Advertisement

S. M. Krishna: ಆ ಎರಡು ತಪ್ಪು ಮಾಡಬಾರದಿತ್ತು ಎಂದಿದ್ದರು ಬ್ರ್ಯಾಂಡ್‌ ಬೆಂಗಳೂರು ರೂವಾರಿ

08:55 AM Dec 10, 2024 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಬ್ರ್ಯಾಂಡ್‌ ಬೆಂಗಳೂರು ಮಾಡಿದ್ದ ಮಾಜಿ ಮುಖ್ಯಮಂತ್ರಿ ಸೋಮನಹಳ್ಳಿ, ಮಲ್ಲಯ್ಯ ಕೃಷ್ಣ (S.M.Krishna) ಅವರು ಮಂಗಳವಾರ (ಡಿ.10) ನಸುಕಿನ 2.45ರ ಸುಮಾರಿಗೆ ಅಸುನೀಗಿದ್ದಾರೆ.

Advertisement

ಅವರ ಅಧಿಕಾರಾವಧಿಯಲ್ಲಿ ಐಟಿ ಕ್ಷೇತ್ರಕ್ಕೆ ನೀಡಿದ ಉತ್ತೇಜನವಾಗಿ ಬೆಂಗಳೂರನ್ನು ಜಾಗತಿಕ ಭೂಪಟದಲ್ಲಿ ಮಿನುಗಿಸಿದ್ದಕ್ಕಾಗಿ ಅವರು ಹೆಚ್ಚು ಪ್ರಸಿದ್ದಿ ಪಡೆದರು. ಇದರ ಪರಿಣಾಮವಾಗಿ ಬೆಂಗಳೂರು ನಗರವು ಭಾರತದ ‘ಸಿಲಿಕಾನ್ ವ್ಯಾಲಿ’ ಆಗಿ ಬೆಳೆಯುತ್ತಿದೆ.

ಕಳೆದ ವರ್ಷ ಜನವರಿಯಲ್ಲಿ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸಿದರು. ಈ ವೇಳೆ ತಮ್ಮ ವಯಸ್ಸನ್ನು ಕಾರಣವೆಂದು ಉಲ್ಲೇಖಿಸಿದ್ದರು.

1932ರ ಮೇ 1ರಂದು ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಜನಿಸಿದ ಎಸ್.ಎಂ.ಕೃಷ್ಣ ಅವರು ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢ ಶಿಕ್ಷಣ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ತಮ್ಮ ಬ್ಯಾಚುಲರ್ ಆಫ್ ಆರ್ಟ್ಸ್, ಯೂನಿವರ್ಸಿಟಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಸದರ್ನ್ ಮೆಥೋಡಿಸ್ಟ್ ವಿಶ್ವವಿದ್ಯಾಲಯ ಮತ್ತು ವಾಷಿಂಗ್ಟನ್ ಡಿಸಿಯ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದ ಲಾ ಸ್ಕೂಲ್​ನಿಂದಲೂ ಪದವಿ ಪಡೆದಿದ್ದರು.

Advertisement

1962 ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಅವರು ಆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ‘ಪ್ರಜಾ ಸೋಷಿಯಲಿಸ್ಟ್ ಪಕ್ಷ’ಕ್ಕೆ ಎನ್ನುವ ಪಕ್ಷಕ್ಕೆ ಸೇರಿದ್ದರು. ಬಳಿಕ ಕಾಂಗ್ರೆಸ್‌ ಸೇರಿ ಕರ್ನಾಟಕ ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿ, ಮಹಾರಾಷ್ಟ್ರ ರಾಜ್ಯಪಾಲರಾಗಿ ರಾಜಕೀಯವಾಗಿ ಮೇಲಕ್ಕೇರಿದ್ದರು. ಬದಲಾದ ಸನ್ನಿವೇಶದಲ್ಲಿ 2017ರಲ್ಲಿ ಕೃಷ್ಣ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು. 2023ರ ಜನವರಿ 7ರಂದು ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ್ದರು.

