Advertisement

ಹೆದ್ದಾರಿ ಬಾರ್‌ಗಳ ನಶೆ ಕಿಕ್‌ ಔಟ್‌! ಮಧ್ಯರಾತ್ರಿಯಿಂದಲೇ ಆದೇಶ ಜಾರಿ

03:10 AM Jul 01, 2017 | Team Udayavani |

ಬೆಂಗಳೂರು: ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದಲೇ ರಾಷ್ಟ್ರೀಯ ಹೆದ್ದಾರಿಯ 500 ಮೀಟರ್‌ ವ್ಯಾಪ್ತಿಯಲ್ಲಿರುವ ಬಾರ್‌ಗಳಿಗೆ ಬೀಗ ಬಿದ್ದಿದೆ. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಬದಿಯಲ್ಲಿ ಬಾರ್‌ಗಳಿರುವುದರಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತವೆ ಎನ್ನುವ ಕಾರಣಕ್ಕೆ ಸುಪ್ರೀಂಕೋರ್ಟ್‌ ಫೆಬ್ರವರಿಯಲ್ಲಿ ಹೆದ್ದಾರಿ ಪಕ್ಕದ ಬಾರ್‌ಗಳನ್ನು ಬಂದ್‌ ಮಾಡುವಂತೆ ಆದೇಶ ಹೊರಡಿಸಿತ್ತು. ಅದರ ಅನ್ವಯ ಈಗಾಗಲೇ ರಾಜ್ಯ ಅಬಕಾರಿ ಇಲಾಖೆ ರಾಷ್ಟ್ರೀಯ ಹೆದ್ದಾರಿಯಲ್ಲಿ 500 ಮೀಟರ್‌ ವ್ಯಾಪ್ತಿಯೊಳಗಿರುವ ಎಲ್ಲ ಬಾರ್‌ಗಳನ್ನು ಸ್ಥಳಾಂತರಿಸುವಂತೆ ನೊಟೀಸ್‌ ನೀಡಿದೆ.

Advertisement

ಶುಕ್ರವಾರ ಮಧ್ಯರಾತ್ರಿ ವೇಳೆಗೆ ಬಾರ್‌ಗಳನ್ನು ಸ್ಥಳಾಂತರಿಸದಿದ್ದರೆ, ಅಂತಹ ಬಾರ್‌ಗಳ ಪರವಾನಿಗೆ ನವೀಕರಣ ಮಾಡದಿರಲು ಇಲಾಖೆ ನಿರ್ಧರಿಸಿದೆ. ಸುಪ್ರೀಂಕೋರ್ಟ್‌ ಆದೇಶದನ್ವಯ ಸುಮಾರು 6,018 ಬಾರ್‌ಗಳು ಬಾಗಿಲು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಸುಪ್ರೀಂ ಕೋರ್ಟ್‌ ಆದೇಶದ ಬಳಿಕ ರಾಜ್ಯ ಸರಕಾರ ಆದೇಶ ಪುನರ್‌ ಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದು, ಜುಲೈ ಮೊದಲ ವಾರದಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಈ  ನಡುವೆ ರಾಜ್ಯ ಸರಕಾರ ರಾಷ್ಟ್ರೀಯ ಹೆದ್ದಾರಿಯನ್ನು ಡಿ ನೋಟಿಫೈ ಮಾಡಿ, ನಗರ ಸ್ಥಳೀಯ ಸಂಸ್ಥೆಗಳ ರಸ್ತೆಯನ್ನಾಗಿ ಪರಿವರ್ತಿಸಲು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಂಡಿದೆ. ರಾಜ್ಯದಲ್ಲಿ 854 ಕಿಲೋಮೀಟರ್‌ ರಾಷ್ಟ್ರೀಯ ಹೆದ್ದಾರಿ ಇದ್ದು, ಸುಮಾರು 1,500 ಬಾರ್‌ಗಳು 500 ಮೀಟರ್‌ ವ್ಯಾಪ್ತಿಯಲ್ಲಿ ಬರುತ್ತವೆ. ಕೇಂದ್ರ ಸರಕಾರ ರಾಷ್ಟ್ರೀಯ ಹೆದ್ದಾರಿಯನ್ನು ಸ್ಥಳೀಯ ನಗರ ರಸ್ತೆಗಳಾಗಿ ಪರಿವರ್ತಿಸಲು ಇನ್ನೂ ತೀರ್ಮಾನ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಎಲ್ಲ ಬಾರ್‌ಗಳಿಗೂ ಬಾರ್‌ ಮಾಲಕರು ಬೀಗ ಹಾಕುವುದು ಅನಿವಾರ್ಯವಾಗಿದೆ.

