Advertisement

ಹೆದ್ದಾರಿ ಮದ್ಯದಂಗಡಿ: ಅಡ್ಡದಾರಿ ಹಿಡಿದ್ರೆ ಅನುದಾನ ಕಟ್‌

03:45 AM Apr 07, 2017 | Team Udayavani |

ಹೆದ್ದಾರಿ ಮದ್ಯದಂಗಡಿ ತೆರವಿಗೆ ಖಡಕ್‌ ಎಚ್ಚರಿಕೆ

Advertisement

ಬೆಂಗಳೂರು: ಸುಪ್ರೀಂಕೋರ್ಟ್‌ ಆದೇಶದಿಂದ ಪಾರಾಗಲು ಈಗಿರುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡಿ ಮದ್ಯದ ಅಂಗಡಿಗಳ ರಕ್ಷಣೆಗೆ ಮುಂದಾದರೆ, ಹೆದ್ದಾರಿ ಮತ್ತು ರಸ್ತೆ ಅಭಿವೃದ್ಧಿಗಾಗಿ ರಾಜ್ಯಗಳಿಗೆ ನೀಡುವ ಸಾವಿರಾರು ಕೋಟಿ ರೂ. ಅನುದಾನಕ್ಕೆ ಕತ್ತರಿ ಬೀಳಲಿದೆ ಎಂದು ಕೇಂದ್ರ ಸರ್ಕಾರ ಖಡಕ್‌ ಎಚ್ಚರಿಕೆ ನೀಡಿದೆ.
ಈ ಬೆನ್ನಲ್ಲೇ, ಸುಪ್ರೀಂ ಕೋರ್ಟ್‌ ಆದೇಶದಂತೆ ಹೆದ್ದಾರಿ ಬದಿಯ ಮದ್ಯದ ಅಂಗಡಿಗಳನ್ನು ತೆರವುಗೊಳಿಸುವ ಬದಲು ಕಾನೂನು ತಿದ್ದುಪಡಿ ಮೂಲಕ ಅದನ್ನು ಉಳಿಸಿಕೊಳ್ಳಲು ಚಿಂತಿಸಿದ್ದ ರಾಜ್ಯ ಸರ್ಕಾರ ಇದೀಗ ಆ ಯೋಚನೆಯಿಂದ ಹಿಂದೆ ಸರಿಯುವ ಸಾಧ್ಯತೆ ಇದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅಬಕಾರಿ ಆದಾಯಕ್ಕೆ ಕತ್ತರಿ ಬೀಳಲಿದೆ ಎಂಬ ಕಾರಣಕ್ಕೆ ರಾಜಸ್ಥಾನ ಸರ್ಕಾರ ನಗರದ ವ್ಯಾಪ್ತಿಯಲ್ಲಿ ಬರುವ ಹೆದ್ದಾರಿಗಳನ್ನು ನಗರದ ರಸ್ತೆಗಳಾಗಿ ಬದಲಾಯಿಸಲು ಕಾನೂನು ರೂಪಿಸಿ ಅಡ್ಡದಾರಿ ತುಳಿದಿರುವುದು ಮತ್ತು ಹಲವು ರಾಜ್ಯಗಳು ಇದೇ ರೀತಿಯ ಚಿಂತನೆಯಲ್ಲಿ ತೊಡಗಿರುವುದು ಗಮನಕ್ಕೆ ಬಂದ ಬೆನ್ನಲ್ಲೇ ಎಲ್ಲಾ ರಾಜ್ಯಗಳಿಗೆ ಎಚ್ಚರಿಕೆ ನೀಡಿರುವ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ ಆದೇಶದಂತೆ ರಾಷ್ಟ್ರೀಯ ಹೆದ್ದಾರಿಗಳ ಅಕ್ಕ ಪಕ್ಕ 220 ಮೀಟರ್‌ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳನ್ನು ತೆರವು ಮಾಡದಿದ್ದರೆ ಅನುದಾನ ಕಡಿತಗೊಳಿಸುವ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರದಿಂದ ಬಂದಿರುವ ಎಚ್ಚರಿಕೆ ಸಂದೇಶವನ್ನು ರಾಜ್ಯ ಸರ್ಕಾರದ ಹಿರಿಯ ಸಚಿವರೊಬ್ಬರು
ಖಚಿತಪಡಿಸಿದ್ದಾರೆ. ಅಲ್ಲದೆ, ಸುಪ್ರೀಂ ಕೋರ್ಟ್‌ ತೀರ್ಪಿಗೆ ವ್ಯತಿರಿಕ್ತವಾಗಿ ಹೆದ್ದಾರಿ ಬದಿಯ ಬಾರ್‌ ಅಂಡ್‌
ರೆಸ್ಟೋರೆಂಟ್‌ಗಳನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನ ಕೈಬಿಡುವ ಬಗ್ಗೆಯೂ ಮುನ್ಸೂಚನೆ ನೀಡಿದ್ದಾರೆ.

