Advertisement

ಬಹು ನಿರೀಕ್ಷಿತ ಪೊಲೀಸ್‌ ಕಮಿಷನರೇಟ್‌ ಕಚೇರಿ ಆರಂಭ

06:28 AM Feb 24, 2019 | Team Udayavani |

ಕಲಬುರಗಿ: ಮಹಾನಗರದ ಜನರ ಬಹು ನಿರೀಕ್ಷಿತ ಪೊಲೀಸ್‌ ಕಮಿಷನರೇಟ್‌ ಕಚೇರಿಯನ್ನು ಗೃಹ ಸಚಿವ ಎಂ.ಬಿ. ಪಾಟೀಲ ಶನಿವಾರ ಉದ್ಘಾಟಿಸಿದರು.

Advertisement

ಇತ್ತೀಚೆಗೆ ನವೀಕರಣಗೊಂಡ ನಗರದ ಹಳೆ ಐಜಿಪಿ ಕಚೇರಿಯಲ್ಲಿ ತಾತ್ಕಾಲಿಕವಾಗಿ ಪೊಲೀಸ್‌ ಆಯುಕ್ತಾಲಯ ಆರಂಭಿಸಲಾಗಿದ್ದು, ಗೃಹ ಸಚಿವರು ರಿಬ್ಬನ್‌ ಕತ್ತರಿಸುವ ಮೂಲಕ ಆಯುಕ್ತಾಲಯದ ಕಚೇರಿಯನ್ನು ಉದ್ಘಾಟಿಸುತ್ತಿದ್ದಂತೆ ಜನಪ್ರತಿನಿಧಿಗಳು, ಪೊಲೀಸರು ಮತ್ತು ಸಾರ್ವಜನಿಕರ ಮುಖದಲ್ಲಿ ಹರ್ಷ ಮೂಡಿತು.

ಕಲಬುರಗಿ ಪೊಲೀಸ್‌ ಆಯುಕ್ತಾಲಯವು ಹೈದ್ರಾಬಾದ ಕರ್ನಾಟಕ ಭಾಗದ ಪ್ರಥಮ ಹಾಗೂ ರಾಜ್ಯದ ಆರನೇ ಪೊಲೀಸ್‌ ಕಮಿಷನರೇಟ್‌ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿಯಲ್ಲಿ ಪೊಲೀಸ್‌ ಆಯುಕ್ತಾಲಯ ಕಾರ್ಯ ನಿರ್ವಹಿಸುತ್ತಿದೆ. 2014ರಲ್ಲಿ ಬೆಳಗಾವಿಯಲ್ಲಿ ಕಮಿಷನರೇಟ್‌ ಆರಂಭವಾದ ಹೊತ್ತಿನಲ್ಲೇ ಕಲಬುರಗಿಯಲ್ಲೂ ಆರಂಭವಾಗಬೇಕಿತ್ತು. ಕೊನೆಗೆ ಕಳೆದ ಅಕ್ಟೋಬರ್‌ 25 ರಂದು ಕಲಬುರಗಿ ಪೊಲೀಸ್‌ ಆಯುಕ್ತಾಲಯ ಆರಂಭಕ್ಕೆ ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು.

ಶೀಘ್ರವೇ ಪೊಲೀಸ್‌ ಕಮಿಷನರ್‌ ನೇಮಕ: ಪೊಲೀಸ್‌ ಆಯುಕ್ತಾಲಯ ಆರಂಭದಿಂದ ಇಲ್ಲಿನ ಜನತೆಯ ಬಹುದಿನಗಳ ಕನಸು ನನಸಾದಂತಾಗಿದೆ. ಶೀಘ್ರವೇ ಡಿಐಜಿ ರ್‍ಯಾಂಕ್‌ ಅಧಿಕಾರಿಯನ್ನು ಪೊಲೀಸ್‌ ಕಮಿಷನರ್‌ ಹಾಗೂ ಅಗತ್ಯವಾದ ಮೂವರು ಡಿಸಿಪಿ, ಹೆಚ್ಚುವರಿ ಎಸಿಪಿ, ಇನ್ಸ್‌ಪೆಕ್ಟರ್‌ಗಳು ಮತ್ತು ಸಿಬ್ಬಂದಿ ನೇಮಿಸಲಾಗುವುದು. ಆಯುಕ್ತಾಲಯದಲ್ಲಿ ಸೈಬರ್‌ ಕ್ರೈಂ ವಿಶೇಷ ಘಟಕ ಪ್ರಾರಂಭಿಸಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಪೊಲೀಸ್‌ ಆಯುಕ್ತಾಲಯದ ಉದ್ಘಾಟನೆ ನಂತರ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿ, ಅಪರಾಧ ತಡೆಯುವಿಕೆ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಬಸವಣ್ಣನವರು ಅಪರಾಧಗಳಿಂದ
ದೂರವಿರಬೇಕೆಂದು ತಮ್ಮ ವಚನಗಳಲ್ಲಿ ಹೇಳಿದ್ದರು ಎಂದರು.

