Advertisement

ಹಿಮಾಚಲ ಬಸ್‌ ದುರಂತ: ಅನೇಕರ ಜೀವ ಉಳಿಸಿ ಹೀರೋ ಆದ ಬಾಲಕ

04:22 PM Apr 10, 2018 | udayavani editorial |

ಹೊಸದಿಲ್ಲಿ : ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ನೂರ್‌ಪುರ್‌ ಎಂಬಲ್ಲಿ  ನಿನ್ನೆ ಸೋಮವಾರ ಮಧ್ಯಾಹ್ನ  ಶಾಲಾ ಬಸ್ಸೊಂದು ಇನ್ನೂರು ಅಡಿ ಆಳದ ಕಮರಿಗೆ ಉರುಳಿ ಬಿದ್ದು ಸಂಭವಿಸಿದ ಭೀಕರ ದುರಂತದಲ್ಲಿ 27 ಮಕ್ಕಳ ಸಹಿತ ಒಟ್ಟು 30 ಮಂದಿ ದಾರುಣವಾಗಿ ಮೃತಪಟ್ಟ ಘಟನೆಯಲ್ಲಿ  10 ವರ್ಷದ ರಣಬೀರ್‌ ಸಿಂಗ್‌ ತೋರಿದ ಧೈರ್ಯ ಸಾಹಸದಿಂದ ಗ್ರಾಮಸ್ಥರು ಮತ್ತು ಯುವಕರಿಗೆ ಅಪಘಾತದ ಮಾಹಿತಿ ಬೇಗನೆ ದೊರಕಿ ಅವರು ರಕ್ಷಣಾ ಕಾರ್ಯಕ್ಕೆ ಧುಮುಕಲು ಮತ್ತು ಅನೇಕ ಮಕ್ಳಳ ಜೀವ ಉಳಿಯಲು ಸಾಧ್ಯವಾಯಿತು. 

Advertisement

40ಕ್ಕೂ ಅಧಿಕ ಮಕ್ಕಳಿದ್ದ ಬಸ್ಸಿನಲ್ಲಿ ಎಲ್ಲರೂ 12ರ ಕೆಳಹರೆಯದವರಾಗಿದ್ದರು. ಅವರೆಲ್ಲರೂ ರಾಮ್‌ ಸಿಂಗ್‌ ಪಠಾಣಿಯಾ ಮೆಮೋರಿಯಲ್‌ ಶಾಲೆಯ ಮಕ್ಕಳು.

ಈ ಮಕ್ಕಳಿಂದ ತುಂಬಿದ್ದ  ನತದೃಷ್ಟ ಬಸ್ಸು ನೂರ್‌ಪುರ – ಚಂಬಾ ರಸ್ತೆಯಲ್ಲಿ ಗುರ್ಚಾಲ್‌ ಗ್ರಾಮದ ಸಮೀಪ ಅತ್ಯಂತ ಹದಗೆಟ್ಟ, ಕಡಿದಾದ ತಿರುವೊಂದು ಇದ್ದು ಇದು ಅನೇಕ ಸಾವು ನೋವುಗಳ ಅಪಘಾತಗಳನ್ನು ಕಂಡಿರುವ ಮಾರಣಾಂತಿಕ ತಾಣವಾಗಿದೆ. 

ಈ ತಾಣದಲ್ಲಿ ಬೈಕ್‌ ಒಂದಕ್ಕೆ ಬಸ್ಸು ಢಿಕ್ಕಿಯಾಗುವುದನ್ನು ತಪ್ಪಿಸಲು 67ರ ಹರೆಯದ ಬಸ್‌ ಚಾಲಕ ಮದನ್‌ ಲಾಲ್‌ ಯತ್ನಿಸಿ ಬಸ್ಸನ್ನು ತಿರುವಿನಲ್ಲಿ ಸಾಗಿಸುವಾಗ ನಿಯಂತ್ರಣ ಕಳೆದುಕೊಂಡ. ಪರಿಣಾಮವಾಗಿ ಬಸ್ಸು 200 ಅಡಿ ಆಳದ ಕಮರಿಗೆ ಉರುಳಿ ಬಿತ್ತು. 

