Advertisement

ಹಿಮಾಚಲ ಪ್ರದೇಶ: ಸುಖ್ವಿಂದರ್ ಸಿಂಗ್ ಸುಖು, ಅಗ್ನಿಹೋತ್ರಿ ಸೇರಿ ಕಾಂಗ್ರೆಸ್ ಹಿರಿಯ ನಾಯಕರು ಮುನ್ನಡೆ

03:03 PM Dec 08, 2022 | Team Udayavani |

ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಹಲವು ಹಿರಿಯ ಕಾಂಗ್ರೆಸ್ ನಾಯಕರು ಮುನ್ನಡೆ ಸಾಧಿಸಿದ್ದಾರೆ. ಈ ನಾಯಕರಲ್ಲಿ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಸುಖ್ವಿಂದರ್ ಸಿಂಗ್ ಸುಖು, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮುಖೇಶ್ ಅಗ್ನಿಹೋತ್ರಿ, ಹಿರಿಯ ನಾಯಕ ಸುಧೀರ್ ಶರ್ಮಾ ಮತ್ತು ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಸೇರಿದ್ದಾರೆ. ಇದೇ ವೇಳೆ ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಪ್ರತಿಭಾ ಸಿಂಗ್ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಕನಿಷ್ಠ 40-42 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದ್ದಾರೆ.

Advertisement

‘ಫಲಿತಾಂಶಗಳು ಕಾಂಗ್ರೆಸ್ ಪರವಾಗಿ ಬರಲಿದ್ದು, ಕಾಂಗ್ರೆಸ್ ಮುಂದಿನ ಸರ್ಕಾರ ರಚಿಸಲಿದೆ ಎಂಬ ವಿಶ್ವಾಸವಿದೆ’ ಎಂದರು.

ಮಧ್ಯಾಹ್ನದ ವೇಳೆಗೆ  ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾದ ಸುಖು ಅವರು ನಾದೌನ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ವಿರುದ್ಧ 4903 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಖು ಅವರು ವಿಜಯ್ ಕುಮಾರ್ ಅಗ್ನಿಹೋತ್ರಿ ಅವರನ್ನು 2,349 ಮತಗಳಿಂದ ಸೋಲಿಸಿದ್ದರು.

ಹರೋಲಿಯಿಂದ ಮುಖೇಶ್ ಅಗ್ನಿಹೋತ್ರಿ ಅವರು ಬಿಜೆಪಿ ಅಭ್ಯರ್ಥಿ ರಾಮ್ ಕುಮಾರ್ ಅವರಿಗಿಂತ 3247 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಲ್ಲಿ ಅಗ್ನಿಹೋತ್ರಿ ಅವರ ಹೆಸರೂ ಸೇರಿದೆ.

ಐಎನ್‌ಸಿಯ ಸುಧೀರ್ ಶರ್ಮಾ ಅವರು ಧರ್ಮಶಾಲಾದಲ್ಲಿ ಬಿಜೆಪಿಯ ರಾಕೇಶ್ ಕುಮಾರ್ ವಿರುದ್ಧ 2543 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

Advertisement

ಶಿಮ್ಲಾ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ವಿಕ್ರಮಾದಿತ್ಯ ಸಿಂಗ್ ಅವರು ಬಿಜೆಪಿಯ ರವಿಕುಮಾರ್ ಮೆಹ್ತಾ ಅವರಿಗಿಂತ ಸುಮಾರು 11,000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ: ಗುಜರಾತ್ ನಲ್ಲಿ ಬಿಜೆಪಿ ಅಲೆ : ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿಗೆ ಸೋಲು

Advertisement

Udayavani is now on Telegram. Click here to join our channel and stay updated with the latest news.

Next