Advertisement

‘ಕಡ್ಡಾಯ ಹಾಜರಾತಿ ಮರೆಯಬೇಡಿ; ವೇತನ ಕೇಳಬೇಡಿ’

11:06 PM Dec 08, 2024 | Team Udayavani |

ಹುಬ್ಬಳ್ಳಿ: ತರಗತಿ ಇರಲಿ, ಬಿಡಲಿ ನಿತ್ಯವೂ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಕಡ್ಡಾಯ ಹಾಜರಾತಿ ಮರೆಯಬೇಡಿ, ಸೇವಾ ಭದ್ರತೆ ಇಲ್ಲದೆಯೇ ಕಡಿಮೆ ವೇತನಕ್ಕೆ ದುಡಿದರೂ, ವೇತನ ಮಾತ್ರ ಕೇಳಬೇಡಿ’-ಇದು ರಾಜ್ಯದ 11 ಸರಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಅತಿಥಿ ಉಪನ್ಯಾಸಕರ ದುಃಸ್ಥಿತಿ. ಫೆಬ್ರವರಿ-ಎಪ್ರಿಲ್‌ನಿಂದಲೇ ವೇತನ ಇಲ್ಲದೆ ಉಪನ್ಯಾಸಕರು ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದಾರೆ.

Advertisement

ರಾಜ್ಯದ ಸರಕಾರಿ ಪಾಲಿಟೆಕ್ನಿಕ್‌ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಹತ್ತಾರು ವರ್ಷಗಳಿಂದ ಸೇವಾ ಭದ್ರತೆ ಇಲ್ಲದೆ, ಮುಂದಿನ ಭವಿಷ್ಯ ಏನೆಂದು ತಿಳಿಯದೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸರಕಾರಿ ಎಂಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ 15-20 ಸಾವಿರ ರೂ. ಮಾಸಿಕ ಗೌರವಧನ ನೀಡಲಾಗುತ್ತಿತ್ತು. ಉಪನ್ಯಾಸಕರ ಹೋರಾಟದ ಫಲವಾಗಿ ಸರಕಾರ ಗೌರವಧನ ಹೆಚ್ಚಳ ಮಾಡಿದೆ.

ಆದರೆ, ಸರಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಕಳೆದ 10 ತಿಂಗಳಿಂದ ಗೌರವಧನವೇ ಬಿಡುಗಡೆಯಾಗಿಲ್ಲ. ಹಲವರು ಕಳೆದ 8-10 ವರ್ಷಗಳಿಂದ ಇಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ಕೆಲವರು ನಿವೃತ್ತಿ ವಯಸ್ಸಿಗೂ ಬಂದಿದ್ದಾರೆ. ಇಂತಹವರು ಬೇರೆ ಕಡೆ ಹೋಗುವಂತಿಲ್ಲ, ಇಲ್ಲಿಯೇ ಇದ್ದು ವೇತನ ಬಾರದಿರುವುದನ್ನು ಅನುಭವಿಸುವಂತಿಲ್ಲ ಎನ್ನುವಂತಾಗಿದೆ.

ಹಾಜರಾತಿ ಕಡ್ಡಾಯ
ಸರಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಗೆ ತರಗತಿ ಇರಲಿ ಇಲ್ಲದಿರಲಿ ಬಯೋಮೆಟ್ರಿಕ್‌ ಹಾಜರಾತಿ ಹಾಗೂ ಬೆಳಗ್ಗೆ 9ರಿಂದ ಸಾಯಂಕಾಲ 5 ಗಂಟೆವರೆಗೆ ಕಾಲೇಜಿನಲ್ಲಿ ಇರುವುದನ್ನು ಕಡ್ಡಾಯ ಮಾಡಲಾಗಿದೆ. ಸರಕಾರಿ ಎಂಜಿನಿಯರಿಂಗ್‌ ಕಾಲೇಜು ಅತಿಥಿ ಉಪನ್ಯಾಸಕರಿಗೆ ವಾರಕ್ಕೆ 15 ತಾಸು, ಡಿಪ್ಲೊಮಾ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ 17 ತಾಸು ಬೋಧನೆ ನಿಗದಿಪಡಿಸಲಾಗಿದೆ. ಆದರೆ ನಿತ್ಯ 7 ತಾಸು ಕಾಲೇಜಿನಲ್ಲಿ ಇರಲೇಬೇಕಾಗಿದೆ.

ಸೇವಾ ಭದ್ರತೆ ಇಲ್ಲ, ವರ್ಷಕ್ಕೆ ಇಂತಿಷ್ಟು ಕೃಪಾಂಕ ನೀಡಬೇಕೆಂದರೂ ಸ್ಪಂದನೆ ದೊರೆತಿಲ್ಲ. ವೇತನ ನೀಡದಿದ್ದರೆ ನಮ್ಮ ಕುಟುಂಬ ನಿರ್ವಹಣೆ ಹೇಗೆ?
– ಜಿ.ವಿ. ಮನುಕುಮಾರ್‌, ಅಧ್ಯಕ್ಷ, ಕರ್ನಾಟಕ ಎಂಜಿನಿಯರಿಂಗ್‌ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘ

Advertisement

 ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next