Advertisement

Udupi: ಹೆದ್ದಾರಿಯಲ್ಲಿ ಮರಣ ಮೃದಂಗ: 2023ರಲ್ಲಿ 222 ಸಾವು

04:17 PM Aug 11, 2024 | Team Udayavani |

ಉಡುಪಿ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಅಪಘಾತ ಸಂಭವಿಸಿದ್ದು, 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲಾ ಪೊಲೀಸ್‌ ಇಲಾಖೆ ಈ ಆಧಾರದಲ್ಲಿ 21 ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ.

Advertisement

ಈ ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿ ಸುರಕ್ಷತೆಗೆ ಅಗತ್ಯ ಕ್ರಮಕೈಗೊಳ್ಳಲು ಹೆದ್ದಾರಿ ಪ್ರಾಧಿಕಾರಕ್ಕೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಅವೈಜ್ಞಾನಿಕ ರಸ್ತೆ, ಜಂಕ್ಷನ್‌ ನಿರ್ಮಾಣದ ಜತೆಗೆ ವಾಹನ ಸವಾರರ ನಿರ್ಲಕ್ಷ್ಯ, ಅತೀ ವೇಗದ ಸಂಚಾರವೂ ಇದಕ್ಕೆ ಕಾರಣ. ಉಡುಪಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 4 ಬ್ಲ್ಯಾಕ್‌ ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, ಬೈಂದೂರು ಠಾಣೆ ವ್ಯಾಪ್ತಿಯಲ್ಲಿ 3 ಬ್ಲ್ಯಾಕ್‌ ಸ್ಪಾಟ್‌ ಗುರುತಿಸಿದ್ದು, ಹೆಚ್ಚು ಅಪಘಾತ ಸಂಭವಿಸಿರುವ ಜಾಗವನ್ನು ವಿಶ್ಲೇಷಣೆ ಮಾಡಿ ಬ್ಲ್ಯಾಕ್‌ ಸ್ಪಾಟ್‌ ಪಟ್ಟಿ ತಯಾರಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿ ಅಪಘಾತಗಳಿಗೆ ಕಡಿವಾಣ ಹಾಕಲು ಸೂಚನೆ ಫ‌ಲಕಗಳು, ಝೀಬ್ರಾಕ್ರಾಸ್‌ ರೂಪಿಸುವುದು, ಸಂಚಾರಿ ಪೊಲೀಸ್‌ ಸಿಬಂದಿ ನಿಯೋಜನೆ ಸಹಿತ ಸೂಕ್ತ ಕ್ರಮಗಳ್ಳಲು ಜಿಲ್ಲಾಡಳಿತವು ಪೊಲೀಸ್‌ ಇಲಾಖೆ ಮತ್ತು ಹೆ. ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.

222 ಮಂದಿ ಸಾವು

ಜಿಲ್ಲೆಯಲ್ಲಿ ಕಳೆದ ವರ್ಷ ಹೆದ್ದಾರಿಯಲ್ಲಿ 1284 ರಸ್ತೆ ಅಪಘಾತ ಪ್ರಕರಣ ವರದಿಯಾಗಿದೆ. 222 ಜನ ಮೃತಪಟ್ಟಿದ್ದು, 1,381 ಸಾಮಾನ್ಯ ಮತ್ತು ಗಂಭೀರ ಗಾಯಗೊಂಡಿದ್ದಾರೆ. ಇದರಲ್ಲಿ ಶೇ.90 ಅತೀವೇಗದ ವಾಹನ ಚಾಲನೆ ಹಾಗೂ ಅಜಾಗರೂಕತೆಯಿಂದ ಉಂಟಾಗಿರುವ ಬಗ್ಗೆ ಪೊಲೀಸ್‌ ಇಲಾಖೆ ತಿಳಿಸಿದೆ.