ಇದಲ್ಲದೇ ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರ ಬಾರ್‌ಗಳಿದ್ದು, ರಾಜ್ಯ ಸರಕಾರ ನಗರ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳನ್ನು ನಗರ ಸ್ಥಳೀಯ ರಸ್ತೆಗಳಾಗಿ ಪರಿವರ್ತಿಸಿರುವುದರಿಂದ ಸುಮಾರು 3 ಸಾವಿರ ಬಾರ್‌ ಮಾಲಕರು ನಿಟ್ಟುಸಿರು ಬಿಡುವಂತಾಗಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಪಂಚಾಯತ್‌ ವ್ಯಾಪ್ತಿಯಲ್ಲಿ 220 ಮೀಟರ್‌ ವ್ಯಾಪ್ತಿಯ ಬಾರ್‌ಗಳು ಬಂದ್‌ ಮಾಡಬೇಕಿದೆ.

ಕೇಂದ್ರದತ್ತ ರಾಜ್ಯದ ಚಿತ್ತ
ಹೆದ್ದಾರಿ ಬದಿಯಿಂದ 500 ಮೀಟರ್‌ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿರುವ ಸುಪ್ರೀಂಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಮುಂದಿನ ಕ್ರಮದ ಬಗ್ಗೆ ರಾಜ್ಯ ಸರಕಾರ ಎದುರು ನೋಡುತ್ತಿದೆ. ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದು, ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಗೊಂದಲ ಬಗೆಹರಿಸುವಂತೆ ಕೋರಿದ್ದಾರೆ. ಆದರೆ ಇದು ಕರ್ನಾಟಕದ ಸಮಸ್ಯೆ ಮಾತ್ರವಲ್ಲ, ಇಡೀ ದೇಶದ ಸಮಸ್ಯೆ. ಹೀಗಾಗಿ ಏಕರೂಪದ ನೀತಿ ರೂಪಿಸಬೇಕಿದೆ. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕು. ಅಲ್ಲಿವರೆಗೆ ಸುಪ್ರೀಂಕೋರ್ಟ್‌ ಆದೇಶ ಪಾಲನೆ ಅನಿವಾರ್ಯ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಬಾರ್‌ ವ್ಯವಹಾರ
– 6,018 – ಹೆದ್ದಾರಿಗಳಲ್ಲಿರುವ ಬಾರ್‌ಗಳ ಸಂಖ್ಯೆ
– 54 – ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿಯ ಉದ್ದ
– 1,500 – 500 ಮೀಟರ್‌ ವ್ಯಾಪ್ತಿಗೆ ಬರುವ ಬಾರ್‌ಗಳು
– 3,000 – ರಾಜ್ಯ ಹೆದ್ದಾರಿಯಲ್ಲಿನ ಬಾರ್‌ಗಳು

Advertisement

ಮಹಾತ್ಮಾ ಗಾಂಧಿ ರಸ್ತೆಯಲ್ಲೂ ಬಾರ್‌ಗೆ ಬೀಗ
ಬೆಂಗಳೂರು:
ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ರಸ್ತೆಗಳಾದ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಗಳ ಭಾಗಗಳಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದಲೇ ಮಾರಾಟ ಸ್ಥಗಿತಗೊಳ್ಳಲಿದೆ. ಎಂ.ಜಿ. ರಸ್ತೆ ಕೂಡ ದಾಖಲೆಗಳಲ್ಲಿ ಹೆದ್ದಾರಿ ಎಂದೇ ಪರಿಗಣಿಸಿರುವುದರಿಂದ ಅನಿವಾರ್ಯವಾಗಿ ಬಂದ್‌ ಮಾಡಬೇಕಿದೆ. ಇಲ್ಲಿನ 138 ಬಾರ್‌, ಪಬ್‌ಗಳು ಸ್ಥಗಿತಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next