Advertisement

ರಾಜಧಾನಿಗೆ ಕಾಲಿಟ್ಟ ಹಕ್ಕಿಜ್ವರ

12:48 PM Jan 03, 2018 | |

ಬೆಂಗಳೂರು: ಕಳೆದ ತಿಂಗಳು ಮೈಸೂರಿನಲ್ಲಿ ಹಕ್ಕಿ ಜ್ವರ ಪತ್ತೆಯಾದ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲೂ ಹಕ್ಕಿಜ್ವರ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. 

Advertisement

ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲ್ಲೂಕಿನ ಯಲಹಂಕ ಹೋಬಳಿಯ ದಾಸರಹಳ್ಳಿಯಲ್ಲಿ ಕೋಳಿ ಮಾರಾಟ ಕೇಂದ್ರದಲ್ಲಿ ಕಳೆದ ಡಿಸೆಂಬರ್‌ 25ರಂದು ಕೋಳಿಗಳು ಅಸ್ವಾಭಿಕವಾಗಿ ಮರಣಹೊಂದಿದ್ದು ಅವುಗಳ ಮಾದರಿಗಳನ್ನು ಪರೀಕ್ಷೆಗಾಗಿ ಭೂಪಾಲದ “ನ್ಯಾಷನ್‌ನಲ್‌ ಇನ್ಸಿಟಿಟ್ಯೂಟ್‌ ಆಫ್ ಹೈಸೆಕ್ಯೂರಿಟಿ ಅನಿಮಲ್‌ ಡಿಸೀಸ್‌’ (ಎನ್‌ಐಎಚ್‌ಎಸ್‌ಎಡಿ)ಗೆ ರವಾನಿಸಲಾಗಿತ್ತು. ಪರೀಕ್ಷೆಯಿಂದ ಸತ್ತ ಕೋಳಿಗಳ ಮಾದರಿಯಲ್ಲಿ ಹಕ್ಕಿ ಜ್ವರ (ಎಚ್‌5ಎನ್‌1) ಇರುವುದು ದೃಢಪಟ್ಟಿದೆ. 

ಹಕ್ಕಿಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳ ತಂಡ ಕೋಳಿ ಮಾರಾಟ ಕೇಂದ್ರ ಹಾಗೂ ಸುತ್ತಲಿನ ಪ್ರದೇಶಕ್ಕೆ ಭೇಟಿ ಕೊಟ್ಟು ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದೆ. ರೋಗ ಪತ್ತೆಯಾದ ದಾಸರಹಳ್ಳಿಯ ಭುವನೇಶ್ವರಿ ನಗರ ಹಾಗೂ ಅದರ ಒಂದು ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು “ರೋಗಪೀಡಿತ ವಲಯ’ ಎಂದು ಹಾಗೂ 1ರಿಂದ 10 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಜಾಗೃತ ವಲಯ ಎಂದು ಘೋಷಿಸಿದೆ.

ಆತಂಕ ಬೇಡ: ಸದ್ಯ ರೋಗವು ಹತೋಟಿಯಲ್ಲಿದ್ದು ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ. ಅದಾಗ್ಯೂ  ಸಾರ್ವಜನಿಕರು 70 ಡಿಗ್ರಿ ಸೆ ಗಿಂತ ಹೆಚ್ಚಿನ ಉಷ್ಣಾಂಶದಲ್ಲಿ ಬೇಯಿಸದ ಅಥವಾ ಅರ್ಧಬೆಂದ ಕೋಳಿ ಮಾಂಸ ಅಥವಾ ಕೋಳಿ ಮೊಟ್ಟೆಗಳನ್ನು ತಿನ್ನಬಾರದೆಂದು ಇಲಾಖೆ ಮನವಿ ಮಾಡಿದೆ.

