ಕಲಬುರಗಿ: ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ 75ನೇ ಅಮೃತ ಮಹೋತ್ಸವ ಹಾಗೂ ಕೆಸರಟಗಿ ರಸ್ತೆಯ ಸಮಾಧಾನದಲ್ಲಿನ ಧ್ಯಾನ ಮಂದಿರ ಉದ್ಘಾಟನೆ ಅಂಗವಾಗಿ ಕಳೆದ ವಾರದಿಂದ ನಗರದ ವಿವಿಧ ಬಡಾವಣೆಗಳಲ್ಲಿ ಸಂಸ್ಕಾರ ಭಾರತ ಸ್ವಚ್ಛತಾ ಜಾಗೃತಿ ಪಾದಯಾತ್ರೆ ನಡೆದು ಬರುತ್ತಿದ್ದು, ಬುಧವಾರ ನಗರದಲ್ಲಿ ನಾಡಿನ ವಿವಿಧ ಮಠಾಧೀಶರು ಪಾದಯಾತ್ರೆ ನಡೆಸಿ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸುವಂತೆ ಆಗ್ರಹಿಸಿದರು.
ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಜಗತ್ ವೃತ್ತದಲ್ಲಿ ಬಸವೇಶ್ವರ ಹಾಗೂ ಅಂಬೇಡ್ಕರ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಲಾಯಿತು.
ತದನಂತರ ಪಾದಯಾತ್ರೆಗೆ ಚಾಲನೆ ನೀಡಿದ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಮೌನಯೋಗಿಗಳ 75ನೇ ಅಮೃತ ಮಹೋತ್ಸವದ ಅಂಗವಾಗಿ 75 ಗ್ರಾಮಗಳಲ್ಲಿ ಉಚಿತ ಆರೋಗ್ಯ ಶಿಬಿರ ನಡೆಸಿರುವುದು ಶ್ರೀಗಳವರು ಮೌನಿಯಾಗಿದ್ದುಕೊಂಡು ಹತ್ತು ಹಲವಾರು ಸಮಾಜ ಸುಧಾರಣಾ ಕಾರ್ಯ ಕೈಗೊಂಡಿರುವುದು ಮಾದರಿಯಾಗಿದೆ ಎಂದು ಹೇಳಿದರು.
ಮುಖ್ಯ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ ಮಠಾಧೀಶರು, ಕಳೆದ ವಾರದಿಂದ ನಗರದ ವಿವಿಧ ಬಡಾವಣೆಗಲ್ಲಿ ಪಾದಯಾತ್ರೆ ಮೂಲಕ ಸ್ವತ್ಛತೆ ಕಡೆ ಒಂದು ದಿಟ್ಟ ಹೆಜ್ಜೆ ಎಂಬ ಸಂಕಲ್ಪದೊಂದಿಗೆ ಅರಿವು ಮೂಡಿಸುವ ಪ್ರಮಾಣಿಕ ಪ್ರಯತ್ನ ಮಾಡಲಾಗಿದೆ.
ಪ್ಲಾಸ್ಟಿಕ್ ನಿಷೇಧ ಬಳಕೆ ಕಾಯ್ದೆ ಕಡ್ಡಾಯವಾಗಿ ಜಾರಿಗೆ ತಂದು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು. ಮನವಿ ಪತ್ರ ಸ್ವೀಕರಿಸಿದ ಹೆಚ್ಛುವರಿ ಜಿಲ್ಲಾಧಿಕಾರಿ ಇಲಿಯಾಸ್ ಇಸಮದಿ, ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಹೋಗಲಾಡಿಸಲು ತಂಡ ರಚಿಸಲಾಗಿದೆ. ಈಗ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು, ಹುಬ್ಬಳ್ಳಿ ಸಿದ್ದಲಿಂಗ ಸ್ವಾಮಿಗಳು, ಮಾಡ್ಯಾಳ ಮರುಳಸಿದ್ದ ಮಹಾಸ್ವಾಮಿಗಳು, ಗೊಗ್ಗೆಹಳ್ಳಿ ಸಂಗಮೇಶ್ವರ ಮಹಾಸ್ವಾಮಿಗಳು, ಮೂಡಿ ಸದಾಶಿವ ಮಹಾಸ್ವಾಮಿಗಳು, ಜಡೆ ಹಿರೇಮಠದ ಅಮರೇಶ್ವರ ಮಹಾಸ್ವಾಮಿಗಳು, ಮಸೂತಿ ಪ್ರಭುಕುಮಾರ ಮಹಾಸ್ವಾಮಿಗಳು, ಗುಳೇದಗುಡ್ಡ ಕಾಶೀನಾಥ ಮಹಾಸ್ವಾಮಿಗಳು,
ಕ್ಯಾಸನೂರಿನ ವಿಜಯಕುಮಾರ ಮಹಾಸ್ವಾಮಿಗಳು, ಬಂದರವಾಡ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ರಾಘವಾಂಕ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಪಾಲಿಕೆ ಮಾಜಿ ಸದಸ್ಯ ಉಮೇಶ ಶೆಟ್ಟಿ, ದೇವೇಗೌಡ ತೆಲ್ಲೂರ ಸೇರಿದಂತೆ ಸಮಾಧಾನ ಭಕ್ತರು ಹೆಚ್ಛಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಜಾಥಾ ಚಾಲನಾ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ಅವರೂ ಹಾಜರಿದ್ದರು.