Advertisement

ಉತ್ತರದಲ್ಲಿ ಮೇಘ ಸ್ಫೋಟ: ಐವರು ಸಾವು

02:18 AM Jul 07, 2022 | Team Udayavani |

ಶಿಮ್ಲಾ: ದೇಶದಲ್ಲಿ ಪ್ರಸಕ್ತ ಸಾಲಿನ ಮುಂಗಾರಿನ ಪ್ರಕೋಪ ಬಿರುಸಾಗಿಯೇ ಮುಂದುವರಿದಿದೆ. ಹಿಮಾಚಲ ಪ್ರದೇಶದ ಕುಲು ಮತ್ತು ಶಿಮ್ಲಾದಲ್ಲಿ ಮೇಘ ಸ್ಫೋಟದಿಂದ ಉಂಟಾದ ಹಠಾತ್‌ ಪ್ರವಾಹದಿಂದಾಗಿ ಐವರು ಅಸುನೀಗಿದ್ದು, ಮತ್ತೆ ಐವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಎಲ್ಲರೂ ಕೊನೆಯುಸಿರೆಳೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Advertisement

ವಿದ್ಯುತ್‌ ಉತ್ಪಾದನ ಕೇಂದ್ರದಲ್ಲಿ ಕೆಲಸ ಮಾಡುವ 25 ಮಂದಿಯನ್ನು ಭದ್ರತಾ ಸಿಬಂದಿ ರಕ್ಷಿಸಿದ್ದಾರೆ. ಶಿಮ್ಲಾ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 5ರಲ್ಲಿ ಸಂಚಾರಕ್ಕೆ ಅಡ್ಡಿ ಯಾಗಿದೆ. ಬಿರುಗಾಳಿಯಿಂದಾಗಿ ವಿದ್ಯುತ್‌ ಮತ್ತು ದೂರವಾಣಿ ಸಂಪರ್ಕದಲ್ಲೂ ವ್ಯತ್ಯಯ ಉಂಟಾಗಿದೆ. ಶಿಮ್ಲಾ ನಗರದ ಹೊರವಲಯದಲ್ಲಿ ಉಂಟಾದ ಭೂಕುಸಿತದಿಂದ ಬಾಲಕಿ ಮೃತಪಟ್ಟಿದ್ದಾಳೆ. ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಲು ಜಿಲ್ಲೆಯಲ್ಲಿ ಪ್ರಮುಖ ನದಿ ಪಾತ್ರದ ಪ್ರದೇಶಗಳಲ್ಲಿ ಎಲ್ಲ ರೀತಿಯ ಜಲಕ್ರೀಡೆಗಳನ್ನು ನಿಷೇಧಿಸಿದೆ. ಜಿಲ್ಲೆಯಲ್ಲಿ ಭೂಕುಸಿತ ದಿಂದಾಗಿ ಇಬ್ಬರು ಗಾಯಗೊಂಡಿದ್ದಾರೆ. ಮಹಾರಾಷ್ಟ್ರ, ಗುಜರಾತ್‌, ಉತ್ತರಾಖಂಡ, ರಾಜಸ್ಥಾನ ಗಳಲ್ಲಿಯೂ ಧಾರಾಕಾರ ಮಳೆ ಯಾಗಿದೆ.

ಬೀದರ್‌ನಲ್ಲಿ
ಕೊಚ್ಚಿ ಹೋದ ಮಹಿಳೆ
ಹಳ್ಳ ದಾಟುತ್ತಿದ್ದ ಸುಮನಬಾಯಿ ಬಾಬು ರೆಡ್ಡಿ ಖಂದಾಡೆ (48) ಕೊಚ್ಚಿ ಹೋಗಿರುವ ಘಟನೆ ಔರಾದ್‌ ತಾಲೂಕಿನ ನಾಗೂರ (ಬಿ) ಗ್ರಾಮ ದಲ್ಲಿ ನಡೆದಿದೆ. ಉತ್ತರ ಕನ್ನಡದಲ್ಲಿ ಬುಧವಾರ ಮಧ್ಯಾಹ್ನದ ಬಳಿಕ ಭಾರೀ ಮಳೆ ಸುರಿದಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಅಬ್ಬರ ಮುಂದು ವರಿ ದಿದ್ದು, ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲಿ ಶಾಲೆಗಳಿಗೆ ರಜೆ ವಿಸ್ತರಿಸಿ ಜಿಲ್ಲಾಧಿಕಾರಿ ಡಾ| ಸೆಲ್ವಮಣಿ ಆದೇಶಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂರು ದಿನಗಳಿಂದ ಅಬ್ಬರಿಸಿದ ಮಳೆ ಕೊಂಚ ತಗ್ಗಿದೆ. ಈ ನಡುವೆ, ತೋಡಿನಲ್ಲಿ ಕೊಚ್ಚಿ ಹೋಗಿರುವ ಹೊಸಪೇಟೆಯ ಬಾಲಕಿ ಸುಪ್ರೀತಾಳಿಗಾಗಿ ಶೋಧ ಮುಂದುವರಿದಿದೆ.

ದ.ಕ, ಉಡುಪಿ, ಕೊಡಗಿನಲ್ಲಿ ಶಾಲಾ – ಕಾಲೇಜುಗಳಿಗೆ ಇಂದು ರಜೆ
ಮಂಗಳೂರು/ಉಡುಪಿ/ಮಡಿಕೇರಿ/ಕಾಸರಗೋಡು: ಕರಾವಳಿಯಲ್ಲಿ ರೆಡ್‌ ಅಲರ್ಟ್‌ ಘೋಷಣೆಯಾಗಿದ್ದು, ಗುರುವಾರ ಮಳೆ ಪ್ರಭಾವ ಹೆಚ್ಚುವ ನಿರೀಕ್ಷೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯಲ್ಲಿ ಅಂಗನವಾಡಿಯಿಂದ ಸ್ನಾತಕೋತ್ತರ ಪದವಿ ವರೆಗಿನ ತರಗತಿಗಳಿಗೆ ರಜೆ ಘೋಷಿಸಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ನೆರೆಯ ಕಾಸರಗೋಡಿನಲ್ಲಿ ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಕಾಲೇಜುಗಳಲ್ಲಿ ತರಗತಿ ನಡೆಯಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next