Advertisement

ಹೆದ್ದಾರಿ ಅವ್ಯವಸ್ಥೆ: ಗಂಭೀರ ಚರ್ಚೆ, ವಿಶೇಷ ಸಭೆಗೆ ಆಗ್ರಹ

10:05 AM May 01, 2022 | Team Udayavani |

ಕುಂದಾಪುರ: ಚತುಷ್ಪಥ ಕಾಮಗಾರಿ ಅವ್ಯವಸ್ಥೆಯ ವಿರುದ್ಧ ಜನರು ಪುರಸಭೆಗೆ ಹಿಡಿಶಾಪ ಹಾಕುತ್ತಾರೆ. ರಸ್ತೆ ಅವ್ಯವಸ್ಥೆಯ ಕುರಿತು ಜನರಿಂದ ನೇರ ಟೀಕೆಗೊಳಗಾಗುತ್ತಿರುವವರು ನಾವು. ಆದರೆ ಇತ್ತೀಚೆಗೆ ಡಿವೈಎಸ್ಪಿ ಅವರು ಅಪಘಾತ ನಿಯಂತ್ರಿಸುವಲ್ಲಿ ಏಕಮುಖ ಸಂಚಾರ ಆರಂಭಿಸುವ ಬಗ್ಗೆ ಹೇಳಿಕೆ ನೀಡಿದ ಹೇಳಿಕೆ ಗೊಂದಲ ಉಂಟು ಮಾಡಿದ್ದು, ಈ ಬಗ್ಗೆ ಡಿವೈಎಸ್ಪಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎನ್ನುವ ಆಗ್ರಹ ಶನಿವಾರ ನಡೆದ ಕುಂದಾಪುರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಕೇಳಿಬಂತು.

Advertisement

ವಿಪಕ್ಷ ಪುರಸಭಾ ವ್ಯಾಪ್ತಿಯಲ್ಲಿ ಸದಸ್ಯ ಚಂದ್ರಶೇಖರ ಖಾರ್ವಿ ಮಾತನಾಡಿ, ಒಂದು ನಿರ್ಣಯ ತೆಗೆದುಕೊಳ್ಳುವಾಗ ಸ್ಥಳೀಯಾಡಳಿತದ ನಿರ್ಣಯ ಆವಶ್ಯಕತೆ ಇರುವುದಿಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉತ್ತರಿಸಿ, ಕುಂದಾಪುರ ಮೇಲ್ಸೇತುವೆ ಆರಂಭವಾಗುವ ಮೊದಲು ಕೆಲವೆಡೆ ಏಕಮುಖ ಸಂಚಾರಕ್ಕೆ ತಾತ್ಕಾಲಿಕ ಆದೇಶ ನೀಡಲಾಗಿತ್ತು. ಆದರೆ ಕೆಲವೊಂದು ನಿಯಮ ಮಾತ್ರ ಪಾಲಿಸಲಾಗುತ್ತಿದೆ. ನಿಯಮಗಳನ್ನು ರೂಪಿಸುವಾಗ ಸ್ಥಳೀಯಾಡಳಿತದ ಗಮನಕ್ಕೆ ತಂದು ಅಧಿಸೂಚನೆ ಹೊರಡಿಸುವುದು ಸೂಕ್ತ ಎಂದರು. ಸರ್ವಿಸ್‌ ರಸ್ತೆಯಲ್ಲಿ ಏಕಮುಖ ಸಂಚಾರ ನಿಯಮ ರೂಪಿಸಿದರೆ ದ್ವಿಚಕ್ರ ವಾಹನ ಹಾಗೂ ರಿಕ್ಷಾಗಳಿಗೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಗಮನ ಹರಿಸಬೇಕು. ಹಾಗೂ 2019ರ ತಾತ್ಕಾಲಿಕ ಆದೇಶ ಈಗ ಊರ್ಜಿತದಲ್ಲಿ ಇಲ್ಲ. ಇದರ ಬಗ್ಗೆ ಚರ್ಚಿಸಲು, ಜನಹಿತಾಸಕ್ತಿಯ ಬಗ್ಗೆ ಮಾತನಾಡಲು ಪುರಸಭೆಗೂ ಹಕ್ಕಿದೆ ಎಂದು ಚಂದ್ರಶೇಖರ ಖಾರ್ವಿ ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಸ್ಥಾಯೀ ಸಮಿತಿ ಅಧ್ಯಕ್ಷ ಗಿರೀಶ ಜಿ.ಕೆ. ಪಾರ್ಕಿಂಗ್‌ ವ್ಯವಸ್ಥೆ ಹಾಗೂ ಏಕಮುಖ ಸಂಚಾರದ ವ್ಯವಸ್ಥೆಯ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಬೇಕು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕವೇ ಆದೇಶ ನೀಡಬೇಕು ಎಂದರು. ನಾಮನಿರ್ದೇಶಿತ ಸದಸ್ಯ ರತ್ನಾಕರ ಕುಂದಾಪುರ, ಪ್ರಭಾಕರ ದ್ವನಿಗೂಡಿಸಿದರು.

