ಬೈಂದೂರು: ಭಾರೀ ಮಳೆಯಿಂದಾಗಿ ಬೈಂದೂರು ಸಮೀಪದ ಒತ್ತಿನೆಣೆಯಲ್ಲಿ ಭಾನುವಾರ ಮತ್ತೆ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿದ ಪರಿಣಾಮ 2 ಗಂಟೆಗೂ ಅಧಿಕ ಕಾಲ ರಸ್ತೆ ತಡೆ ಉಂಟಾಗಿ ಸಂಚಾರ ಸ್ಥಗಿತವಾಯಿತು.
ಭಾನುವಾರ ಮುಂಜಾನೆ ವೇಳೆ ಹೆದ್ದಾರಿ ಬದಿಯಿಂದ ಗುಡ್ಡ ಕುಸಿದು ಬಿದ್ದು ರಸ್ತೆ ಸಂಪೂರ್ಣ ಮಣ್ಣಿನಿಂದಾವೃತವಾಯಿತು. ಬಳಿಕ ಬದಲಿ ರಸ್ತೆ ನಿರ್ಮಾಣ ಮಾಡಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಎರಡು ದಿಬ್ಬಗಳು ಕುಸಿದು ಬಿದ್ದಿದ್ದು.ಹೆದ್ದಾರಿಯ ಮೇಲೆ ಮಳೆ ನೀರುಹೊಳೆಯಾಗಿ ಹರಿಯುತ್ತಿರುವ ಕಾರಣ ಅಸಾಧ್ಯವಾದ ತೆರವು ಕಾರ್ಯ.ಗುಡ್ಡ ಕುಸಿತದಿಂದಾಗಿ 2 ಕೀ.ಮಿ ವರೆಗೆ ವಾಹನಗಳು ಸಾಲುಗಟ್ಟಿ ನಿಂತು ಪರದಾಡಬೇಕಾಯಿತು. ಜೆಸಿಬಿಗಳ ಮೂಲಕ ಮಣ್ಣು ತೆರವು ಮಾಡಲು ಪರದಾಡಬೇಕಾಗಿದೆ.
ರಸ್ತೆ ನಿರ್ಮಾಣದ ಉದ್ದೇಶದಿಂದ ಒತ್ತಿನೆಣೆ ಗುಡ್ಡದಲ್ಲಿ ಭಾರೀ ಪ್ರಮಾಣದ ಕಣಿವೆ ನಿರ್ಮಿಸಲಾಗಿದೆ. ಈ ಭಾಗದಲ್ಲಿ ನೀರಿನ ಒರತೆ ಅಧಿಕವಾಗಿರುವ ಜತೆಗೆ ಜೇಡಿ ಮಣ್ಣಿನಿಂದಾವೃತವಾಗಿರುವ ಕಾರಣ ಮಳೆಯಿಂದಾಗಿ ಗುಡ್ಡದ ಒಂದೊಂದೇ ಭಾಗಗಳು ಕುಸಿಯಲಾರಂಭಿಸಿವೆ.
ಬುಧವಾರ ಬೆಳಗ್ಗೆ ಗುಡ್ಡ ಕುಸಿದು ಬಿದ್ದ ಪರಿಣಾಮ 5 ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತ್ತು.