Advertisement

ರಾಷ್ಟ್ರೀಯ ಹೆದ್ದಾರಿ ಮೂಲ ವಿನ್ಯಾಸಕ್ಕೆ ಧಕ್ಕೆ

ಕಳೆದ ಮೂರು ವರ್ಷಗಳ ಹಿಂದೆ ಹೆದ್ದಾರಿ ಪ್ರಾಧಿಕಾರ, ಜಿಲ್ಲಾ ಪೊಲೀಸ್‌ ಇಲಾಖೆ ಸಹಭಾಗಿತ್ವದಲ್ಲಿ ಮಾಹೆ ಎಂಐಟಿ ವಿದ್ಯಾರ್ಥಿಗಳು ಮತ್ತು ತಜ್ಞರ ತಂಡವು ಹೆದ್ದಾರಿ ಬ್ಲ್ಯಾಕ್‌ ಸ್ಪಾಟ್‌ ಅಧ್ಯಯನ ಕೈಗೊಂಡು ವರದಿ ಸಲ್ಲಿಸಿತ್ತು. ಇದರಲ್ಲಿ ಹೆಚ್ಚಾಗಿ ರಾ. ಹೆದ್ದಾರಿ ವೈಜ್ಞಾನಿಕವಾಗಿರುವ ಮೂಲ ವಿನ್ಯಾಸಕ್ಕೆ ಧಕ್ಕೆ ತರುವುದೇ ಪ್ರಮುಖ ಕಾರಣ. ಸ್ಥಳೀಯ ಸಂಪರ್ಕ ರಸ್ತೆಗಾಗಿ ಅಥವಾ ಮದುವೆ ಹಾಲ್‌, ಪೆಟ್ರೋಲ್‌ಬಂಕ್‌, ಆಸ್ಪತ್ರೆ, ಶಾಪಿಂಗ್‌ಮಾಲ್‌ ಸಹಿತ ಹೆದ್ದಾರಿ ಬದಿಯಲ್ಲಿರುವ ಈ ರೀತಿ ಕಟ್ಟಡಗಳಿಗೆ ವಾಹನ ಸಂಪರ್ಕ ಅನುಕೂಲವಾಗಿಸಲು ಸ್ಥಳೀಯರ ಒತ್ತಡದ ಮೇರೆಗೆ ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ಡಿವೈಡರ್‌ಗಳನ್ನು ತುಂಡರಿಸಿ ತಿರುವು ಪಡೆಯಲು ಡಿವೈಡರ್‌ನ್ನು ವಿಭಜಿಸಲಾಗುತ್ತದೆ. ಎಲ್ಲಿ ಯೂಟರ್ನ್ ಕೊಡುತ್ತೇವೊ ಅಲ್ಲಿ ಮೂರು ಲೇನ್‌ಗಳನ್ನು ಕೊಡಬೇಕು. ಸ್ಥಳೀಯರ ಬೇಡಿಕೆ ಮೇರೆಗೆ ಎಲ್ಲಿ ಯೂಟರ್ನ್ ಕೊಡಲಾಗಿದೆಯೋ ಅಲ್ಲಿ ಮೂರು ಲೇನ್‌ ವ್ಯವಸ್ಥೆಯನ್ನು ಮಾಡಿಲ್ಲ. ವಿರುದ್ಧ ದಿಕ್ಕಿನ ಸಂಚಾರ, ಅತೀವೇಗ ಮೊದಲಾದ ಕಾರಣದಿಂದ ಅಪಘಾತ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಎಂಐಟಿ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಸಹ ಪ್ರಾಧ್ಯಾಪಕ ರಾಘವೇಂದ್ರ ಹೊಳ್ಳ ಅಭಿಪ್ರಾಯಪಟ್ಟಿದ್ದಾರೆ.

ನಿಗಾವಹಿಸಲು ಸೂಚನೆ

ಹೆದ್ದಾರಿ ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿ ಅಪಘಾತ ಪ್ರಕರಣ ತಡೆಯುವ ಸಲುವಾಗಿ ಪೊಲೀಸ್‌ ಇಲಾಖೆ, ಹೆದ್ದಾರಿ ಪ್ರಾಧಿಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಕ್ತ ಸೂಚನೆಗಳನ್ನು ಈಗಾಗಲೇ ನೀಡಲಾಗಿದೆ. ಹೆದ್ದಾರಿಯಲ್ಲಿ ಟ್ರಾಮ್‌ ಕೇರ್‌ ಸೆಂಟರ್‌ ಗಳೊಂದಿಗೆ ಆ್ಯಂಬುಲೆನ್ಸ್‌ ಮ್ಯಾಪಿಂಗ್‌ ಮಾಡಬೇಕು ಪ್ರತಿ ತಿಂಗಳು ರಸ್ತೆ ಸುರಕ್ಷತೆ ಬಗ್ಗೆ ಸಭೆ ಕರೆದು ಹೆದ್ದಾರಿ ಎಂಜಿನಿಯರ್ಸ್‌ ವಿಶೇಷ ನಿಗಾವಹಿಸಲು ಸೂಚನೆ ನೀಡಲಾಗಿದೆ.

– ಡಾ| ಕೆ. ವಿದ್ಯಾಕುಮಾರಿ, ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ

ಬ್ಲ್ಯಾಕ್‌ ಸ್ಪಾಟ್‌ಗಳು

ಪಡುಬಿದ್ರಿ ಜಂಕ್ಷನ್‌, ಉಚ್ಚಿಲ, ಮೂಳೂರು, ವಿದ್ಯಾನಿಕೇತನ್‌ ಜಂಕ್ಷನ್‌, ಪಾಂಗಾಳ, ಅಂಬಲಪಾಡಿ ಜಂಕ್ಷನ್‌, ನಿಟ್ಟೂರು ಜಂಕ್ಷನ್‌, ಅಂಬಾಗಿಲು ಜಂಕ್ಷನ್‌, ಆಶೀರ್ವಾದ್‌ ಚಿತ್ರಮಂದಿರದ ಎದುರು, ಸಂತೆಕಟ್ಟೆ ಜಂಕ್ಷನ್‌, ಬ್ರಹ್ಮಾವರ ಮಹೇಶ್‌ ಆಸ್ಪತ್ರೆ ಎದುರು, ಬ್ರಹ್ಮಾವರ ಆಕಾಶವಾಣಿ ಸರ್ಕಲ್‌, ಕುಮ್ರಗೋಡು ಕ್ರಾಸ್‌, ಕೋಟ ಜಂಕ್ಷನ್‌, ತೆಕ್ಕಟ್ಟೆ ಜಂಕ್ಷನ್‌, ಕುಂಭಾಶಿ ಸ್ವಾಗತ ಗೋಪುರ, ಕುಂದಾಪುರ ನೆಹರು ಮೈದಾನ ಎದುರು, ತಲ್ಲೂರು ಜಂಕ್ಷನ್‌, ತ್ರಾಸಿ ಜಂಕ್ಷನ್‌, ಯಡ್ತರೆ ಜಂಕ್ಷನ್‌, ನೀರ್ಗದ್ದೆ ಶಿರೂರು, ಬೈಂದೂರಿನ ಒತ್ತಿನೆಣೆ.

Advertisement

Udayavani is now on Telegram. Click here to join our channel and stay updated with the latest news.

Next