ಹಾಡೋದಕ್ಕೆ ಒಂದು ಚಾನ್ಸ್ ಕೊಡು ಅಂತ ಕೇಳುತ್ತಲೇ ಇದ್ದರಂತೆ ರಘು ದೀಕ್ಷಿತ್. ಆದರೆ, ಬಿ.ಜೆ. ಭರತ್ ಅದ್ಯಾಕೋ ಮನಸ್ಸು ಮಾಡಿರಲಿಲ್ಲ. ಕೊನೆಗೊಂದು ಹಾಡಿಗೆ ರಘು ವಾಯ್ಸ ಬೇಕು ಅಂತನಿಸಿತಂತೆ. ಹೋಗಿ ಅವರಿಂದ ಆ ಹಾಡನ್ನು ಹಾಡಿಸಿದ್ದಾರೆ. ಭರತ್ ನಿರ್ದೇಶನದಲ್ಲಿ ಒಂದು ಹಾಡು ಹಾಡಿರುವ ರಘು ದೀಕ್ಷಿತ್‌ಗೆ ಭಯಂಕರ ಖುಷಿಯಾಗಿರುವುದಷ್ಟೇ ಅಲ್ಲ, “ನಿಂಗೆ ಅಡ್ಡ ಬಿದ್ದೆ ಮಾದೇಸಾ, ನಿನ್ ಹೆಸ್ರೇ ನಂಗೆ ಉಪದೇಸಾ …’ ಎಂಬರ್ಥದಲ್ಲಿ ಥ್ಯಾಂಕ್ಸ್ ಹೇಳಿದರು.
ಅಂಥದ್ದೊಂದು ಕ್ಷಣಕ್ಕೆ ಸಾಕ್ಷಿಯಾಗಿದ್ದು “ಏಪ್ರಿಲ್‌ನಲ್ಲಿ ಹಿಮಬಿಂದು’ ಎಂಬ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. ಏಪ್ರಿಲ್‌ಗೂ ಹಿಮಬಿಂದುವಿಗೂ ಏನು ಸಂಬಂಧ ಎಂಬ ಪ್ರಶ್ನೆ ಸಹಜ. ಆದರೆ, ಈ ಪ್ರಶ್ನೆಗೆ ಉತ್ತರಿಸಲಿಲ್ಲ ನಿರ್ದೇಶಕರಾದ ಶಿವ್ ಮತ್ತು ಜಗನ್. ಅಂಥದ್ದೊಂದು ಪ್ರಶ್ನೆಗೆ ಉತ್ತರಿಸುವ ವೇದಿಕೆಯೂ ಅದಾಗಿರಲಿಲ್ಲ ಎನ್ನಿ. ಏಕೆಂದರೆ, ಅದು ಚಿತ್ರದ ಹಾಡಿಯೋ ಬಿಡುಗಡೆ ಸಮಾರಂಭ. ವೇದಿಕೆಯ ಮೇಲೆ ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ, ರಘು ದೀಕ್ಷಿತ್, ದತ್ತಣ್ಣ, “ಸಿದ್ಲಿಂಗು’ ಶ್ರೀಧರ್ ಮುಂತಾದವರು ಇದ್ದರು. ಹಾಗಾಗಿ ಅವರು ಮಾತಾಡಲಿ, ಇನ್ನೊಮ್ಮೆ ನಾವು ಮಾತಾಡುವ ಎಂದು ಬಿಟ್ಟುಬಿಟ್ಟರು ಶಿವ್-ಜಗನ್.
ಮೊದಲಿಗೆ ಮಾತನಾಡಿದ್ದು ಹಿರಿಯರಾದ ಎಚ್.ಎಸ್. ವೆಂಕಟೇಶಮೂರ್ತಿ. ಅವರ ಕವಿತೆಯೊಂದನ್ನು ಇಲ್ಲಿ ಹಾಡಾಗಿ ಬಳಸಿಕೊಳ್ಳಲಾಗಿದೆ. ಈ ಹಿಂದೆಯೇ ಆ ಹಾಡು ಜನಪ್ರಿಯವಾಗಿದೆ. ಈಗ ಅದನ್ನು ಬೇರೆ ರಾಗದಲ್ಲಿ ತಂದಿದ್ದಾರೆ ವೆಂಕಟೇಶಮೂರ್ತಿ. “ಇದೊಂದು ಜನಪ್ರಿಯವಾಗಿತ್ತು. ಈಗ ಭರತ್ ಕೈಲಿ ಮತ್ತೆ ಸಿಗುತ್ತೆ ಅಂತ ಅಂದುಕೊಂಡಿರಲಿಲ್ಲ. ಈ ಹಾಡು ನೋಡಿ, ಕಣ್ಣಿನಿಂದ ಎರಡು ಹನಿ ಬಿಂದುಗಳು ಬಿದ್ದರೆ, ಆ ಯಶಸ್ಸು ಭರತ್‌ಗೆ ಸೇರಬೇಕು. ಹಾಡು ಕೇಳಿ, ನೋಡಿ ರೋಮಾಂಚನವಾಯಿತು. ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿವೆ. ಕಮರ್ಷಿಯಲ್ ಸಿನಿಮಾಗಳೆಂಬ ಗೊಂದಲವಿಲ್ಲದೆ ಒಳ್ಳೆಯ ಪ್ರಯತ್ನಗಳಾಗುತ್ತಿವೆ. ಅದಕ್ಕೆ ನಾವು ಯುವಕರಿಗೆ ಆಭಾರಿಯಾಗಿರಬೇಕು. ನಾವು ಮಾಡಲಾಗದ್ದನ್ನು ಅವರು ಮಾಡುತ್ತಿರುವುದಕ್ಕೆ ಥ್ಯಾಂಕ್ಸ್ ಹೇಳಬೇಕು’ ಎಂದರು.
