸಬ್ ಸ್ಕೈಬರ್ಸ್ ಈತನ ಯೂಟ್ಯೂಬ್ ಚಾನೆಲ್ ಗೆ ಇದೆ. ʼವಾಟʼ, ‘ಖುಜಾ ಮತ್ʼ,’ಲೋಕಿʼ, ‘ಅಸ್ತಗ್ಫಿರುಲ್ಲಾ’, ʼಏಕ್ ದಿನ್ ಪ್ಯಾರ್ʼ, ʼಸ್ನೇಕ್ʼ ಹೀಗೆ 20 ಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿದ್ದಾರೆ.
ಮೈಯೆಲ್ಲ ಟ್ಯಾಟೋ, ಚೈನ್, ಗ್ಲಾಸ್ ಹಾಕಿಕೊಂಡು ತನ್ನದೇ ಸ್ಟೈಲ್ ನಲ್ಲಿ ಮಿಂಚುವ ಎಂಸಿ ಸ್ಟ್ಯಾನ್ ಬಿಗ್ ಬಾಸ್ 16 ನೇ ಸೀಸನ್ ನಲ್ಲಿ ವಿನ್ನರ್ ಆಗಿದ್ದಾರೆ. 31 ಲಕ್ಷ ರೂ., ಕಾರು ಪಡೆದುಕೊಂಡಿದ್ದಾರೆ
.
ಜನಪ್ರಿಯ ಟಿವಿ ನಟಿ ಪ್ರಿಯಾಂಕಾ ಚಾಹರ್ ಚೌಧರಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ನಟ ಶಾಲಿನ್ ಭಾನೋಟ್ ಅವರೊಂದಿಗೆ ಅರ್ಚನಾ ಗೌತಮ್ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.
-ಸುಹಾನ್ ಶೇಕ್