ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಅತ್ಯಂತ ಪ್ರಮುಖ ಮತ್ತು ತೀವ್ರ ಹದಗೆಟ್ಟಿದ್ದ ಎರಡು ರಾಜ್ಯ ಹೆದ್ದಾರಿಗಳು ಸಂಪರ್ಕಿಸುವ
ಗುತ್ತಿಗಾರು -ಕಮಿಲ -ಬಳ್ಪ ರಸ್ತೆಯ ಸ್ವಲ್ಪ ಭಾಗ ಅಭಿವೃದ್ಧಿ ಕಾರ್ಯ ಕೊನೆಗೂ ಆರಂಭಗೊಂಡಿದೆ.
ಸುಮಾರು 6 ಕಿ.ಮೀ. ಉದ್ದದ ರಸ್ತೆಯಲ್ಲಿ ಇದೀಗ 1.2 ಕಿ.ಮೀ. ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಹೀಗಾಗಿ ದೀಪಾವಳಿಗೆ ಬೋನಸ್ ಎಂಬಂತೆ ಹಬ್ಬದ ಸಂದರ್ಭವೇ ಕಾಮಗಾರಿ ಆರಂಭಗೊಂಡಿದ್ದು, ವಾಹನ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ಬಸ್ ಸಂಚಾರ ನಡೆಯುತ್ತಿಲ್ಲ. ಹೀಗಾಗಿ ನಡೆದಾಟ ಮೂಲಕವೇ ಈ ಭಾಗದ ಜನತೆ ಗುತ್ತಿಗಾರನ್ನು ಸಂಪರ್ಕಿಸಬೇಕಿದೆ. ತೀವ್ರ ಹದಗೆಟ್ಟಿದ್ದ ರಸ್ತೆಯಲ್ಲಿ ಸಂಚರಿಸಿ, ಅಭಿವೃದ್ಧಿಗೆ ಆಗ್ರಹಿಸಿ ಸೋತಿದ್ದ ಸಾರ್ವಜನಿಕರು ಈ ಸಂಚಾರ ಅಡಚಣೆಯ ನಡುವೆಯೂ ಸಂಭ್ರಮಿಸಿದ್ದಾರೆ.
ಕಳೆದ 10 ವರ್ಷಗಳಿಂದ ಜನತೆ ಇಲಾಖೆ ಹಾಗೂ ಜನಪ್ರತಿನಿಧಿಗಳನ್ನು ಆಗ್ರಹಿಸುತ್ತಿದ್ದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಸುಮಾರು 1 ಕಿ.ಮೀ. ರಸ್ತೆ ದುರಸ್ತಿ ನಡೆದಿತ್ತು. ಆದರೆ ಈಗ ಅಲ್ಲಲ್ಲಿ ಗುಂಡಿ ಬಿದ್ದಿದೆ. ಈ ಬಗ್ಗೆ ಯಾವುದೇ ಜನಪ್ರತಿನಿಧಿಗಳು ಗಮನಹರಿಸಿಲ್ಲ. ಈ ನಡುವೆ ಈ ಬಾರಿ ಮತ್ತೆ ಸುಮಾರು 1.2 ಕಿ.ಮೀ. ರಸ್ತೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಮೂಲಕ ದುರಸ್ತಿ ಕಾರ್ಯ ಆರಂಭವಾಗಿದೆ.
ಆರಂಭಿಕ ಹಂತವಾಗಿ ರಸ್ತೆ ವಿಸ್ತರಣೆ ಹಾಗೂ ರಸ್ತೆ ಅಗೆಯುವ ಕಾರ್ಯ ನಡೆಯುತ್ತಿದೆ. ಆದರೆ ಆಗಾಗ್ಗೆ ಮಳೆಯಾಗುವ ಕಾರಣದಿಂದಾಗಿ ಇಡೀ ರಸ್ತೆ ಕೆಸರುಮಯವಾಗಿ ಓಡಾಟವೇ ಕಷ್ಟವಾಗಿದೆ. ಆದರೆ ದೀಪಾವಳಿ ಸಂದರ್ಭ ಕೆಲಸ ನಿಲ್ಲಿಸುವ ಮುನ್ನ ಈ ಬಗ್ಗೆ ಎಚ್ಚರವಹಿಸ ಬೇಕಿತ್ತು ಎಂಬ ಬಗ್ಗೆಯೂ ಸಾರ್ವಜನಿಕರ ಅಭಿಪ್ರಾಯ ಕೇಳಿಬರುತ್ತಿದೆ.
ಇದರಂತೆ ಈ ರಸ್ತೆಯ ಉಳಿದೆಡೆ ಮಳೆಗಾಲ ಕಳೆದಂತೆ ದುರಸ್ತಿ ಕಾರ್ಯ ನಡೆಸುವುದಾಗಿ ಜನಪ್ರತಿನಿಧಿಗಳು ನೀಡಿದ ಭರವಸೆಯಂತೆ ನಡೆದು ಕೊಳ್ಳಬೇಕು. ಮಳೆಗಾಲ ದೂರವಾಗುತ್ತಿದ್ದು ತತ್ ಕ್ಷಣವೇ ಉಳಿದ ಕಡೆ ತೇಪೆ ಕಾರ್ಯ ಅಥವಾ ಮರುಡಾಮರು ಕಾಮಗಾರಿಗೆ ಆರಂಭಿಸುವಂತೆ ಜನತೆ ಆಗ್ರಹಿಸಿದ್ದಾರೆ.