Advertisement

ಯೋಧರು ಗಡಿ ರಕ್ಷಣೆಯಲ್ಲಿ ತೊಡಗಿರುವಂತೆ ಪೊಲೀಸರು ಸಮಾಜ ಸುರಕ್ಷಿತವಾಗಿರಲು ಶ್ರಮಿಸುತ್ತಿದ್ದಾರೆ. ಹಬ್ಬ-ಹರಿ ದಿನಗಳಲ್ಲೂ ಪೊಲೀಸರು ಕನಿಷ್ಠ 14 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಾರೆ. ಬೆಂಗಳೂರು ಸುರಕ್ಷಿತ ನಗರ ಎನ್ನುವ ಕಾರಣಕ್ಕೆ ಹೆಚ್ಚಿನ ಬಂಡವಾಳ ಹರಿದು ಬರುತ್ತಿದೆ. ಅದೇ ರೀತಿ ಎಲ್ಲ ನಗರಗಳು ಸುರಕ್ಷಿತವಾಗಿರಬೇಕು. ದೇಶದಲ್ಲಿ ಕರ್ನಾಟಕ ಪೊಲೀಸ್‌ ಇಲಾಖೆಯನ್ನು ಮಾದರಿ ಹಾಗೂ ಜನಸ್ನೇಹಿಯಾಗಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಪೊಲೀಸರು ಕಾಯಕವೇ ಕೆಲಸ ಎಂದು ನಂಬಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂತ್ರಜ್ಞಾನ ಬೆಳೆದಂತೆ ಅಪರಾಧದ ಸ್ವರೂಪವೂ ಬದಲಾಗಿದೆ. ಸೈಬರ್‌ ಸೌಲಭ್ಯ ಬಳಸಿಕೊಂಡು ಅಪರಾಧ ಪ್ರಕರಣಗಳು ನಡೆಯುತ್ತಿದೆ. ಭಯೋತ್ಪಾದನೆಯಂತಹ ಉಗ್ರ ಚಟುವಟಿಕೆಗಳು ಆನ್‌ಲೈನ್‌ನಿಂದ ನಡೆಯುತ್ತಿವೆ. ಸೈಬರ್‌ ಕ್ರೈಂ ತಡೆಗೆ ಅಗತ್ಯ ಕ್ರಮಕೈಗೊಳ್ಳುವ ಅವಶ್ಯಕತೆ ಇದೆ ಎಂದರು.

ಈಶಾನ್ಯ ವಲಯದ ಐಜಿಪಿ ಮನೀಷ ಖರ್ಬಿಕರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾನಗರವು ಬೃಹದಾಕಾರವಾಗಿ ಬೆಳೆದಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಅಪರಾಧಗಳನ್ನು ತಡೆಗಟ್ಟಲು ಪೊಲೀಸ್‌ ಆಯುಕ್ತಾಲಯ ಸಹಕಾರಿಯಾಗಲಿದೆ ಎಂದರು.

ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಖನೀಜ್‌ ಫಾತೀಮಾ, ಎಂ.ವೈ. ಪಾಟೀಲ, ಬಸವರಾಜ ಮತ್ತಿಮಡು, ರಾಜಕುಮಾರ ಪಾಟೀಲ ತೇಲ್ಕೂರ್‌, ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಮೇಯರ್‌ ಮಲ್ಲಮ್ಮ ವಳಕೇರಿ, ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ, ತರಬೇತಿ ಪೊಲೀಸ್‌ ಮಹಾ ನಿರ್ದೇಶಕ ಪದಮ್‌ಕುಮಾರ ಗರ್ಗ್‌, ತರಬೇತಿ ಪೊಲೀಸ್‌ ಮಹಾ ನಿರೀಕ್ಷಕ ರವಿ. ಎಸ್‌., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ ಹಾಗೂ ಮತ್ತಿತರರು ಇದ್ದರು. 

