ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿ ಉಂಟಾಗಿದ್ದು, ಸಂತ್ರಸ್ತರಿಗೆ ನೆರವು ಮತ್ತು ಧನ ಸಂಗ್ರಹಕ್ಕಾಗಿ ನೆರೆ ಪರಿಹಾರ ಜೋಳಿಗೆ ಎಂಬ ಶೀರ್ಷಿಕೆಯಡಿ ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘ ಆ.14ರಂದು ಬೆಳಗ್ಗೆ 10.30ಕ್ಕೆ ಪುರಭವನದಿಂದ ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ವೀರಣ್ಣ ಮತ್ತಿಕಟ್ಟಿ, ಉತ್ತರ ಕರ್ನಾಟಕದ 162 ಹಳ್ಳಿಗಳು ಜಲಾವೃತಗೊಂಡಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆ, ಗೋಡೆಗಳು ಕುಸಿದು ಜಾನುವಾರುಗಳು ಮೃತಪಟ್ಟಿವೆ. ಜನರ ಸ್ಥಿತಿ ಅತಂತ್ರವಾಗಿದ್ದು, ಬೆಂಗಳೂರಿನ ಜನರು ಸಂತ್ರಸ್ತರ ನೆರವಿಗೆ ಬರಬೇಕಿದೆ. ರಾಜ್ಯ ಸರ್ಕಾರ ಬೆಳಗಾವಿಯಲ್ಲಿರುವ ಸುವರ್ಣಸೌಧಕ್ಕೆ ನೆರೆ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಇಲಾಖೆಗಳು ಮತ್ತು ಅಧಿಕಾರಿಗಳ ಕಚೇರಿಗಳನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ಅಖೀಲ ಭಾರತ ವೀರಶೈವ ಮತ್ತು ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಎನ್. ತಿಪ್ಪಣ್ಣ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರ ಎರಡು ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು ಎಂದರು.
ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘದ ಅಧ್ಯಕ್ಷ ಮುರಿಗೇಶ ಜವಳಿ ಮಾತನಾಡಿ, ಸಂಘಟನೆಯಿಂದ ಆಶ್ರಯ ಆಸ್ಪತ್ರೆಯ ಡಾ. ಸಂಗಮೇಶ್ ಅವರ ನೇತೃತ್ವದಲ್ಲಿ 20 ಜನರ ತಂಡ ಗದಗ ಜಿಲ್ಲೆಯಲ್ಲಿ ಜಲಾವೃತಗೊಂಡ ಹಳ್ಳಿಗಳಿಗೆ ಭೇಟಿ ನೀಡಿ ಚಿಕಿತ್ಸೆ ನೀಡಲಿದ್ದಾರೆ. ಇನ್ನೆರಡು ದಿನಗಳಲ್ಲಿ ಜನರಿಗೆ ಬಟ್ಟೆ, ಪಾತ್ರೆ ಸೇರಿ ಅಗತ್ಯ ವಸ್ತುಗಳನ್ನು ರವಾನಿಸಲಾಗುವುದು. ಆ.14ರಂದು ಪಾದಯಾತ್ರೆಯಲ್ಲಿ ಸಂಗ್ರಹವಾಗುವ ವಸ್ತುಗಳನ್ನು ಆ.15ರಂದು ಜಲಾವೃತಗೊಂಡಿ ರುವ ಹಳ್ಳಿಗಳಿಗೆ ರವಾನಿಸಲಾಗುವುದು ಎಂದು ತಿಳಿಸಿದರು.
ಔಷಧಗಳ ಲಭ್ಯತೆ ಖಾತ್ರಿಪಡಿಸಿಕೊಳ್ಳಲು ಸೂಚನೆ: ನೆರೆ ಹಾವಳಿಗೆ ತುತ್ತಾಗಿರುವ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಾರ್ವಜನಿಕರಿಗೆ ತುರ್ತು ಚಿಕಿತ್ಸೆಗೆ ಅವಶ್ಯವಿರುವ ಔಷಧಿಗಳ ಲಭ್ಯತೆ ಖಾತ್ರಿಪಡಿಸಿಕೊಳ್ಳಲು ಆರೋಗ್ಯ ಇಲಾಖೆಯು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದೆ. ಜಿಲ್ಲಾ ಔಷಧ ಉಗ್ರಾಣ ಅಥವಾ ಜಿಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಅಗತ್ಯ ಔಷಧ ಲಭ್ಯವಿಲ್ಲದಿದ್ದರೆ ರಕ್ಷಾ ಸಮಿತಿಯ ಅನುದಾನದಲ್ಲಿ ಖರೀದಿಸಬೇಕು. ಖರೀದಿ ವೆಚ್ಚ 5 ಲಕ್ಷ ರೂ.ಮೀರಿದ ಸಂದರ್ಭದಲ್ಲಿ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದೆ.
ನೆರೆ ಸಂತ್ರಸ್ತರ ನೆರವಿಗೆ ಕೇಂದ್ರ: ಉತ್ತರ ಕರ್ನಾಟಕ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಸೇರಿ ರಾಜ್ಯದ ವಿವಿಧೆಡೆ ಪ್ರವಾಹಕ್ಕೆ ಸಿಲುಕಿರುವ ಜನರಿಗೆ ನೆರವಾಗಲು ಶುಕ್ರವಾರ ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ವಿವಿಧ ಸಾಮಗ್ರಿ ಸಂಗ್ರಹ ಕೇಂದ್ರಗಳನ್ನು ತೆರೆದಿರುವುದಾಗಿ ಶ್ರೀಗಂಧ ಕನ್ನಡ ಅಭಿಮಾನಿಗಳ ಸಂಘ ತಿಳಿಸಿದೆ. ವಿದ್ಯಾರಣ್ಯಪುರದ ನಂಜಪ್ಪ ಸರ್ಕಲ್, ತಿಂಡ್ಲು ರಸ್ತೆ, ಕೆನರಾ ಬ್ಯಾಂಕ್ ಮುಂಭಾಗ, ಬಸವೇಶ್ವರ ಪುತ್ಥಳಿ ಹಾಗೂ ಇತರೆಡೆ ಕೇಂದ್ರ ತೆರೆದಿದ್ದು, ಒಂದು ವಾರ ಕಾಲ ವಿವಿಧ ಅಗತ್ಯ ಸಾಮಗ್ರಿ ಸಂಗ್ರಹಿಸಿ ನೇರವಾಗಿ ಸಂತ್ರಸ್ತರಿಗೆ ತಲುಪಿಸಲಾಗುವುದು. ದಿನಬಳಕೆ ವಸ್ತುಗಳು, ಮೇಣದ ಬತ್ತಿ, ಶೆಡ್‌ಗಳಿಗೆ ಟಾರ್ಪಲ್, ಸಾಬೂನು, ಮಕ್ಕಳ ಉಡುಪು, ಹೊದಿಕೆ ಕಂಬಳಿ, ದವಸ-ಧಾನ್ಯ, ಔಷಧಗಳನ್ನು ಸಂತ್ರಸ್ತರಿಗೆ ನೀಡಬಹುದು. ಮಾಹಿತಿಗೆ ಮೊ: 98866 46011, 86600 17479, 63633 46254 ಸಂಪರ್ಕಿಸಬಹುದು.