ಮೈಸೂರು: ಕೆ.ಆರ್.ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ಪಾದಯಾತ್ರೆ ನಡೆಸುತ್ತಿರುವ ಶಾಸಕ ರಾಮದಾಸ್, ನಗರ ಪಾಲಿಕೆ 2ನೇ ವಾರ್ಡ್(ಮರು ವಿಂಗಡಣೆಯ ನೂತನ 50ನೇ ವಾರ್ಡ್) ವ್ಯಾಪ್ತಿಯ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು.
ವಾರ್ಡ್ ವ್ಯಾಪ್ತಿಯ ಸುಣ್ಣದಕೇರಿ ಬಡಾವಣೆಯ ವಿವಿಧ ಭಾಗಗಳಲ್ಲಿ ಮಂಗಳವಾರ ಮುಂಜಾನೆ ಪಾದಯಾತ್ರೆ ನಡೆಸಿದ ಸ್ಥಳೀಯ ಶಾಸಕರು, ವಾರ್ಡ್ ವ್ಯಾಪ್ತಿಯ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸುವುದು, ಬಡವರಿಗೆ ಸ್ವಂತ ಸೂರು ಒದಗಿಸುವುದು, ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಧನಸಹಾಯ ನೀಡುವುದು ಸೇರಿದಂತೆ ಸಾರ್ವಜನಿಕರ ಇನ್ನಿತರ ಬೇಡಿಕೆಗಳನ್ನು ಆಲಿಸಿದರು.
ಕಾಮಗಾರಿ ಪೂರ್ಣಗೊಳಿಸಿ: ಸುಣ್ಣದಕೇರಿಯಲ್ಲಿನ ಬಹುತೇಕ ಮನೆಗಳು ಹಲವು ವರ್ಷಗಳ ಹಳೆಯದಾಗಿದ್ದು, ಇಲ್ಲಿನ ರಸ್ತೆಗಳು ಚಿಕ್ಕದಾಗಿರುವ ಹಿನ್ನೆಲೆಯಲ್ಲಿ ಮೂಲಸೌಕರ್ಯ ಒದಗಿಸಬೇಕಾಗಿದೆ. ಅಲ್ಲದೆ ಈ ಭಾಗದ ಅನೇಕ ನಿವಾಸಿಗಳಿಗೆ ಮನೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.
ಸ್ಲಂ ಬೋರ್ಡ್ ನಿರ್ಮಿಸಿರುವ ಮನೆಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ರಾಮದಾಸ್, ಸ್ಥಳೀಯ ನಿವಾಸಿಗಳು ಬೀದಿ ದೀಪ ಅಳವಡಿಕೆ, ಹಳೆಯ ಪೈಪ್‌ಲೈನ್ ತೆರವುಗೊಳಿಸಿ ಅಗತ್ಯ ಪೈಪ್‌ಲೈನ್ ಅಳವಡಿಸುವಂತೆ ಆದೇಶಿಸಿದರು.
ಖಾತೆ ವರ್ಗಾವಣೆ ಲೋಪ: ಶಾಸಕರ ಪಾದಯಾತ್ರೆ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಿಗೆ ಹಲವು ವರ್ಷದಿಂದ ಖಾತೆ ವರ್ಗಾವಣೆ ಆಗದಿರುವುದು ಕಂಡು ಬಂದಿತು. ಈ ಹಿನ್ನೆಲೆಯಲ್ಲಿ ಪಾಲಿಕೆ 1ನೇ ವಲಯ ಕಚೇರಿಗೆ ಏಕಾಏಕಿ ಭೇಟಿ ನೀಡಿದ ಶಾಸಕರು, ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿದಾಗ ಹಲವು ಲೋಪಗಳು ಕಂಡು ಬಂದಿತು.
ಈ ವೇಳೆ ಕಳೆದ 2017ರ ಜನವರಿಯಲ್ಲಿ ಸಲ್ಲಿಕೆಯಾದ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿರುವುದು ಕಂಡುಬಂದಿತು. ಈ ವೇಳೆ ಕೆಲವು ನಿವಾಸಿಗಳು ವಲಯ ಕಚೇರಿಯಲ್ಲಿ ಹಣ ನೀಡದೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಇದೇ ವೇಳೆ ಕಚೇರಿಯಲ್ಲಿ ಹಲವು ಕಡತಗಳು ಕಾಣೆಯಾಗಿರುವುದನ್ನು ಗಮನಿಸಿದ ಶಾಸಕರು, ಅಕ್ರಮವಾಗಿ ಖಾತೆಗಳನ್ನು ಮಾಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಆಯುಕ್ತರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.