Advertisement

ಹಿಜಾಬ್ ತೀರ್ಪು: ಶಿವಮೊಗ್ಗ,ಮಂಗಳೂರು,ಉಡುಪಿಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ

11:48 PM Mar 14, 2022 | Team Udayavani |

ಬೆಂಗಳೂರು : ಹೈಕೋರ್ಟ್ ಹಿಜಾಬ್ ಕುರಿತಾಗಿ ಮಂಗಳವಾರ ಬೆಳಗ್ಗೆ ಮಹತ್ವದ ತೀರ್ಪು ನೀಡುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದ್ದು, ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ನಾವು ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುತ್ತಿದ್ದೇವೆ. ಬಾಹ್ಯ ಪರೀಕ್ಷೆಗಳು ವೇಳಾಪಟ್ಟಿಯಂತೆ ಇರುತ್ತವೆ.ಎಲ್ಲಾ ಶಾಲಾ-ಕಾಲೇಜುಗಳ ಆಂತರಿಕ ಪರೀಕ್ಷೆಗಳನ್ನು ಮುಂದೂಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ  ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲೂ ಶಾಲೆ ಕಾಲೇಜುಗಳಿಗೆ ರಜೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮ ರಾವ್ ಅವರು ಉದಯವಾಣಿಗೆ ತಿಳಿಸಿದ್ದಾರೆ. ಉಭಯ ಜಿಲ್ಲೆಗಳಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.

ಶಿವಮೊಗ್ಗದಲ್ಲೂ ರಜೆ ; ಕಟ್ಟೆಚ್ಚರ

ತೀರ್ಪು ನೀಡಲಿರುವ ಹಿನ್ನೆಲೆಯಲ್ಲಿ ಮಂಗಳವಾರ ಶಿವಮೊಗ್ಗ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಒಂದು ದಿನದ ಮಟ್ಟಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ತಿಳಿಸಿದ್ದಾರೆ.

Advertisement

ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸೆಕ್ಷನ್ 144ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಸಮವಸ್ತ್ರ ವಿವಾದ ವಿಚಾರವಾಗಿ ಸಾರ್ವಜನಿಕ ಸ್ಥಳಗಳಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಕೋರ್ಟ್ ತೀರ್ಪಿನ ವಿಚಾರವಾಗಿ ಯಾವುದೇ ರೀತಿಯ ಸಂಭ್ರಮಾಚರಣೆ ಅಥವ ಪ್ರತಿಭಟನೆಯನ್ನು ನಡೆಸುವಂತಿಲ್ಲ. ಶಾಲಾ ಕಾಲೇಜು ಆವರಣದ 200ಮೀಟರ್ ವ್ಯಾಪ್ತಿಯಲ್ಲಿ ಶಾಲಾ ಕಾಲೇಜು ಸಿಬ್ಬಂದಿ, ಆಯಾ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಬೇರೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಗುಂಪುಗೂಡುವುದನ್ನು ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹೈಕೋರ್ಟ್ ನೀಡುವ ತೀರ್ಪಿಗೆ ಜನರು ಕಾನೂನು ಕೈಗೆತ್ತಿಕೊಳ್ಳದೆ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು. ಯಾವುದೇ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶವಿದೆ. ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ನಿಷೇಧಾಜ್ಞೆಯಿರುವ ಜಿಲ್ಲೆಗಳು
ಬೆಂಗಳೂರು ನಗರ, ಹಾವೇರಿ, ಉತ್ತರ ಕನ್ನಡ, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಮೈಸೂರು, ವಿಜಯಪುರ, ಚಾಮರಾಜನಗರ, ಬೆಳಗಾವಿ, ಚಿಕ್ಕಮಗಳೂರು, ಧಾರವಾಡ, ಚಿತ್ರದುರ್ಗ, ರಾಮನಗರ, ದಾವಣಗೆರೆ.

ರಜೆ ಘೋಷಿಸಿರುವ ಜಿಲ್ಲೆಗಳು
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕಲಬುರಗಿ

ಇವುಗಳಿಗೆ ನಿರ್ಬಂಧ
1. ಗುಂಪು ಸೇರುವುದು.
2. ಪ್ರತಿಭಟನೆ, ರ್‍ಯಾಲಿ ನಡೆಸುವುದು.
3. ಐದು ಜನಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವುದು.
4.ಮಾರಕಾಸ್ತ್ರ ಸಾಗಿಸುವುದು.
5.ವಿಜಯೋತ್ಸವ ಆಚರಿಸುವುದು.
6.ಸಭೆ ಸಮಾರಂಭ ನಡೆಸುವುದು.

ಇದನ್ನೂ ಓದಿ : ಮಹತ್ವದ ಹಿಜಾಬ್ ತೀರ್ಪು ನಾಳೆ ಪ್ರಕಟಿಸಲಿರುವ ಹೈಕೋರ್ಟ್

Advertisement

Udayavani is now on Telegram. Click here to join our channel and stay updated with the latest news.

Next