ಎಲ್ಲಿಂದ ಬಂತು ಹಕ್ಕಿ ಜ್ವರ: ತಮಿಳುನಾಡಿನ ಕೋಳಿ ಮಾರಾಟಗಾರರಿಂದ ದಾಸರಹಳ್ಳಿಯ ಕೆಜಿಎನ್‌ ಅಂಗಡಿ ಮಾಲಿಕ 15 ಕೋಳಿಗಳನ್ನು ಖರೀದಿಸಿದ್ದ. ನಾಲ್ಕೈದು ಕೋಳಿಗಳು ಅಸ್ವಾಭಾವಿಕವಾಗಿ ಸತ್ತ ಹಿನ್ನೆಲೆಯಲ್ಲಿ ಮೊದಲು ಅವುಗಳ ಮಾದರಿಯನ್ನು ಹೆಬ್ಟಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಪರೀಕ್ಷಿಸಲಾಯಿತು.

Advertisement

ಬಳಿಕ ಅದನ್ನು ಭೂಪಾಲದ “ನ್ಯಾಷನ್‌ನಲ್‌ ಇನ್ಸಿಟಿಟ್ಯೂಟ್‌ ಆಫ್ ಹೈಸೆಕ್ಯೂರಿಟಿ ಅನಿಮಲ್‌ ಡಿಸೀಸ್‌’ (ಎನ್‌ಐಎಚ್‌ಎಸ್‌ಎಡಿ)ಗೆ ರವಾನಿಸಲಾಗಿತ್ತು. ಅಲ್ಲಿ ಪರೀಕ್ಷೆ ನಡೆಸಿದ ಬಳಿಕ ಹಕ್ಕಿಜ್ವರ ಇರುವುದು ದೃಢಪಟ್ಟಿದೆ. ಹೀಗಾಗಿ, ಬೆಂಗಳೂರಿನಲ್ಲಿ ಹಕ್ಕಿಜ್ವರ ಹರಡಲು ತಮಿಳುನಾಡಿನಿಂದ ತಂದ ಕೋಳಿಗಳು ಕಾರಣ ಅನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

ಮನುಷ್ಯರಿಗೆ ಹರಡುವ ಸಾಧ್ಯತೆ ಕಡಿಮೆ?: ಹಕ್ಕಿಜ್ವರ ಮನುಷ್ಯರಿಗೆ ಹರಡುವುದು ತೀರಾ ಕಡಿಮೆ. ಏಕೆಂದರೆ, ಹಕ್ಕಿಜ್ವರ ಮೊಟ್ಟೆ, ಮಾಂಸ ತಿನ್ನುವುದರಿಂದ ಅಲ್ಲ, ಉಸಿರೆಳತದಿಂದ ಹರಡುತ್ತದೆ. ಎಚ್‌1ಎನ್‌1 ವೈರಾಣು ರೀತಿಯಲ್ಲಿ ಎಚ್‌5ಎನ್‌1 (ಹಕ್ಕಿಜ್ವರ) ವೈರಾಣು ಶ್ವಾಸೇಂದ್ರಿಯಗಳ ಮೇಲ್ಭಾಗವನ್ನು ಬೇಗ ಬಾಧಿಸುವುದಿಲ್ಲ. ಹಾಗಾಗಿ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ.

ಹಕ್ಕಿ ಜ್ವರ ಮನುಷ್ಯರಿಗೆ ಬಾಧಿಸಿದ ಒಂದೇ ಒಂದು ನಿದರ್ಶನ ಇಲ್ಲಿವರೆಗೆ ಇಡೀ ದೇಶದಲ್ಲಿ ಎಲ್ಲೂ ಇಲ್ಲ. ಆದರೆ, ನಿರಂತರವಾಗಿ ಕೋಳಿಗಳನ್ನು ತಪಾಸಣೆ ಮಾಡುವ, ಕೋಳಿಫಾರಂಗಳಲ್ಲಿ ಕೆಲಸ ಮಾಡುವವರಿಂದ ಒಂದಿಷ್ಟು ಅಪಾಯ ಇರುತ್ತದೆ. ಅಂತಹವರು ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next