Advertisement

Finance dept’s ಒಪ್ಪಿಗೆ ನೀಡಿದರೆ ಅತಿಥಿ ಶಿಕ್ಷಕರ ಗೌರವಧನ ಹೆಚ್ಚಳ: ಸಚಿವ ಮಧು

12:02 AM Dec 10, 2024 | Team Udayavani |

ಬೆಳಗಾವಿ: ರಾಜ್ಯದ ಸರಕಾರಿ ಪ್ರಾಥಮಿಕ/ಪ್ರೌಢಶಾಲೆಗಳಲ್ಲಿನ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹಣಕಾಸು ಇಲಾಖೆಗೆ ಕಳುಹಿಸಿದ್ದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತ ಸಚಿವ ಮಧು ಬಂಗಾರಪ್ಪ ತಿಳಿಸಿದರು.

Advertisement

ಮೇಲ್ಮನೆಯಲ್ಲಿ ಸೋಮವಾರ ಬಿಜೆಪಿಯ ಡಾ| ಧನಂಜಯ ಸರ್ಜಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಗೌರವಧನ ಮೊತ್ತವನ್ನು 2022ರಲ್ಲಿ ಆರ್ಥಿಕ ಇಲಾಖೆಯು ಪರಿಷ್ಕರಿಸಲು ಅನುಮತಿ ನೀಡಿತ್ತು. ಈಗ ಮತ್ತೆ ಪರಿಷ್ಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಆದರೆ, ಈಗ ಮರುಪರಿಶೀಲನೆಗಾಗಿ ಮತ್ತೂಮ್ಮೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

48 ಸಾವಿರ ಅತಿಥಿ ಉಪನ್ಯಾಸಕರಿದ್ದಾರೆ. ಕನಿಷ್ಠ ವೇತನಕ್ಕೆ ಅನುಗುಣವಾಗಿಯೂ ವೇತನ ನೀಡುತ್ತಿಲ್ಲ. ಹೀಗಿರುವಾಗ ಗುಣಮಟ್ಟದ ಶಿಕ್ಷಣ ಹೇಗೆ ಸಾಧ್ಯ ಎಂದು ಡಾ| ಸರ್ಜಿ ಆಕ್ರೋಶ ವ್ಯಕ್ತಪಡಿಸಿ, ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವಂತೆ ಕೋರಿದರು. ಇದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಸಮ್ಮತಿಸಿದರು.

ಎರಡೂವರೆ ತಿಂಗಳಲ್ಲಿ ಸಹ ಶಿಕ್ಷಕರಿಗೆ ಪದೋನ್ನತಿ
ಬಹು ವರ್ಷಗಳಿಂದ ಎದುರು ನೋಡುತ್ತಿರುವ ಸರಕಾರಿ ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಯಿಂದ ಪದವಿಪೂರ್ವ ವಿಭಾಗದ ಉಪನ್ಯಾಸಕ ಹುದ್ದೆಗೆ ಎರಡೂವರೆ ತಿಂಗಳಲ್ಲಿ ಪದೋನ್ನತಿ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಮೇಲ್ಮನೆಯಲ್ಲಿ ಸೋಮವಾರ ಬಿಜೆಪಿಯ ಎಸ್‌.ವಿ. ಸಂಕನೂರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2013ನೇ ಸಾಲಿನವರೆಗಿನ ಶೇ. 25ರಷ್ಟು ಸಹ ಶಿಕ್ಷಕರ ಹುದ್ದೆಗಳನ್ನು ಪದವಿಪೂರ್ವ ವಿಭಾಗದ ಉಪನ್ಯಾಸಕರ ಹು¨ªೆಗಳಿಗೆ ಪದೋನ್ನತಿ ನೀಡಬೇಕಿತ್ತು. ಜೇಷ್ಠತಾ ಪಟ್ಟಿ ಸಿದ್ಧಪಡಿಸಬೇಕಿದ್ದರಿಂದ ತುಸು ವಿಳಂಬವಾಗಿದೆ ಎಂದು ಸಮಜಾಯಿಷಿ ನೀಡಿದರು.

Advertisement

ಅತಿಥಿಗಳ ಸಂಕಟ ಬಿಚ್ಚಿಟ್ಟ ಡಾ|ಸರ್ಜಿ
ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ವೇತನವನ್ನು ಪರಿಷ್ಕೃತಗೊಳಿಸುವಂತೆ ಶಾಸಕ ಡಾ| ಧನಂಜಯ ಸರ್ಜಿ ಸರಕಾರವನ್ನು ಆಗ್ರಹಿಸಿದರು.
ಪ್ರಶ್ನೋತ್ತರ ವೇಳೆ ಧ್ವನಿ ಎತ್ತಿದ ಅವರು, ಕಾರ್ಮಿಕ ಕಾಯ್ದೆಯ ಪ್ರಕಾರವಾದರೂ ವೇತನ ಹೆಚ್ಚಳ ಮಾಡಬೇಕು ಎಂದರು.

ರಾಜ್ಯದಲ್ಲಿ ಒಟ್ಟು 48,657 ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. 2 ವರ್ಷ ಪಿಯುಸಿ ಮುಗಿದ ಅನಂತರ ಮೂರು ವರ್ಷ ಪದವಿ ಮುಗಿಸಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಕನಿಷ್ಠ ವೇತನವೂ ದೊರೆಯುತ್ತಿಲ್ಲ. ಗ್ರೂಪ್‌ ಡಿ, ಅಟೆಂಡರ್‌ಗಳು ಪಡೆಯುವ ಮೊತ್ತವನ್ನು ಅತಿಥಿ ಉಪನ್ಯಾಸಕರು ದುಡಿಯಬೇಕೆಂದರೆ ಕನಿಷ್ಠ 25 ವರ್ಷಗಳ ಕಾಲ ಸೇವೆ ಸಲ್ಲಿಸಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಎಲ್ಲಿದೆ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next