ಶಿಮ್ಲಾ: ಹಿಮಾಚಲ ಪ್ರದೇಶ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಧುರೀಣ ವೀರಭದ್ರ ಸಿಂಗ್ ಅವರು ಇಂದು ಮುಂಜಾನೆ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಬೆಟ್ಟ ಗುಡ್ಡಗಳ ರಾಜ್ಯದ ಈ ಹಿರಿಯ ನಾಯಕ ಇಂದು (ಜು.8) ಮುಂಜಾನೆ 3.40ಕ್ಕೆ ಇಂದಿರಾ ಗಾಂಧಿ ಮೆಡಿಕಲ್ ಕಾಲೇಜಿನಲ್ಲಿ ನಿಧನರಾಗಿದ್ದಾರೆ. ಸೋಮವಾರ ವೀರಭದ್ರ ಸಿಂಗ್ ಅವರಿಗೆ ಹೃದಯಾಘಾತವಾಗಿತ್ತು. ಅವರಿಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಇದನ್ನೂ ಓದಿ:30 ವರ್ಷಗಳ ಹಿಂದೆ ತಂದೆ ಮಾಧವರಾವ್ ನಿರ್ವಹಿಸಿದ್ದ ಖಾತೆಯನ್ನೇ ಪಡೆದ ಜ್ಯೋತಿರಾದಿತ್ಯ ಸಿಂಧಿಯಾ
ವೀರಭದ್ರ ಸಿಂಗ್ ಅವರು ತನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಒಂಬತ್ತು ಬಾರಿ ಶಾಸಕನಾಗಿ, ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಅದಲ್ಲದೆ ಆರು ಬಾರಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾದ ಹೆಗ್ಗಳಿಗೆ ವೀರಭದ್ರ ಸಿಂಗ್ ಅವರದ್ದು.
ಕಳೆದ ಎಪ್ರಿಲ್ 12ರಂದು ಅವರಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಇದಾದ ಬಳಿಕ ಎರಡು ತಿಂಗಳ ಬಳಿಕ ಅಂದರೆ ಜೂನ್ 11ರಂದು ಮತ್ತೆ ಕೋವಿಡ್ ಸೋಂಕು ದೃಢವಾಗಿತ್ತು.