ದಾವಣಗೆರೆ: ಸದಾಕಾಲ ಪಾದಯಾತ್ರೆಮಾಡುತ್ತಿರುವ ಜೈನ ಸಾಧು-ಸಾಧ್ವಿಯರಿಗಾಗಿರಾಜ್ಯಾದ್ಯಂತ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲು ಜೈನ ಸಮಾಜ ನಿರ್ಧರಿಸಿದ್ದು, ಇದಕ್ಕಾಗಿ ಸಿದ್ಧತೆ ಆರಂಭಿಸಿದೆ.
ರಾಜ್ಯಾದ್ಯಂತ ಇರುವ ಮುಖ್ಯ ಹೆದ್ದಾರಿಗಳ ಬದಿ ಪ್ರತಿ 15 ಕಿಮೀಗೆ ಒಂದರಂತೆ ರಾಜ್ಯಾದ್ಯಂತ 60 ಕ್ಕೂ ಹೆಚ್ಚು ವಿಶ್ರಾಂತಿ ಗೃಹಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ಇದಕ್ಕಾಗಿಸೂಕ್ತ ನಿವೇಶನ ಖರೀದಿಗೆ ಸಿದ್ಧತೆ ನಡೆಸಿದೆ.
ಸ್ಥಳೀಯವಾಗಿರುವ ಜೈನ ಸಮುದಾಯದ ಟ್ರಸ್ಟ್‌ಗಳ ಮೂಲಕ ವಿಶ್ರಾಂತಿ ಗೃಹ ನಿರ್ಮಾಣಕ್ಕೆಯೋಗ್ಯ ಸ್ಥಳದಲ್ಲಿ 30/40 ಇಲ್ಲವೇ 15/20 ವಿಸ್ತೀರ್ಣದ ನಿವೇಶನ ಖರೀದಿಸಬೇಕು. ಖರೀದಿ ಪ್ರಕ್ರಿಯೆ ಮುಗಿದ ಬಳಿಕ ರಾಜ್ಯದಲ್ಲಿ ಒಟ್ಟು ಎಷ್ಟುವಿಶ್ರಾಂತಿ ಗೃಹಗಳು ನಿರ್ಮಾಣವಾಗಬೇಕು,ಯಾವೆಲ್ಲ ಸೌಲಭ್ಯ ಇರಬೇಕು ಎಂಬ ಬಗ್ಗೆ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವ ಮೂಲಕ ಸರ್ಕಾರದ ಅನುದಾನದಲ್ಲಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸಬೇಕು ಎಂದು ಜೈನ ಸಮಾಜ ಯೋಜನೆ ರೂಪಿಸಿದೆ.
ರಾಜ್ಯದಲ್ಲಿ ಎರಡು ಸಾವಿರಕ್ಕೂ ಅಧಿಕ ಜೈನ ಸಾಧು-ಸಾಧ್ವಿಯರು ಪಾದಯಾತ್ರೆ ಮಾಡುತ್ತಿದ್ದಾರೆ. ಇವರಿಗಾಗಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸುವ ಕುರಿತು ಜೈನ ಸಮುದಾಯದ ಮುಖಂಡರು ಇತ್ತೀಚೆಗೆ ಅಲ್ಪಸಂಖ್ಯಾತ ಇಲಾಖೆ ಸಚಿವ ಶ್ರೀಮಂತ ಪಾಟೀಲ್ ಅವರಿಗೂ ಮನವಿ ಸಲ್ಲಿಸಿದ್ದಾರೆ. ಸಚಿವರು ಸಕಾರಾತ್ಮಕ ಸ್ಪಂದಿಸಿದ್ದು, ಟ್ರಸ್ಟ್ ಗಳ ಮೂಲಕ ನಿವೇಶನ ಖರೀದಿಸಿ ಕಟ್ಟಡ ನಿರ್ಮಾಣದ ಬಗ್ಗೆ ಯೋಜನೆ ತಯಾರಿಸಿ ಕೊಡುವಂತೆ ಸೂಚಿಸಿದ್ದಾರೆ.
ವಿಶ್ರಾಂತಿ ಗೃಹ ಏಕೆ ಬೇಕು?: ಸನ್ಯಾಸ ದೀಕ್ಷೆ ಸ್ವೀಕರಿಸಿದ ಬಳಿಕ ಎಲ್ಲ ಸಂತಾಚಾರ್ಯರುಸತ್ಯ, ಧರ್ಮ, ಅಹಿಂಸೆ ಕುರಿತು ಬೋಧನೆಮಾಡಲು ದೇಶಾದ್ಯಂತ ಪಾದರಕ್ಷೆ ಇಲ್ಲದೇಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಸೂರ್ಯಾಸ್ತದನಂತರ ಕೆಲವು ಕಡೆ ಸರ್ಕಾರಿ ಶಾಲೆಗಳಲ್ಲಿವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ, ಎಲ್ಲ ಕಡೆ ಸರ್ಕಾರಿ ಶಾಲೆಗಳು ಸಿಗುವುದಿಲ್ಲ. ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿವಿಶ್ರಾಂತಿ ಗೃಹಗಳನ್ನು ನಿರ್ಮಿಸಲು ಜೈನ ಸಮುದಾಯ ಮುಂದಾಗಿದೆ.
ಜೈನ ಸನ್ಯಾಸಿಗಳು ರಾತ್ರಿ ಹೊತ್ತು ವಿಶ್ರಾಂತಿ ಪಡೆಯಲು ಯೋಗ್ಯ ವಿಶ್ರಾಂತಿ ಗೃಹಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲು ಆಲೋಚಿಸಿದ್ದು, ಇದಕ್ಕಾಗಿ ಸ್ಥಳೀಯ ಟ್ರಸ್ಟ್‌ಗಳ ಮೂಲಕ ನಿವೇಶನ ಖರೀದಿಸಲು ಸಿದ್ಧತೆ ನಡೆದಿದೆ.ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಪಡೆಯಲು ಯೋಜನೆ ರೂಪಿಸಲಾಗಿದೆ.
– ಗೌತಮ್ ಜೈನ್, ನಿರ್ದೇಶಕರು, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
–ಎಚ್.ಕೆ. ನಟರಾಜ