Advertisement

ಹಿಜಾಬ್‌ ಸಂಘರ್ಷ: ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ

02:11 PM Feb 20, 2022 | Team Udayavani |

ಬೆಳಗಾವಿ: ಇಲ್ಲಿಯ ಸದಾಶಿವ ನಗರದ ವಿಜಯ ಪ್ಯಾರಾ ಮೆಡಿಕಲ್‌ ಕಾಲೇಜಿನಲ್ಲಿ ಹಿಜಾಬ್‌ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿವರೆಗೆ ರಜೆ ನೀಡಲಾಗಿದೆ. ಈ ಬಗ್ಗೆ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರಕಾಶ ಪಾಟೀಲ, ಹಿಜಾಬ್‌ ಧರಿಸಿಕೊಂಡು ವಿದ್ಯಾರ್ಥಿನಿಯರು ಬರುತ್ತಿದ್ದಾರೆ. ಹೈಕೋರ್ಟ್‌ ಮಧ್ಯಂತರ ತೀರ್ಪು ಪಾಲನೆ ಮಾಡಬೇಕಾದ ಅಗತ್ಯವಿದೆ. ಹೀಗಾಗಿ ಅನಿರ್ದಿಷ್ಟಾವಧಿವರೆಗೆ ರಜೆ ನೀಡಲಾ ಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

Advertisement

ಕೆಲ ದಿನಗಳ ನಂತರ ಎಂದಿನಂತೆ ತರಗತಿಗಳು ಆರಂಭವಾಗಲಿವೆ. ಸದ್ಯಕ್ಕೆ ಆನ್‌ಲೈನ್‌ ಕ್ಲಾಸ್‌ಗಳು ಇಲ್ಲ. ಕಾಲೇಜು ಮರಳಿ ಆರಂಭವಾದ ಬಳಿಕ ಹೆಚ್ಚುವರಿ ಕ್ಲಾಸ್‌ಗಳನ್ನು ತೆಗೆದುಕೊಳ್ಳಲಾಗುವುದು. ಯಾವುದೇ ಮಕ್ಕಳಿಗೂ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ರಜೆ ನೀಡಲಾಗಿದೆ ಎಂದು ತಿಳಿಸಿದರು.

ಮನವೊಲಿಕೆ ಯತ್ನ ವಿಫಲ: ವಿಜಯ ಪ್ಯಾರಾ ಮೆಡಿಕಲ್‌ ಕಾಲೇಜಿನಲ್ಲಿ ದಿನದಿಂದ ದಿನಕ್ಕೆ ಹಿಜಾಬ್‌ ಸಂಘರ್ಷ ಹೆಚ್ಚಾಗುತ್ತಿದ್ದು, ಶನಿವಾರವೂ ವಿದ್ಯಾರ್ಥಿನಿಯರು ಬುರ್ಖಾ ಹಾಗೂ
ಹಿಜಾಬ್‌ ಧರಿಸಿಕೊಂಡು ಬಂದಿದ್ದರು. ಈ ವೇಳೆ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ವಿದ್ಯಾರ್ಥಿನಿಯರನ್ನು ಮನವೊಲಿಸಲು ಯತ್ನಿಸಿದರು. ಆದರೆ ವಿದ್ಯಾರ್ಥಿನಿಯರು ಪಟ್ಟು ಸಡಿಲಿಸಲಿಲ್ಲ. ನಂತರ ಕಾಲೇಜು ಹೊರಗೆ ಬಂದು 12 ವಿದ್ಯಾರ್ಥಿನಿಯರು ಪ್ರತಿಭಟನೆ  ನಡೆಸಿದರು.

ಎರಡು ದಿನಗಳಿಂದ ಬೇರೆಯವರಿಗೆ ತರಗತಿಗಳು ನಡೆದಿವೆ. ನಾವು ತರಗತಿಗೆ ಹಾಜರಾಗಿಲ್ಲ. ನಮಗೆ ತೊಂದರೆ ಆಗುತ್ತಿದೆ ಹೊರತು ಅನ್ಯ ವಿದ್ಯಾರ್ಥಿನಿಯರಿಗಲ್ಲ. ಟಿಕ್‌ಟಾಕ್‌, ಇನ್‌ಸ್ಟಾಗ್ರಾಂ ರೀಲ್ಸ್‌ ಮಾಡುವಾಗ ಹಿಜಾಬ್‌ ತೆಗೆಯುತ್ತಾರೆ ಎಂಬ ಹೇಳಿಕೆ ನೀಡಿದ್ದ ಸಹಪಾಠಿಗಳನ್ನು ವಿಚಾರಿಸಲು ವಿದ್ಯಾರ್ಥಿನಿಯರು ಗೇಟ್‌ ಬಳಿ ನಿಂತಿದ್ದರು. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಬಹುದು ಎಂಬುದು ಅರಿವಿಗೆ ಬರುತ್ತಿದ್ದಂತೆ ಪ್ರಾಚಾರ್ಯರು ರಜೆ ನೀಡಿದ್ದಾರೆ. ಪ್ರಾಚಾರ್ಯರು ರಜೆ ಘೋಷಿಸುತ್ತಿದ್ದಂತೆ ಪ್ರತಿಭಟನಾನಿರತ ವಿದ್ಯಾರ್ಥಿನಿಯರು, ಲಿಖೀತ ಆದೇಶ
ನೀಡಬೇಕು. ಮೊನ್ನೆ ರಜೆ ಎಂದು ಘೋಷಿಸಿ ಬೇರೆಯವರಿಗೆ ತರಗತಿ ತೆಗೆದುಕೊಂಡಿದ್ದಾರೆ. ಈಗ ನಮಗೆ ಲಿಖೀತ ಆದೇಶ ನೀಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್‌ ಬಂದೋಬಸ್ತ್ ನಿಯೋಜಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಹಾಗೂ ಬೇರೆಯ ವರು ಕಾಲೇಜು ಬಳಿ ಬಾರದಂತೆ ತಡೆಯಲು ಪೊಲೀ ಸರು ನಿಗಾ ಇಟ್ಟಿದ್ದಾರೆ. ನಾಲ್ವರು ಮಹಿಳಾ ಪೇದೆ ಸೇರಿ 10 ಜನ ಪೊಲೀಸರು ಸ್ಥಳದಲ್ಲಿ ಭದ್ರತೆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next