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್‌ ಮಾತನಾಡಿ, ಈ ಬಗ್ಗೆ ಡಿವೈಎಸ್ಪಿ ಸಹಿತ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ವಿಷಯದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.

ಸದಸ್ಯ ಪ್ರಭಾಕರ ಮಾತನಾಡಿ, ಕುಂದಾಪುರದಲ್ಲಿ ಆಟೋ ನಿಲ್ದಾಣಕ್ಕೆ ಅಧಿಕೃತ ಸ್ಥಳವಿಲ್ಲ ಎಂದು ಪುರಸಭೆಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದ್ದಾರೆ. ಅವರಿಗೆ ಸೂಕ್ತ ಜಾಗ ಗುರುತಿಸುವಂತೆ ಆರ್‌. ಟಿ.ಒ. ಹಾಗೂ ತಹಶೀಲ್ದಾರರಿಗೆ ಮನವರಿಕೆ ಮಾಡಬೇಕಿದೆ ಎಂದರು. ಇದಕ್ಕೆ ಸಂಬಂಧಿಸಿ ಚಂದ್ರಶೇಖರ ಖಾರ್ವಿ, ಗಿರೀಶ್‌ ಜಿ.ಕೆ. ಹಾಗೂ ಇತರೆ ಅನೇಕ ಸದಸ್ಯರು ಸಹ ಮಾತನಾಡಿ, ಕುಂದಾಪುರ ಆಟೋರಿಕ್ಷಾದವರ ಬೇಡಿಕೆಯ ಬಗ್ಗೆ ಸಭೆ ನಡೆಸಿ ಎಂದು ಸದಸ್ಯರು ಒತ್ತಾಯಿಸಿದರು. ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಪುರಸಭಾ ವ್ಯಾಪ್ತಿಯಲ್ಲಿ 24-25 ಕಡೆಗಳಲ್ಲಿ ಚದುರಿದಂತೆ ರಿಕ್ಷಾ ನಿಲ್ದಾಣಗಳಿವೆ. ಅವರು ಇರುವಲ್ಲಿಯೇ ನಿಲ್ದಾಣ ಮಾಡಿ ಕೊಡುವಂತೆ ಮಾನವಿ ಮಾಡಿದ್ದಾರೆ. ಸ್ಥಳದ ಬಗ್ಗೆ ಕಂದಾಯ ಇಲಾಖೆಯಿಂದ ಮಾಹಿತಿ ಪಡೆದು ಆರ್‌.ಟಿ.ಒ. ಮಾಹಿತಿ ನೀಡಬೇಕಾಗುತ್ತದೆ ಎಂದರು.

Advertisement

ಮತ್ತೆ ಯುಜಿಡಿ ವಿಚಾರ ಪ್ರಸ್ತಾವ

ಯುಜಿಡಿ ವೆಟ್‌ವೆಲ್‌ಗೆ ಜಾಗ ಖರೀದಿಯ ದರ ನಿಗದಿ ವಿಚಾರ ಲೋಕಾಯುಕ್ತ ತನಿಖೆಯಲ್ಲಿರುವಾಗಲೇ ಮತ್ತೆ 5 ಸೆಂಟ್ಸ್‌, 1 ಸೆಂಟ್ಸ್‌ ಜಾಗ ಖರೀದಿಗೆ ಮುಂದಾಗಿರುವುದು ಏಕೆ. 26 ಸೆಂಟ್ಸ್‌ ಜಾಗದ ದರಪಟ್ಟಿಯ ವಿಚಾರದಲ್ಲಿಯೇ ಅಸಮಾಧಾನವಾಗಿ ಈಗ ತನಿಖೆ ನಡೆಯುತ್ತಿದೆ. ಈ ನಡುವೆ ಮತ್ತೆ ಅಲ್ಲಿಯೇ ಜಾಗ ಖರೀದಿಯ ಬಗ್ಗೆ ಆತುರ ಏಕೆ ಎಂದು ವಿಪಕ್ಷ ಸದಸ್ಯೆ ದೇವಕಿ ಸಣ್ಣಯ್ಯ ಪ್ರಶ್ನಿಸಿದರು.