ಆಗ ಬಸ್ಸಿನ ಕಿಟಕಿಯಿಂದ ಹೊರಗೆಸೆಯಲ್ಪಟ್ಟು ದೇಹ ತುಂಬ ಗಾಯಗಳಾಗಿದ್ದ  ರಣಬೀರ್‌ ಮತ್ತು ಅವನಿ ಎಂಬ ಹುಡುಗಿ ಮರದ ಗೆಲ್ಲನ್ನು ಹಿಡಿದುಕೊಂಡು ಜೀವ ಉಳಿಸಿಕೊಂಡರು. ಅವನಿಯನ್ನು ರಣಬೀರ್‌ ಕಷ್ಟಪಟ್ಟು ಇಳಿಸಿ ಆಕೆ ಮತ್ತೆ ಪ್ರಪಾತಕ್ಕೆ ಬೀಳದಂತೆ ನೋಡಿಕೊಂಡ. ಅದಾಗಿ ಅವರು ಕಷ್ಟಪಟ್ಟು ಸುಮಾರು 50 ಅಡಿ ಎತ್ತರದ ಜಾರು ಹಾದಿಯ ಬೆಟ್ಟವನ್ನು ಏರಿ ಮುಖ್ಯರಸ್ತೆಗೆ ಸಾಗಿ ಬಂದು ಅಲ್ಲಿ ಸಾಗುತ್ತಿದ್ದ ಜನರನ್ನು, ವಾಹನಗಳನ್ನು ತಡೆದು ಅಪಘಾತದ ಮಾಹಿತಿ ನೀಡಿದರು.

Advertisement

ವಿಷಯ ಗೊತ್ತಾದ ಒಡನೆಯೇ ಸ್ಥಳೀಯರು, ಮುಖ್ಯವಾಗಿ ಯುವಕರು 30 ನಿಮಿಷಗಳ ಒಳಗೆ ಬಸ್ಸು ಉರುಳಿ ಬಿದ್ದ  ಪ್ರಪಾತದ ತಾಣವನ್ನು ತಲುಪಿ ರಕ್ಷಣಾ ಕಾರ್ಯಕ್ಕೆ ಇಳಿದರು.  ಇವರ ಪ್ರಯತ್ನದಿಂದಾಗಿ ಹಲವು ಮಕ್ಕಳ ಜೀವ ಉಳಿಯಿತು. 

ಈ ವರೆಗೆ ಹಲವಾರು ಗಂಭೀರ ಅಪಘಾತಗಳನ್ನು ಕಂಡಿರುವ ಈ ಹದಗೆಟ್ಟ ರಸ್ತೆ ಮತ್ತು ತಿರುವನ್ನು ಅಧಿಕಾರಿಗಳು ಈ ವರೆಗೂ ಸರಿಪಡಿಸಿಲ್ಲ; ನಾವು ಅನೇಕ ಬಾರಿ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರೊಬ್ಬರು ಮಾಧ್ಯಮಕ್ಕೆ ಹೇಳಿದರು.

ಈ ಭೀಕರ ಅವಘಡದಲ್ಲಿ ಸತ್ತಿರುವ ಅನೇಕ ಮಕ್ಕಳು ಪರಸ್ಪರ ಸಂಬಂಧಿಕರಾಗಿದ್ದಾರೆ.ಒಂದೇ ಕುಟುಂಬದ ಇಬ್ಬರು ಸಹೋದರರ ನಾಲ್ವರು ಮಕ್ಕಳು ಅಸುನೀಗಿದ್ದಾರೆ. ನರೇಶ್‌ ಕುಮಾರ್‌ ಎಂಬವರ ಪುತ್ರ ಮತ್ತು ಪುತ್ರಿ ಅಸುನೀಗಿದ್ದಾರೆ. ಮೃತ ಮಕ್ಕಳ ದೇಹಗಳು ಚೆಲ್ಲಾಪಿಲ್ಲಿ ಹರಡಿಕೊಂಡು ಬಿದ್ದ ತಾಣವನ್ನು ಕಂಡು ಅನೇಕ ತಂದೆ – ತಾಯಂದಿರು ದುಃಖ ತಾಳಲಾರದೆ ಕುಸಿದು ಬಿದ್ದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next