ಎರಡು ತಪ್ಪು ಮಾಡಿದ್ದೆ ಎಂದಿದ್ದ ಕೃಷ್ಣ

ಬೆಂಗಳೂರು ನಗರವನ್ನು ಸಿಂಗಾಪುರದಂತೆ ಮಾಡುತ್ತೇನೆಂದು ಪಣ ತೊಟ್ಟಿದ್ದ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಐಟಿ ಉದ್ಯಮಕ್ಕೆ ಒತ್ತು ನೀಡಿದರು. ಐಟಿ ಬೆಳವಣಿಗೆಗೆ ಅವರ ಬೆಂಬಲ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯ ಪ್ರಾಮುಖ್ಯತೆಯು ಬ್ರಾಂಡ್ ಬೆಂಗಳೂರನ್ನು ಜಾಗತಿಕ ನಕ್ಷೆಯಲ್ಲಿ ಬೆಳಗುವಂತೆ ಮಾಡಿತು.

ಇದರಿಂದ ಎಸ್.ಎಂ.ಕೃಷ್ಣ ಉತ್ತಮ ಹೆಸರು ಮಾಡಿದ್ದರು. ಇದೇ ಧೈರ್ಯದಲ್ಲಿ ಕೃಷ್ಣ ಅವರು 2004ರಲ್ಲಿ ಅವಧಿಪೂರ್ವ ವಿಧಾನಸಭೆಗೆ ಚುನಾವಣೆಗೆ ಮುಂದಾದರು. ಆದರೆ ಅವರು ಭಾವಿಸಿದಂತೆ ಆಗಲಿಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ತರಲು ವಿಫಲರಾದರು. ಯಾವುದೇ ಪಕ್ಷಕ್ಕೆ ಬಹುಮತ ಬರಲಿಲ್ಲ.  ಕೃಷ್ಣ ಅವರು ಕೂಡಾ ಮದ್ದೂರು ಕ್ಷೇತ್ರದ ಬದಲು ಚಾಮರಾಜಪೇಟೆಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು.

ಇದಾಗಿ ಕೆಲವೇ ಸಮಯದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಸ್.ಎಂ.ಕೃಷ್ಣ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಕವಾದರು. 2008ರವರೆಗೆ ಅವರು ರಾಜ್ಯಪಾಲರಾಗಿದ್ದರು.

“ನನ್ನ ಐದು ವರ್ಷಗಳ ಅಧಿಕಾರಾವಧಿಯು 2004 ರಲ್ಲಿ ಕೊನೆಗೊಳ್ಳುವ ಆರು ತಿಂಗಳ ಮೊದಲು ಅಸೆಂಬ್ಲಿಯನ್ನು ವಿಸರ್ಜಿಸುವುದು ದೊಡ್ಡ ಪ್ರಮಾದವಾಗಿತ್ತು” ಎಂದು ಕೃಷ್ಣ ಅವರು ಕಳೆದ ವರ್ಷ ಪತ್ರಿಕೆಯೊಂದಕ್ಕೆ ಮಾತನಾಡುವ ಸಮಯದಲ್ಲಿ ಹೇಳಿದ್ದರು.

“ಎರಡನೆಯ ಪ್ರಮಾದವೆಂದರೆ, ಕಾಂಗ್ರೆಸ್ ನನಗೆ ನೀಡಿದ ಮಹಾರಾಷ್ಟ್ರ ರಾಜ್ಯಪಾಲ ಹುದ್ದೆಯನ್ನು ಸ್ವೀಕರಿಸಿದ್ದು. ಅದರ ಬದಲಿಗೆ ನಾನು ವಿರೋಧ ಪಕ್ಷದ ನಾಯಕನಾಗಿ ಇಲ್ಲಿಯೇ ಮುಂದುವರಿಯಬೇಕಿತ್ತು. ನಾನು ಇನ್ನೂ ಕೆಲ ಕಾಲ ರಾಜ್ಯ ರಾಜಕಾರಣದಲ್ಲಿ ಮುಂದುವರಿಯಬೇಕಿತ್ತು” ಎಂದಿದ್ದರು.

“ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗಲೆಲ್ಲಾ, ನಾನು ಸಿಎಂ ಆಗುತ್ತಿದ್ದೆ ಮತ್ತು ಜಾಗತಿಕ ಗುಣಮಟ್ಟವನ್ನು ಪೂರೈಸಲು ಬೆಂಗಳೂರಿನ ಮೂಲಸೌಕರ್ಯವನ್ನು ಸುಧಾರಿಸಲು ನನಗೆ ಅವಕಾಶವನ್ನು ನೀಡುತ್ತಿತ್ತು” ಎಂದು ಕೃಷ್ಣ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next