ದಾವಣಗೆರೆ: ದಾವಣಗೆರೆಯಲ್ಲಿ ಸೋಮವಾರ ಮತ್ತೆ ಹಿಜಾಬ್ ಗಲಾಟೆ ಭುಗಿಲೆದ್ದಿದೆ. ಎ.ವಿ. ಕಮಲಮ್ಮ ಮಹಿಳಾ ಕಾಲೇಜಿಗೆ ಹಿಜಾಬ್ ಧರಿಸಿ ಬಂದಿದ್ದ ಕೆಲ ವಿದ್ಯಾರ್ಥಿನಿಯರಿಗೆ ಅವಕಾಶ ನೀಡಲಿಲ್ಲ. ವಿದ್ಯಾರ್ಥಿನಿಯರು ತಮಗೆ ಹಿಜಾಬ್ ನೊಂದಿಗೆ ತರಗತಿಗಳಿಗೆ ಹಾಜರಾಗಲು ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದರು. ಪ್ರಾಚಾರ್ಯರು, ಉಪನ್ಯಾಸಕರು ಸಾಕಷ್ಟು ಬಾರಿ ಮನವರಿಕೆ ಮಾಡಿಕೊಟ್ಟರೂ ವಿದ್ಯಾರ್ಥಿನಿಯರು ಮಾತು ಕೇಳಲಿಲ್ಲ. ಕೊನೆಗೆ ಕಾಲೇಜು ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಯೊಬ್ಬರೂ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು. ನ್ಯಾಯಾಲಯದ ಆದೇಶದ ಅನ್ವಯ ಹಿಜಾಬ್ ತೆಗೆದಿರಿಸಿ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು. ಆದರೆ, ವಿದ್ಯಾರ್ಥಿನಿಯರು ಪಟ್ಟು ಬಿಡಲಿಲ್ಲ.
ತರಗತಿಗಳಿಗೆ ಹಾಜರಾಗಲು ಕಷ್ಟ ಆಗುವಂತಹ ವಿದ್ಯಾರ್ಥಿನಿಯರಿಗೆ ಆನ್ ಲೈನ್ ತರಗತಿಗಳಿಗೆ ಅವಕಾಶ ಮಾಡಿಕೊಡಲಾಗುವುದು. ಹಾಗಾಗಿ ಕಾಲೇಜು ಎದುರು ಕುಳಿತುಕೊಳ್ಳದೆ ಮನೆಗಳಿಗೆ ತೆರಳಿ ಎಂದು ಕೇಳಿಕೊಂಡರು. ವಿದ್ಯಾರ್ಥಿನಿಯರು ನಮಗೂ ಆಫ್ ಲೈನ್ ತರಗತಿಗಳಿಗೆ ಅನುಮತಿ ನೀಡಬೇಕು. ಇಲ್ಲವೇ ಎಲ್ಲರಿಗೂ ಆನ್ ಲೈನ್ ಕ್ಲಾಸ್ ನಡೆಸಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಸೈಕಲ್ ಗೆ ಅಪಮಾನ…ಇಡೀ ದೇಶಕ್ಕೆ ಅವಮಾನ ಮಾಡಿದಂತೆ: ಪ್ರಧಾನಿ ವಿರುದ್ಧ ಅಖಿಲೇಶ್
ಆನ್ ಲೈನ್ ತರಗತಿಗಳಿಂದ ಏನು ಪ್ರಯೋಜನ ಆಗುವುದಿಲ್ಲ. ನಮಗೂ ತರಗತಿಗಳಿಗೆ ಹಾಜರಾಗಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು. ಈ ನಡುವೆ ಕೆಲ ವಿದ್ಯಾರ್ಥಿನಿಯರು ನ್ಯಾಯಾಲಯದ ಆದೇಶವನ್ನೇ ವ್ಯಂಗ್ಯವಾಡಿದರು. ನ್ಯಾಯಾಲಯದ ಆದೇಶವೇ ತಪ್ಪಾಗಿದೆ. ಹಾಗಾಗಿ ನೀವು ಪ್ರಾಚಾರ್ಯರು, ಉಪನ್ಯಾಸಕರು ನ್ಯಾಯ ಒದಗಿಸಬೇಕು. ನಿಮ್ಮ ಮೂಲಕ ನ್ಯಾಯಾಲಯದ ಗಮನಕ್ಕೆ ತರುವಂತೆ ಮನವಿ ಮಾಡಿದರು.