ನವದೆಹಲಿ: ನಿಗದಿತ ಸಮವಸ್ತ್ರವಿರುವಂಥ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಮಿನಿ, ಮಿಡಿ ಸೇರಿ ತಮ್ಮಿಷ್ಟದ ಉಡುಗೆಗಳನ್ನು ತೊಟ್ಟು ಬರಲು ಅವಕಾಶವಿದೆಯೇ?
ಇದು ಹಿಜಾಬ್‌ಗೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಅರ್ಜಿದಾರರಿಗೆ ಸರ್ವೋಚ್ಚ ನ್ಯಾಯಾಲಯದ ನ್ಯಾ.ಹೇಮಂತ್ ಗುಪ್ತಾ ಮತ್ತು ನ್ಯಾ.ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠ ಕೇಳಿದ ಪ್ರಶ್ನೆ.
ಹೈಕೋರ್ಟ್ ಆದೇಶ ಪ್ರಶ್ನಿಸಿ 23 ಮೇಲ್ಮನವಿಗಳು ಸಲ್ಲಿಕೆಯಾಗಿದ್ದು, ಸೋಮವಾರ ವಿಚಾರಣೆ ನಡೆಸಿದ ನ್ಯಾಯಪೀಠ, “ನಿಮಗೆ ಧಾರ್ಮಿಕ ಹಕ್ಕುಗಳಿರಬಹುದು. ಹಾಗಂತ, ನಿಗದಿತ ಸಮವಸ್ತ್ರವಿರುವಂಥ ಶೈಕ್ಷಣಿಕ ಸಂಸ್ಥೆಗಳೊಳಗೆ ಈ ಹಕ್ಕನ್ನು ಒಯ್ಯುವುದು ಸರಿಯೇ? ಅವರು ನಿಮ್ಮ ಶಿಕ್ಷಣದ ಹಕ್ಕನ್ನು ಕಸಿಯುತ್ತಿಲ್ಲ. ಬದಲಿಗೆ ಸಮವಸ್ತ್ರದೊಂದಿಗೆ ಬನ್ನಿ ಎಂದಷ್ಟೇ ಹೇಳುತ್ತಿದ್ದಾರೆ’ ಎಂದು ಹೇಳಿತು.
ಅರ್ಜಿದಾರರ ಪರ ವಾದಿಸಿದ ವಕೀಲ ಸಂಜಯ್ ಹೆಗಡೆ, “ಬೆಳೆದಿರುವ ಮಹಿಳೆಗೆ ತನ್ನ ಘನತೆಯನ್ನು ಕಾಪಾಡಿಕೊಳ್ಳುವ ಕುರಿತು ತನ್ನದೇ ಆದ ಪರಿಕಲ್ಪನೆಯಿರುತ್ತದೆ. ಅಂಥ ಆಲೋಚನೆ ಮೇಲೆ ಆಕೆಗೇ ನಿಯಂತ್ರಣವಿರಬಾರದು ಎಂದು ನೀವು ಆಕೆಗೆ ಹೇಳುತ್ತೀರಾ?’ ಎಂದು ಕೇಳಿದರು.
ಹೆಗಡೆ, ಅವರ ವಾದವನ್ನು ಆಲಿಸಿದ ಬಳಿಕ ನ್ಯಾ. ಗುಪ್ತಾ ಅವರು, “ಅದು ಧಾರ್ಮಿಕ ಸಂಪ್ರದಾಯವಾಗಿರಬಹುದು. ಆದರೆ, ನಿಗದಿತ ಸಮವಸ್ತ್ರವಿರುವಂಥ ಶಾಲೆಗಳಿಗೆ ಹಿಜಾಬ್ ಧರಿಸಿಕೊಂಡು ಹೋಗಬಹುದೇ ಎನ್ನುವುದು ಇಲ್ಲಿರುವ ಪ್ರಶ್ನೆ’ ಎಂದು ಹೇಳಿದರು.
ಕರ್ನಾಟಕ ಸರ್ಕಾರದ ಪರ ವಕಾಲತ್ತು ವಹಿಸಿದ್ದ ಅಡ್ವೊಕೇಟ್ ಜನರಲ್ ಪಿ. ನಾವದಗಿ, “ಇಲ್ಲಿ ಸರ್ಕಾರ ಯಾರ ಹಕ್ಕುಗಳನ್ನೂ ಕಸಿದುಕೊಂಡಿಲ್ಲ. ಆಯಾ ಸಂಸ್ಥೆಗಳ ನಿಯಮಗಳನ್ನು ಪಾಲಿಸಿ ಎಂದಷ್ಟೇ ಹೇಳಿದೆ.
ರಾಜ್ಯದಲ್ಲಿ ಇಸ್ಲಾಮಿಕ್ ಆಡಳಿತ ಮಂಡಳಿಯಿರುವಂಥ ಕೆಲವು ಶಿಕ್ಷಣ ಸಂಸ್ಥೆಗಳಿವೆ. ಅವರು ಹಿಜಾಬ್‌ಗ ಅನುಮತಿ ನೀಡಿದರೆ, ಅದರಲ್ಲಿ ಸರ್ಕಾರ ಮಧ್ಯಪ್ರವೇಶಿಸಲ್ಲ’ ಎಂದರು. ನಂತರ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ಸೆ.7ಕ್ಕೆ ಮುಂದೂಡಿತು.