ಸದಸ್ಯ ಪ್ರಭಾಕರ ಇದಕ್ಕೆ ಪ್ರತಿಕ್ರಿಯಿಸಿ 5 ಸೆಂಟ್ಸ್‌ ಮತ್ತು 1 ಸೆಂಟ್ಸ್‌ ಜಾಗ ಖರೀದಿಗೆ ವಿರೋಧ ವ್ಯಕ್ತಪಡಿಸಿಲ್ಲ. ಯುಜಿಡಿ ಕಾಮಗಾರಿ ನಡೆಯಬೇಕಿದೆ. ಇಲ್ಲವಾದರೆ ಜನ ದಂಗೆ ಏಳುತ್ತಾರೆ ಎಂದರು. ರಾಘವೇಂದ್ರ ಖಾರ್ವಿ ಇದಕ್ಕೆ ಧ್ವನಿಗೂಡಿಸಿದರು. ಸದಸ್ಯ ಶ್ರೀಧರ ಶೇರೆಗಾರ್‌ ಮಾತನಾಡಿ ಸ್ಥಳ ಖರೀದಿಗೆ ವಿರೋಧ ಮಾಡಿಲ್ಲ, ಹಿಂದಿನ ದರ ಪಟ್ಟಿಯಲ್ಲಿಯೇ ಇದೆ. ಕಾನೂನು ವ್ಯಾಪ್ತಿಯಲ್ಲಿ ನಡೆಯಲಿ. ಮಾತು ಮಾತಿಗೂ ಜನ ದಂಗೆ ಏಳುತ್ತಾರೆ ಅನ್ನಬೇಡಿ. ನಿಮ್ಮ ವ್ಯಾಪ್ತಿಯಲ್ಲಿ ಇನ್ನೂ ಯುಜಿಡಿಯ ಪೈಪ್‌ ಲೈನ್‌ ಕಾಮಗಾರಿ ನಡೆಯಲೇ ಇಲ್ಲ. ಈ ಕಾರಣಕ್ಕಾಗಿ ಅಲ್ಲಿ ಜನರು ದಂಗೆ ಏಳುತ್ತಾರೆ ಎಂದರು. ನಿತ್ಯಾನಂದ ಕೆ.ಜಿ. ಇದಕ್ಕೆ ಧ್ವನಿಗೂಡಿಸಿದರು. ಗಿರೀಶ ಜಿ.ಕೆ. ಮಾತನಾಡಿ, ಈ ಹಿಂದೆ ನಾನು ದೂರು ನೀಡಿದಂತೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಸ್ಥಳದ ಬಗ್ಗೆ ಆಕ್ಷೇಪ ಮಾಡಿಲ್ಲ, ಸದಸ್ಯರು ಸಭೆಗೆ ತಪ್ಪು ಮಾಹಿತಿ ನೀಡಬೇಡಿ, ಬೇಕಿದ್ದರೆ ನಾನು ನೀಡಿದ ದೂರಿನ ಪ್ರತಿ ತಗೆದು ನೋಡಿ ಎಂದು ಸವಾಲು ಹಾಕಿದರು.

ಕಾಂಡ್ಲಾವನದ ಬಗ್ಗೆ ಇಲಾಖೆಯಿಂದ ಮಾಹಿತಿ ಕೇಳಿದ್ದು ಮಾಹಿತಿ ಅಸಮರ್ಪಕವಾಗಿದೆ ಎಂದು ಚಂದ್ರಶೇಖರ್‌ ಖಾರ್ವಿ ದೂರಿದರು. ಪೌರ ಕಾರ್ಮಿಕರ 12 ಮನೆಗಳು ಅಪೂರ್ಣವಾಗಿದ್ದು, ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಿದ್ದು, ಅವರು ತಮ್ಮ ಇಲಾಖೆಯಿಂದ 12 ಲಕ್ಷ ರೂ. ಮರುಪಾವತಿಯ ನೆಲೆಯಲ್ಲಿ ಪಾವತಿಸಿದ್ದಾರೆ ಎಂದರು.

ಸದಸ್ಯ ಅಬುಮಹಮ್ಮದ್‌ ಮಾತನಾಡಿ, ಫೆರ್ರಿ ಪಾರ್ಕ್‌ನಲ್ಲಿ ದೀಪ ಸರಿಯಾಗಿಲ್ಲ. ಆಟಿಕೆಗಳು ಹಾಳಾಗಿದ್ದು ಅವುಗಳನ್ನು ಸ್ಥಳಾಂತರಿಸಬೇಕು. ಪೇರಿ ಉದ್ಯಾವನವನ್ನು ವ್ಯವಸ್ಥಿತಗೊಳಿಸಬೇಕು ಎಂದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿಗಳು ಈಗಾಗಲೇ ಪಾರ್ಕಲ್ಲಿ ಮಿನಿ ಹೈಮಾಸ್ಟ್‌ ದೀಪ ಟೈಮರ್‌ನೊಂದಿಗೆ ಅಳವಡಿಸಲು ಅಧ್ಯಕ್ಷರು ಅನುಮೋದನೆ ನೀಡದ್ದಾರೆ ಎಂದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next