ಕೇಂದ್ರದ ಎಚ್ಚರಿಕೆ ಏನು?: ಹೆದ್ದಾರಿಗಳಲ್ಲಿ ಸಾಕಷ್ಟು ಅಪಘಾತ ಸಂಭವಿಸಿ ಪ್ರತಿ ವರ್ಷ ಸಾವಿರಾರು ಮಂದಿ
ಸಾವನ್ನಪ್ಪುತ್ತಿದ್ದು, ಲಕ್ಷಾಂತರ ಮಂದಿ ಗಾಯಗೊಳ್ಳುತ್ತಿದ್ದಾರೆ. ಇಂತಹ ಅಪಘಾತಗಳ ಪೈಕಿ ಬಹುತೇಕ ಪ್ರಕರಣಗಳಿಗೆ
ಕುಡಿದ ಅಮಲಿನಲ್ಲಿ ವಾಹನ ಓಡಿಸಿದ್ದೇ ಕಾರಣ ಎಂಬುದನ್ನು ಅಂಕಿ ಅಂಶಗಳೇ ಹೇಳುತ್ತವೆ. ಇದಕ್ಕೆ ಹೆದ್ದಾರಿ ಬದಿಯ ಮದ್ಯದ ಅಂಗಡಿಗಳು ಕಾರಣವಾಗುತ್ತಿರುವುದು ಕೂಡ ಸುಳ್ಳಲ್ಲ. ಹೆದ್ದಾರಿಗಳಿಂದ 220 ಮೀ. ವ್ಯಾಪ್ತಿಯೊಳಗೆ ಇರುವ ಮದ್ಯದಂಗಡಿಗಳನ್ನು ತೆರವುಮಾಡುವ ಕೆಲಸದಿಂದ ರಾಜ್ಯ ಸರ್ಕಾರಗಳ ಆದಾಯದಲ್ಲಿ ಕುಸಿತವಾಗಬಹುದಾದರೂ ಅದು ತಾತ್ಕಾಲಿಕ.  ಆದರೆ, ಆ ನೆಪದಲ್ಲಿ ಸುಪ್ರೀಂಕೋರ್ಟ್‌ ಆದೇಶಕ್ಕೆ ವ್ಯತಿರಿಕ್ತವಾಗಿ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಹೆದ್ದಾರಿ ಬದಿಯ 500 ಮೀಟರ್‌ ವಾಪ್ತಿಯಲ್ಲಿ ಯಾವುದೇ ಮದ್ಯದ ಅಂಗಡಿಗಳು ಇರುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಇದನ್ನು ಪ್ರಶ್ನಿಸಿ ಹಲವು ರಾಜ್ಯಗಳು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದು, ಇದನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌, ಮದ್ಯದಂಗಡಿಗಳು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಿಂದ 500 ಮೀಟರ್‌ ದೂರದಲ್ಲಿರಬೇಕು ಎಂಬ ತನ್ನ ಆದೇಶವು ಮುಂದುವರಿಯಲಿದೆ. ಆದರೆ, 20 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಪ್ರದೇಶಗಳಲ್ಲಿ ಮದ್ಯದಂಗಡಿ ನಿಷೇಧಕ್ಕೆ ಹೇರಿದ್ದ ಅಂತರದ ಮಿತಿಯನ್ನು 500ರಿಂದ 220 ಮೀಟರ್‌ಗೆ ಇಳಿಸಲಾಗುವುದು ಎಂದು ಹೇಳಿತ್ತು. ಹೀಗಿರುವಾಗ ಸುಪ್ರೀಂ ಕೋರ್ಟ್‌ ಆದೇಶ ಪಾಲಿಸದೇ ಇದ್ದಲ್ಲಿ ಮತ್ತು ಹೆದ್ದಾರಿ
ಬದಿ ನಿಗದಿತ ಪರಿಮಿತಿಯಲ್ಲಿ ಇರುವ ಮದ್ಯದಂಗಡಿಗಳನ್ನು ಉಳಿಸಿಕೊಳ್ಳಲು ಬೇರೆ ಮಾರ್ಗಗಳನ್ನು ಕಂಡುಕೊಂಡರೆ
ರಾಜ್ಯಗಳಲ್ಲಿ ಹೆದ್ದಾರಿ ಅಭಿವೃದ್ಧಿಗೆ ಪ್ರತಿ ವರ್ಷ ನೀಡುವ ಸಾವಿರಾರು ಕೋಟಿ ರೂ. ಅನುದಾನ ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ ಎಂದು ಹಿರಿಯ ಸಚಿವರು ತಿಳಿಸಿದ್ದಾರೆ.