ಚಿತ್ರದಲ್ಲೊಂದು ಸನ್ನಿವೇಶಕ್ಕೆ ಈ ಪದ್ಯ ಸೂಕ್ತ ಎಂದನಿಸಿತಂತೆ ಭರತ್‌ಗೆ. ಅದೇ ಕಾರಣಕ್ಕೆ, ಅದನ್ನು ಬಳಸಿಕೊಳ್ಳುವುದಕ್ಕೆ ವೆಂಕಟೇಶಮೂರ್ತಿ ಅವರ ಅನುಮತಿ ಕೇಳಿದರಂತೆ. ವೆಂಕಟೇಶಮೂರ್ತಿ ಅವರು ಪದ್ಯ ಬಳಸಿಕೊಳ್ಳುವುದಕ್ಕೆ ಅನುಮತಿ ಕೊಟ್ಟಿದ್ದಕ್ಕೆ ಅವರಿಗೆ ಧನ್ಯವಾದ ಸಲ್ಲಿಸಿದರು. ಇನ್ನು ಅಮೇರಿಕನ್ ಫೋಕ್ ಶೈಲಿಯಲ್ಲಿ ಒಂದು ಹಾಡು ಮಾಡಬೇಕು ಎಂಬಾಸೆ ಇತ್ತಂತೆ. ಅದು ಈ ಚಿತ್ರದಲ್ಲಿ ಈಡೇರಿರುವುದಷ್ಟೇ ಅಲ್ಲ, ಆ ಹಾಡಿಗೆ ರಘು ದೀಕ್ಷಿತ್ ದನಿಯಾಗಿದ್ದಾರೆ ಎಂದು ಖುಷಿಪಟ್ಟರು.
“ಏ ಇಂಥ ಸಮಾರಂಭಕ್ಕೆಲ್ಲಾ ಕರೀಬೇಡ್ರೋ, ನಾನೇನು ಮಾಡೋಕಿರುತ್ತೆ?’ ಅಂತ ಕೇಳಿದ್ದರಂತೆ ದತ್ತಣ್ಣ. ಆದರೆ, ಚಿತ್ರದ ಹೀರೋ ಅವರೇ. ಅವರನ್ನ ಬಿಡೋಕ್ಕಾಗತ್ತಾ? ಸಮಾರಂಭಕ್ಕೆ ಕರೆಯುವುದಷ್ಟೇ ಅಲ್ಲ, ವೇದಿಕೆ ಮೇಲೆ ಕೂರಿಸಿ, ಕೈಗೆ ಮೈಕು ಕೊಡಲಾಗಿತ್ತು ಅವರು. ಮೊದಲು ಚಿತ್ರದಲ್ಲಿ ಹಾಡೇ ಇರಲಿಲ್ಲವಂತೆ. ಈಗ ನೋಡಿದರೆ ಸಿಡಿಯಲ್ಲಿ ಮೂರು ಹಾಡುಗಳಿವೆ. ಅದನ್ನೆಲ್ಲಿ ತುರುಕಿದ್ದಾರೋ ಎಂಬ ಭಯವಿತ್ತಂತೆ. ಹಾಡು ನೋಡಿದ ಮೇಲೆ ಭಯ ಹೋಯ್ತು ಎಂದರು ಅವರು. ಆ ನಂತರ ಮಾತಾಡೋಕೆ ಏನಿಲ್ಲ ಎಂದವರೇ, “ಏಪ್ರಿಲ್‌ನಲ್ಲಿ ಹಿಮಬಿಂದು’ ಎಂಬ ಹೆಸರು ಹೇಗೆ ಸಿಕ್ಕಿತು ಎಂದು ವಿವರವಾಗಿಯೇ ಹೇಳಿದರು. ಅವರ ಮಾತಾಗುತ್ತಿದ್ದಂತೆಯೇ ಸಮಾರಂಬವೂ ಮುಗಿಯಿತು.