Advertisement
ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ಪ್ರತಿದಿನ ಆರು ಸಾವಿರಕ್ಕೂ ಮಿಕ್ಕಿ ವಾಹನಗಳು ಹಾದು ಹೋಗುತ್ತಿವೆ. ಬೃಹತ್ ಕಂಟೈನರ್ ಲಾರಿಗಳು, ಸರಕುಗಳನ್ನು ತುಂಬಿಕೊಂಡ ವಾಹನಗಳು, ಬಸ್‌ಗಳು, ಕಾರುಗಳು ಸಹಿತ ಜನಸಾಮಾನ್ಯರು ಸಂಚರಿಸುವ ದ್ವಿಚಕ್ರ ವಾಹನಗಳು ಅಪಾಯ ಭೀತಿಯೊಂದಿಗೆ ಹಾದು ಹೋಗುತ್ತಿವೆ. ತಿರುವುಗಳು, ಇಳಿಜಾರುಗಳು ಇರುವ ರಸ್ತೆಯಲ್ಲಿ ವಾಹನ ಚಲಾಯಿಸುವವರಿಗೆ ಮುಂಭಾಗದಿಂದ ಆಗಮಿಸುವ ವಾಹನಗಳು ಎರಡು ಮೀಟರ್ ಅಂತರದಲ್ಲಿ ಕೂಡ ಕಾಣಲಾಗದ ಸ್ಥಿತಿಯಲ್ಲಿ ಕಾಡುಪೊದೆಗಳು ಬೆಳೆದು ನಿಂತಿವೆ.ಕೆಲವು ವರ್ಷಗಳಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಒಳಪಡಿಸಿ ಆಯಾ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳ ಕಾಡುಪೊದೆಗಳನ್ನು ಕಡಿದು ತೆಗೆಯಲಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಈ ಕೆಲಸವೂ ನಡೆಯಲಿಲ್ಲ. ಕಳೆದ ಎರಡು ವರ್ಷಗಳಿಂದಲೇ ಹೆದ್ದಾರಿ ಬದಿಯ ಪೊದೆ ಕಡಿಯದಿರುವುದರಿಂದ ಹೆದ್ದಾರಿ ಬದಿಯಲ್ಲಿ ಅಪಾಯದ ಭೀತಿ ಕಂಡುಬರುತ್ತಿದೆ.
ಈ ವರ್ಷ ಕೂಡ ಕಾಡುಗಳನ್ನು ಕಡಿಯಲು ಕ್ರಮ ಕೈಗೊಳ್ಳದಿರುವುದರಿಂದ ಮುಂಭಾಗದಿಂದ ಬರುವ ವಾಹನಗಳನ್ನು ಗಮನಿಸಲು ಸಾಧ್ಯವಾಗದ ರೀತಿಯಲ್ಲಿ ಗಿಡಬಳ್ಳಿಗಳು ಬೆಳೆದಿವೆ. ಹೆದ್ದಾರಿ ಇಕ್ಕೆಲಗಳಲ್ಲಿ ಸ್ಥಾಪಿಸಲಾದ ಅಪಾಯ ಸೂಚನಾ ಫಲಕಗಳು, ಸುರಕ್ಷಾ ಫಲಕಗಳು, ಎಚ್ಚರಿಕೆ ಫಲಕಗಳು ಮೊದಲಾದವುಗಳು ಕಾಡುಪೊದೆಗಳಿಂದ ಮುಚ್ಚಲ್ಪಟ್ಟಿವೆ. ಇದು ಅನ್ಯ ರಾಜ್ಯಗಳು ಮುಂತಾದೆಡೆಗಳಿಂದ ವಾಹನದೊಂದಿಗೆ ಬರುವವರನ್ನು ಅಪಾಯಕ್ಕೊಳಗಾಗುವಂತೆ ಮಾಡುತ್ತಿವೆ.
ಇದೇ ವೇಳೆ ತಲಪಾಡಿ – ಕಾಲಿಕಡವು ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥಗೊಳಿಸಿ ಅಭಿವೃದ್ಧಿ ಮಾಡಲಿರುವ ಯೋಜನೆ ಕೂಡ ಒಂದಲ್ಲ ಒಂದು ನೆಪವೊಡ್ಡಿ ಮುಂದೂಡಲ್ಪಡುತ್ತಿದೆ. ಇತ್ತೀಚೆಗೆ ತೇಪೆ ಹಚ್ಚಿದರೂ ಒಂದೆಡೆ ಹೊಂಡಗುಂಡಿಗಳಿಂದ ಕೂಡಿರುವ ಹೆದ್ದಾರಿಯೂ ಸಂಚಾರಕ್ಕೆ ಅಯೋಗ್ಯವಾಗಿದ್ದು, ಇನ್ನೊಂದೆಡೆ ಕಾಡುಪೊದೆಗಳು ಪ್ರಯಾಣಕ್ಕೆ ಸಂಚಕಾರವಾಗುತ್ತಿದೆ. ಪ್ರಯಾಣಿಕರ ಗೋಳು
ನಿತ್ಯ ಪ್ರಯಾಣಿಕರಿಗಂತೂ ಕಾಸರಗೋಡು ಜಿಲ್ಲೆಯ ಹೆದ್ದಾರಿ ಸಂಚಾರವು ತೀವ್ರ ಸಮಸ್ಯೆಯಾಗಿ ಕಾಡುತ್ತಿದೆ. ಕೂಡಲೇ ಕೇರಳ ಸರಕಾರವು ಇನ್ನಾದರೂ ಈ ಬಗ್ಗೆ ಗಮಹರಿಸಿ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಲಾಗಿದೆ.