Advertisement

ಹೈಕ ಕ್ರೀಡಾಪಟುಗಳು ಸಾಧನೆ ಮಾಡಲಿ: ಪಾಟೀಲ

02:27 PM Dec 14, 2018 | Team Udayavani |

ಸಿಂಧನೂರು: ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ನಾವು ಹಿಂದುಳಿದಿದ್ದೇವೆ ಎಂಬ ಮನೋಭಾವ ಬಿಟ್ಟು, ಈ ಭಾಗದ ವಿದ್ಯಾರ್ಥಿಗಳು, ಕ್ರೀಡಾಪಟುಗಳು ಎಲ್ಲ ರಂಗದಲ್ಲೂ ಮುಂದೆ ಇದ್ದೇವೆ ಎಂಬ ಆತ್ಮವಿಶ್ವಾಸದೊಂದಿಗೆ ಪ್ರತಿ ಕ್ಷೇತ್ರದಲ್ಲಿ ಮುನ್ನುಗ್ಗಬೇಕು ಎಂದು ಹಿರಿಯ ಕ್ರೀಡಾಪಟು ಹಾಗೂ ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಾಜ್ಯ ಉಪಾಧ್ಯಕ್ಷ ರಾಜಶೇಖರ ಪಾಟೀಲ ಹೇಳಿದರು.

Advertisement

ನಗರದ ಕನಕದಾಸ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಗುಲ್ಬರ್ಗ ವಿವಿ ಅಂತರ್‌ ಕಾಲೇಜು ಏಕವಲಯ ಪುರಷರ ಹ್ಯಾಂಡ್‌ಬಾಲ್‌ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಹೈಕ ಭಾಗದ ವಿದ್ಯಾರ್ಥಿಗಳು ಇತ್ತೀಚೆಗೆ ಎಲ್ಲ ರಂಗದಲ್ಲೂ ಸಾಧನೆ ಮಾಡುತ್ತಿದ್ದಾರೆ. ಈ ಭಾಗದ ಅನೇಕರು ಹೊರ ರಾಜ್ಯಗಳಲ್ಲಿಯೂ ನಾನಾ ಇಲಾಖೆಯಲ್ಲಿ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಜೊತೆಗೆ ಕ್ರೀಡೆಗಳಲ್ಲಿ ಹೆಚ್ಚಿನ ಸಾಧನೆ ಮಾಡಿ ಉತ್ತಮ ಕ್ರೀಡಾಪಟು ಆಗಬೇಕು. ಇದಕ್ಕೆ ದೈಹಿಕವಾಗಿ ಆರೋಗ್ಯವಂತರಾಗಿರಬೇಕು. ಸತತ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ ಎಂದು ಹೇಳಿದರು.

ಜೆಡಿಎಸ್‌ ವಕ್ತಾರ ಬಸವರಾಜ ನಾಡಗೌಡ ಮಾತನಾಡಿ, ಶಿಕ್ಷಣದ ಜೊತೆಗೆ ಕ್ರೀಡೆಯಲ್ಲೂ ಸಾಧನೆ ಮಾಡಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ತೊಡಗಿಸಿಕೊಳ್ಳಬೇಕು. ಬ್ರೆಜಿಲ್‌ ದೇಶದಲ್ಲಿ ಗಂಡು ಮಗು ಜನಿಸಿದರೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಆ ಮಗು ಬ್ರೆಜಿಲ್‌ನ ಆಟವಾದ ಫುಟ್‌ಬಾಲ್‌ನಲ್ಲಿ ಸಾಧನೆ ಮಾಡಬಹುದೆಂಬ ಆಲೋಚನೆಯಲ್ಲಿ ತೊಡಗುತ್ತಾರೆ. ಆದರೆ ನಮ್ಮ ದೇಶದಲ್ಲಿ ಗಂಡು ಮಗು ಜನಿಸಿದರೆ ವರದಕ್ಷಿಣೆ ಹೆಚ್ಚು ಬರಬಹುದೆಂಬ ಆಲೋಚನೆಯಲ್ಲಿ ಇರುತ್ತೇವೆ. ಇಂತಹ ಮನೋಭಾವ ದೂರವಾಗಿ ಮಕ್ಕಳು ಒಳ್ಳೆಯ ಕ್ರೀಡಾಪಟು, ಸಾಧಕರು ಆಗಬೇಕೆಂಬ ಆಲೋಚನೆಯನ್ನು ಪಾಲಕರು
ಇರಿಸಿಕೊಳ್ಳಬೇಕು. ಆಗ ಮಾತ್ರ ಕ್ರೀಡೆಯಲ್ಲಿ ನಮ್ಮ ದೇಶ ಸಾಧನೆ ಮಾಡಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿದರು. ಸಂಸ್ಥೆ ಆಡಳಿತಾಧಿಕಾರಿ ಎಂ.ದೊಡ್ಡಬಸವರಾಜ, ಪಿಎಸ್‌ಐ ಮಂಜುನಾಥ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸವನಗೌಡ, ನಗರಸಭೆ ಸದಸ್ಯ ಮುನೀರ್‌, ಪ್ರಾಚಾರ್ಯ ತಿರುಪತಿ ವಡಿ, ಟಿ.ಹುನುಮಂತಪ್ಪ, ಫಕೀರಪ್ಪ ಹೆಡಗಿನಾಳ, ಕ್ರೀಡಾ ಯೋಜನಾ ಇಲಾಖೆ ಅಧಿಕಾರಿ ಗದ್ದೆಪ್ಪ, ಮಂಜುನಾಥ ಸೋಮಲಾಪುರ, ಬಸವರಾಜ, ಹಿರೇಲಿಂಗಪ್ಪ, ಫಕ್ಕೀರಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next