Advertisement

ಏನಿದು ಪ್ರಕರಣ?
ದೇಶಾದ್ಯಂತ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಬದಿಗಳಲ್ಲಿ 500 ಮೀಟರ್‌ ಅಂತರದಲ್ಲಿರುವ ಮತ್ತು 20 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಪ್ರದೇಶಗಳಲ್ಲಿ 220 ಮೀಟರ್‌ ಅಂತರದಲ್ಲಿರುವ ಮದ್ಯದಂಗಡಿಗಳನ್ನು ತಕ್ಷಣದಿಂದಲೇ ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮಾ. 31ರಂದು ಆದೇಶಿಸಿತ್ತು. ಇದರ ಬೆನ್ನಲ್ಲೇ ರಾಜಸ್ಥಾನ ಸರ್ಕಾರ, ನಗರದ ವ್ಯಾಪ್ತಿಯಲ್ಲಿ ಬರುವ ಹೆದ್ದಾರಿಗಳನ್ನು ನಗರದ ರಸ್ತೆಗಳಾಗಿ ಬದಲಾಯಿಸಲು ಕಾನೂನು
ರೂಪಿಸಿತ್ತು. ಇದನ್ನೇ ಆಧರಿಸಿ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳು ಕೂಡ ಕಾನೂನು ತಿದ್ದುಪಡಿಗೆ ಮುಂದಾಗಿದ್ದವು.

ಶೇ. 25ರಷ್ಟು ಮದ್ಯದಂಗಡಿ ಬಂದ್‌
ೇಂದ್ರ ಸರ್ಕಾರದ ಎಚ್ಚರಿಕೆಗೆ ಮಣಿದು ರಾಜ್ಯ ಸರ್ಕಾರ ಕಾನೂನು ತಿದ್ದುಪಡಿ ಮಾಡದೇ ಇದ್ದರೆ ಪ್ರಸ್ತುತ ಹೆದ್ದಾರಿ ಬದಿಯಲ್ಲಿರುವ ಶೇ. 25ರಷ್ಟು ಮದ್ಯದಂಗಡಿಗಳನ್ನು ತೆರವುಗೊಳಿಸಬೇಕಾಗುತ್ತದೆ. ಒಂದು ವೇಳೆ ಮದ್ಯದಂಗಡಿಗಳನ್ನು
ತೆರವುಗೊಳಿಸಿದರೆ ಅವರಿಗೆ ಬೇರೆ ಭಾಗದಲ್ಲಿ ಅವುಗಳನ್ನು ತೆರೆಯಲು ಅವಕಾಶ ಮಾಡಿಕೊಡಲು ಸರ್ಕಾರ ಚಿಂತಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next