ಹುಳಿಯಾರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪಟ್ಟಣ ವ್ಯಾಪ್ತಿಯಲ್ಲಿ ಕೈಗೊಂಡಿರುವ ರಾಷ್ಟ್ರೀಯ ಹೆದ್ದಾರಿ 243ರ ಅಗಲೀಕರಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ತಂದೊಡ್ಡಿದೆ.
ನಾಗರಿಕರಿಗೆ ಕಷ್ಟ: ಸರ್ವೀಸ್ ರಸ್ತೆ, ಸುಸಜ್ಜಿತ ಒಳಚರಂಡಿ ಹಾಗೂ ಪಾದಚಾರಿ ಮಾರ್ಗ ನಿರ್ಮಿಸುವ ಯೋಜನೆ ಇದಾಗಿದೆ. 2017ರ ಡಿಸೆಂಬರ್‌ನಲ್ಲಿ ಶಿರಾ ಭಾಗದಿಂದ ಕಾಮಗಾರಿ ಆರಂಭಗೊಂಡಿತು. 2018 ರ ಅಕ್ಟೋಬರ್ ವೇಳಗೆ ಹುಳಿಯಾರು ಪಟ್ಟಣ ತಲುಪಿತು. ಆರಂಭದಲ್ಲಿ ಬಿರುಸಿನಿಂದ ನಡೆಯುತ್ತಿದ್ದ ಕಾಮಗಾರಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ವಿಳಂಬವಾಗುತ್ತಿರುವುದು ನಾಗರಿಕರಿಗೆ ಕಷ್ಟಪಡುವಂತಾಗಿದೆ.
ಅರ್ಧಕ್ಕೆ ನಿಂತ ಕಾಮಗಾರಿ: ಹೆದ್ದಾರಿ ಪಕ್ಕದಲ್ಲೇ ಎರಡು ಅಡಿ ಆಳವಾದ ಚರಂಡಿ ತೆಗೆದು ಹಾಗೆಯೇ ಬಿಡಲಾಗಿದೆ. ಪಟ್ಟಣದ ಎಪಿಎಂಎಸಿ ಮುಂಭಾಗ, ರಾಮಗೋಪಾಲ್ ಸರ್ಕಲ್ ಸೇರಿದಂತೆ ಹಲವು ಕಡೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಎಲ್ಲೆಡೆ ಜಲ್ಲಿಕಲ್ಲಿನ ಗುಡ್ಡೆ, ರಸ್ತೆ ಅಗೆದು ಬಿಟ್ಟಿರುವುದು, ಜಲ್ಲಿ ಹಾಕಿರುವುದು, ಗುಂಡಿಗಳು, ಪೂರ್ಣವಾಗದ ಚರಂಡಿಗಳು ಕಾಣುತ್ತಿವೆ. ಪಟ್ಟಣ ಸಮೀಪದ ಎಸ್‌ಎಲ್ಆರ್ ಬಂಕ್‌ನಿಂದ ಎಪಿಎಂಸಿವರೆಗಿನ ಡಾಂಬರ್ ರಸ್ತೆ ಕಿತ್ತು ಏಳೆಂಟು ತಿಂಗಳಾಗಿದೆ. ರಸ್ತೆ ವಿಭಜಿಸಿ ಸುಮಾರು 3 ಅಡಿ ಆಳದವರಗೆ ಅರ್ಧ ಕಿಮೀ ರಸ್ತೆ ಕಿತ್ತು ಗುಂಡಿ ತೋಡಿದ್ದಾರೆ. ಒಂದು ಕಡೆ ರಸ್ತೆ ಕಾಮಗಾರಿ ಪ್ರಾರಂಭವಾಗದ್ದರಿಂದ ಉಳಿದ ಅರ್ಧ ರಸ್ತೆಯಲ್ಲಿಯೇ ಸಂಚರಿಸಬೇಕಾಗಿದೆ. ದ್ವಿಚಕ್ರ ವಾಹನಗಳು ಸೇರಿ ಭಾರಿ ವಾಹನಗಳು ಒಂದೇ ರಸ್ತೆಯಲ್ಲಿ ಸಂಚರಿಸುವುದರಿಂದ ಸ್ವಲ್ಪ ಯಾಮಾರಿದರೂ ಬಿದ್ದು ಗಾಯಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಗುಂಡಿಗಳಲ್ಲಿ ಕೊಳಚೆ ನೀರು: ಚರಂಡಿ ಮಾಡಲು ತೆಗೆದಿರುವ ಗುಂಡಿಗಳಲ್ಲಿ ಕೊಳಚೆ ನೀರು ನಿಂತು ಸಮಸ್ಯೆ ಎದುರಾಗುತ್ತಿದೆ. ಪಾದಚಾರಿಗಳು ಓಡಾಡಲು ಸಾಧ್ಯವಾಗುತ್ತಿಲ್ಲ. ರಸ್ತೆಬದಿಯಲ್ಲಿರುವ ಅಂಗಡಿ ಮಳಿಗೆ ವರ್ತಕರು ವ್ಯಾಪಾರ ವಹಿವಾಟು ನಡೆಸಲು ಪರದಾಡುವಂತಾಗಿದೆ. 2019ರ ಫೆಬ್ರವರಿಯಲ್ಲೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಹುಳಿಯಾರು ಪಟ್ಟಣದಲ್ಲಿ ಇನ್ನೂ ಒಳ ಚರಂಡಿ ಕಾಮಗಾರಿಯೇ ಪೂರ್ಣವಾಗಿಲ್ಲ. ಅಂತಹದರಲ್ಲಿ ರಸ್ತೆ ನಿರ್ಮಾಣ, ಪಾದಚಾರಿ ರಸ್ತೆ, ರಸ್ತೆ ಮಧ್ಯೆ ಡಿವೈಡರ್ ಹೀಗೆ ಅನೇಕ ಕಾಮಗಾರಿಗಳು ಇನ್ಯಾವಾಗ ಮುಗಿಯುವುದೋ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
● ಎಚ್.ಬಿ.ಕಿರಣ್ ಕುಮಾರ್