Advertisement

ಹಿಜಾಬ್‌ ಪ್ರಕರಣ: ವಿದ್ಯಾರ್ಥಿಗಳಿಗೆ ಸರಕಾರದ ಮಾರ್ಗಸೂಚಿ ಮನವರಿಕೆ ಮಾಡುವ ಪ್ರಯತ್ನ

12:59 AM Feb 08, 2022 | Team Udayavani |

ಉಡುಪಿ: ಹಿಜಾಬ್‌ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಜಿಲ್ಲಾಡಳಿತದಿಂದ ವಿವರಣೆ ಕೋರಿದ್ದರ ನಡುವೆಯೇ ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಕುರಿತ ಸರಕಾರದ ಮಾರ್ಗಸೂಚಿಯನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಪ್ರಯತ್ನ ಸೋಮವಾರ ನಡೆದಿದೆ.

Advertisement

ಈ ಮಧ್ಯೆ ಎಂಜಿಎಂ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗುಂಪೊಂದು ಕೇಸರಿ ಶಾಲು ಧರಿಸುವುದಾಗಿ ಹೇಳಿತು. ಮುನ್ಸೂಚನೆ ಅರಿತ ಕಾಲೇಜು ಆಡಳಿತ ಮಂಡಳಿಯವರು ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನಷ್ಟನ್ನೇ ಧರಿಸಬೇಕು ಎಂಬುದನ್ನು ವಿವರಿಸಿತು. ವಿದ್ಯಾರ್ಥಿನಿಯರಿಗೂ ಸರಕಾರದ ಮಾರ್ಗಸೂಚಿ ಬಗ್ಗೆ ಮನವರಿಕೆ ಮಾಡಿ ಕಾಲೇಜಿಗೆ ಮಧ್ಯಾಹ್ನ ಅನಂತರ ರಜೆ ನೀಡಲಾಯಿತು. ಮಂಗಳವಾರ ಪ್ರ್ಯಾಕ್ಟಿಕಲ್‌ ತರಗತಿಯಷ್ಟೇ ಇರಲಿದೆ ಎಂದು ಎಂಜಿಎಂ ಪ. ಪೂ. ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ. ಮುಂಜಾಗ್ರತೆ ಹಿನ್ನೆಲೆಯಲ್ಲಿ ಮೀಸಲು ಪೊಲೀಸ್‌ ತುಕಡಿಯನ್ನು ಕಾಲೇಜಿನ ಸಮೀಪ ನಿಯೋಜಿಸಲಾಗಿತ್ತು.

ಸೋಮವಾರ ಸಹಬಾಳ್ವೆ ಸಂಘಟನೆ ವತಿಯಿಂದ ಶಾಂತಿ ಕದಡುವ ಪ್ರಯತ್ನ ಮಾಡುವ ಶಕ್ತಿಗಳ ವಿರುದ್ಧ ಕ್ರಮ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು. ನಗರದ ಹುತಾತ್ಮ ಸ್ಮಾರಕದ ಬಳಿ ಸಿಎಫ್ಐ ನೇತೃತ್ವದಲ್ಲಿ ಹಲವು ಮುಸ್ಲಿಂ ಮಹಿಳೆಯರು ಸರಕಾರದ ಧೋರಣೆ ಖಂಡಿಸಿ ಪ್ರತಿಭಟಿಸಿದರು.

ಹಿಜಾಬ್‌ ವಿವಾದ ದೇಶಾದ್ಯಂತ ಚರ್ಚೆಯಾಗುತ್ತಿದ್ದು, ಉಡುಪಿ ಹೆಸರು ಅನಗತ್ಯ ಕಾರಣಕ್ಕೆ ಮುನ್ನೆಲೆಗೆ ತಂದಿದೆ. ರಾಷ್ಟ್ರೀಯ ಮಾಧ್ಯಮಗಳೂ ಈ ಸುದ್ದಿಯತ್ತಲೇ ಗಮನ ಕೇಂದ್ರೀಕರಿಸಿವೆ.

ಪ್ರಾಂಶುಪಾಲರ ಸ್ಪಷ್ಟನೆ
ಹಿಜಾಬ್‌ ವಿವಾದ ಹುಟ್ಟಿಕೊಂಡ ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರುದ್ರೆಗೌಡ ಅವರು ಹೇಳುವಂತೆ, ಕಾಲೇಜಿನಲ್ಲಿರುವ 1 ಸಾವಿರ ವಿದ್ಯಾರ್ಥಿನಿಯರ ಪೈಕಿ ಪ್ರೌಢಶಾಲೆಯಲ್ಲಿ 25 ಮತ್ತು ಪಿಯುಸಿಯಲ್ಲಿ 75 ಮಂದಿ ಮುಸ್ಲಿಂ ಸಮುದಾಯದವರು ಕಲಿಯುತ್ತಿದ್ದಾರೆ. ಎರಡು ತಿಂಗಳ ಈಚೆಗೆ 6 ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಲು ಆರಂಭಿಸಿದರು. ಕೂಡಲೇ ಪೋಷಕರನ್ನು ಕರೆದು ಕೆಲವು ಸಭೆ ನಡೆಸಿ ವಿವರಿಸಲಾಯಿತು. ಆ ಬಳಿಕ ನಾಲ್ವರು ವಿದ್ಯಾರ್ಥಿನಿಯರು ಮಾತ್ರ ಹಿಜಾಬ್‌ ಧರಿಸುತ್ತಿದ್ದಾರೆ ಎಂದಿದ್ದಾರೆ. ಇದಲ್ಲದೇ ಆರಂಭದಲ್ಲೇ ವಸ್ತ್ರಸಂಹಿತೆಯನ್ನು ಎಲ್ಲ ವಿದ್ಯಾರ್ಥಿಗಳೂ ಒಪ್ಪಿಕೊಂಡಿರುವ ಬಗ್ಗೆ ದಾಖಲೆಯನ್ನು ಕಾಲೇಜಿನ ಕಡೆಯಿಂದ ಬಿಡುಗಡೆ ಮಾಡಲಾಗಿತ್ತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next