ಗೃಹ ಸಚಿವರ ಹೇಳಿಕೆಗೆ ಬಿಜೆಪಿ ಶಾಸಕರ ಆಕ್ಷೇಪ
ಕಲಬುರಗಿ ಅಭಿವೃದ್ಧಿಗಾಗಿ ದಿ.ವೀರೇಂದ್ರ ಪಾಟೀಲ, ದಿ. ಧರ್ಮಸಿಂಗ್‌ ಹಾಗೂ ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಸಾಕಷ್ಟು ಶ್ರಮಿಸಿದ್ದಾರೆ. ಹೈ.ಕ ಭಾಗಕ್ಕೆ 371(ಜೆ)ನೇ ಕಲಂ ಜಾರಿ ಮಾಡಲು ವಾಜಪೇಯಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಎಲ್‌.ಕೆ. ಅಡ್ವಾಣಿ ತಿರಸ್ಕಾರ ವ್ಯಕ್ತಪಡಿಸಿದ್ದರು. ಆದರೆ, ಮಲ್ಲಿಕಾರ್ಜುನ ಖರ್ಗೆ 371 (ಜೆ)ನೇ ಕಲಂ ಜಾರಿ ಮಾಡಿ ತೋರಿಸಿದರು ಎಂದು ಗೃಹ ಸಚಿವ ಎಂ.ಬಿ. ಪಾಟೀಲ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ವೇದಿಕೆಯಲ್ಲಿದ್ದ ಸೇಡಂ ಕ್ಷೇತ್ರದ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ತಕ್ಷಣವೇ ಎದ್ದು ನಿಂತು ಎಂ.ಬಿ.ಪಾಟೀಲರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಎಲ್‌.ಕೆ. ಅಡ್ವಾಣಿ ಹಾಗೆ ಹೇಳಿರಲಿಲ್ಲ. ಇದು ರಾಜಕೀಯ ಕಾರ್ಯಕ್ರಮವಲ್ಲ, ಸರ್ಕಾರಿ ಕಾರ್ಯಕ್ರಮ ಎಂದು ಹೇಳಿದರು. ಆಗ ಇತರ ಬಿಜೆಪಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮಡು, ಬಿ.ಜಿ. ಪಾಟೀಲ ಸಹ ಎದ್ದು ನಿಂತರು. ಈ ವೇಳೆ ಸಚಿವ ಎಂ.ಬಿ. ಪಾಟೀಲ ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚನೆ ಕೋರಿ ವಿವಾದಕ್ಕೆ ತೆರೆ ಎಳೆದರು.

ಕಲಬರಗಿ ಪೊಲೀಸ್‌ ಆಯುಕ್ತಾಲಯ ಆರಂಭದಿಂದ ಸಾರ್ವಜನಿಕರಲ್ಲಿ ನೆಮ್ಮದಿ ಮೂಡಿದೆ. ಕಮಿಷನರೇಟ್‌ನಲ್ಲಿ ಅಗತ್ಯವಾದ ಖಾಲಿ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು. ಸೈಬರ್‌ ಕ್ರೈಂ ತಡೆಗೆ ಸೈಬರ್‌ ಟ್ರೇನಿಂಗ್‌ ಸೆಲ್‌ ಮತ್ತು ಫಾರೆನ್ಸಿಕ್‌ ಲ್ಯಾಬ್‌ ಪ್ರಾರಂಭಿಸಬೇಕು.  ಪ್ರಿಯಾಂಕ್‌ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಪೊಲೀಸ್‌ ಕಮಿಷನರೇಟ್‌ ಅಪರಾಧ ತಡೆಯುವಲ್ಲಿ ಪ್ರಮುಖ ಪಾತ್ರವಹಿಸಬೇಕು. ಮಹಾನಗರವನ್ನು ಅಪರಾಧ ಮುಕ್ತ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಆಯುಕ್ತಾಲಯ ಕೆಲಸ ಮಾಡಬೇಕು.
 ದತ್ತಾತ್ರೇಯ ಪಾಟೀಲ ರೇವೂರ, ಶಾಸಕ, ದಕ್ಷಿಣ ಮತಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next