ನವ ದೆಹಲಿ: ಹಿಮಾಚಲ ಪ್ರದೇಶದಲ್ಲಿ ಭೂಕುಸಿತದ ಸರಣಿ ಮುಂದುವರಿದಿದೆ. ಶುಕ್ರವಾರ ಬೆಳಗ್ಗೆ ನಹಾನ್ ಪಟ್ಟಣದ ಬದ್ವಾಸ್ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತಕ್ಕೆ, ಗುಡ್ಡದ ಬದಿಯಿದ್ದ ಇಡೀ ರಸ್ತೆಯೇ ಕುಸಿದುಬಿದ್ದಿದೆ. ಬೆಚ್ಚಿ ಬೀಳಿಸುವಂಥ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭೂಕುಸಿತದ ತೀವ್ರತೆಗೆ ಗುಡ್ಡ ಕುಸಿದು ಬಿದ್ದ ಕಾರಣ, ಹಿಮಾಚಲದ ಪವೋಂತಾ ಸಾಹಿಬ್ ಮತ್ತು ಶಿಲ್ಲಾಯಿ-ಹಟ್ಕೊರಿ ಎಂಬ ಎರಡು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸುಮಾರು 100 ಮೀಟರ್‌ನಷ್ಟು ಭಾಗ ಏಕಾಏಕಿ ಕುಸಿದು, ಕ್ಷಣಮಾತ್ರದಲ್ಲಿ ನಾಮಾವಶೇಷವಾಗಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಭೂಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ 707ರ ಸಂಪರ್ಕ ಕಡಿತಗೊಂಡಿದೆ.
ಗುರುವಾರ ಸಂಜೆಯೂ ಇದೇ ಪ್ರದೇಶದಲ್ಲಿ ಪಿಕಪ್ ವ್ಯಾನ್ ವೊಂದು ಕಮರಿಗೆ ಬಿದ್ದು, ಮಹಿಳೆಯೊಬ್ಬರು ಮೃತಪಟ್ಟು, 9 ಮಂದಿ ಗಾಯಗೊಂಡಿದ್ದರು.
ಕಳೆದ ಕೆಲವು ದಿನಗಳಿಂದಲೂ ಈ ಪ್ರದೇಶದಲ್ಲಿ ಸರಣಿ ಭೂಕುಸಿತ ಪ್ರಕರಣಗಳು, ದಿಢೀರ್ ಪ್ರವಾಹಗಳು ಸಂಭವಿಸುತ್ತಲೇ ಇವೆ.