Advertisement

ಕಂದಾಯ ಇಲಾಖೆಯ ಅಧಿಕಪ್ರಸಂಗ: ಶಾಸಕಿ ಗರಂ

02:36 PM Dec 09, 2017 | Team Udayavani |

ಪುತ್ತೂರು: ಸರಕಾರಿ ಕೆಲಸ ಸಿಕ್ಕಿದೆ ಎಂಬ ಕಾರಣಕ್ಕೆ ಲೋಕ ತಾನು ಹೇಳಿದ ಹಾಗೇ ಇರಬೇಕು ಎಂದು ಭಾವಿಸಬೇಡಿ. ಕಂದಾಯ ಇಲಾಖೆಯ ಅಧಿಕ ಪ್ರಸಂಗತನ ಹೆಚ್ಚಾಗುತ್ತಿದೆ. ಯಾರ್ಯಾರಧ್ದೋ ಮನೆಗೆ ಕನ್ನ ಹಾಕುವ ಕೆಲಸ ನಡೆಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕಿ ಶಕುಂತಳಾ ಶೆಟ್ಟಿ ಎಚ್ಚರಿಕೆ ನೀಡಿದರು. ಬನ್ನೂರು ನವೋದಯ ಯುವಕ ಮಂಡಲದ ಸಭಾಂಗಣದಲ್ಲಿ ಶುಕ್ರವಾರ ನಡೆದ ಉಪ್ಪಿನಂಗಡಿ ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಹವಾಲಿಗೆ ಉತ್ತರ ನೀಡಿದರು.

Advertisement

ಗಂಡ ತೀರಿಕೊಂಡಿದ್ದಾನೆ. ಆದ್ದರಿಂದ ಒಂಟಿ ಹೆಂಗಸು ಪಕ್ಕದಲ್ಲೇ ಇರುವ ತಾಯಿ ಮನೆಗೆ ರಾತ್ರಿ ಮಲಗಲು ತೆರಳುತ್ತಾಳೆ. ಆಕೆಯ ಮನೆಗೆ 94ಸಿ ಸ್ಥಳ ಪರಿಶೀಲನೆಗೆ ತೆರಳಿದ ಅಲ್ಲಿನ ಉಗ್ರಾಣಿ, ತಾಯಿ ಮನೆಯಲ್ಲಿ ಮಲಗಬಾರದು. ಹಕ್ಕುಪತ್ರ ನೀಡಬೇಕಾದ ಮನೆಯಲ್ಲೇ ಮಲಗಬೇಕು ಎಂದು ಕರಾರು ವಿಧಿಸುತ್ತಾನೆ. ಒಂಟಿ ಹೆಂಗಸು ಇಂಥಲ್ಲೇ ಮಲಗಬೇಕು ಎಂದು ಹೇಳಲು ಉಗ್ರಾಣಿ ಯಾರು? ಅಷ್ಟಕ್ಕೂ ಇಂತಹ ಕಾನೂನು ಜಾರಿ ಮಾಡಿದವರು ಯಾರು? ಉಗ್ರಾಣಿ ಹೇಳಿದ ಹಾಗೇ ಲೋಕ ಕೇಳುತ್ತದೆಯೇ? ಅಧಿಕ ಪ್ರಸಂಗತನದ ಕೆಲಸ ಮಾಡುತ್ತಿದ್ದಾರೆ. ಇನ್ನೊಮ್ಮೆ ಇಂತಹ ಮಾತು ಕೇಳಿಬಂದರೆ ಊರಿನವರೇ ಉಗ್ರಾಣಿಯ ಸೊಂಟ ಮುರಿಯುತ್ತಾರೆ. ಸರಕಾರಿ ಕೆಲಸ ಸಿಕ್ಕಿದೆ ಎಂಬ ಕಾರಣಕ್ಕೆ ಇನ್ಯಾ ರಧ್ದೋ ಮನೆಯಲ್ಲಿ ದೌಲತ್ತು ತೋರಿಸುವುದು ಬೇಡ. ತಹಶೀಲ್ದಾರ್‌ರಿಂದ ಉಗ್ರಾಣಿವರೆಗೆ ಕಂದಾಯ ಇಲಾಖೆಯ ಎಲ್ಲರಿಗೂ ಎಚ್ಚರಿಕೆ ನೀಡುತ್ತಿದ್ದೇನೆ. ಇನ್ನೊಮ್ಮೆ ಇಂತಹ ಘಟನೆ ನಡೆದರೆ ಸುಮ್ಮನೆ ಕೂರುವುದಕ್ಕೆ ಸಾಧ್ಯವಿಲ್ಲ ಎಂದು ತಹಶೀಲ್ದಾರ್‌ಗೆ ಎಚ್ಚರಿಕೆ ನೀಡಿದ ಘಟನೆ ನಡೆಯಿತು.

9 ಮನೆಗೆ 94ಸಿ ಇಲ್ಲ
ಶಾಂತಿಗೋಡು ಗ್ರಾಮದ ಮಲೆಪಡ್ಪು ಎಂಬಲ್ಲಿ 9 ಮನೆಗಳಿಗೆ 94ಸಿ ಅಡಿ ಹಕ್ಕುಪತ್ರವನ್ನೇ ನೀಡಿಲ್ಲ. ಪ್ರಾರಂಭದಲ್ಲೇ ಅರ್ಜಿ ನೀಡಿದ್ದೇವೆ. ಈಗ ಕೇಳಿದರೆ ಅರ್ಜಿಯೇ ಬಂದಿಲ್ಲ ಎನ್ನುತ್ತಾರೆ ಎಂದು ಶಿವಪ್ಪ ಗೌಡ, ಇಂದ್ರಾವತಿ, ಸರಸ್ವತಿ ಅಳಲು ತೋಡಿಕೊಂಡರು.

ಪ್ರತಿಕ್ರಿಯಿಸಿದ ಶಾಸಕಿ, ಅರ್ಜಿಯೇ ಬಂದಿಲ್ಲ ಎಂದರೆ ಏನರ್ಥ. ತತ್‌ಕ್ಷಣ ಹಕ್ಕು ಪತ್ರ ನೀಡುವ ಕೆಲಸ ಆಗಬೇಕು. ಆಗಲಿಲ್ಲ ಎಂದರೆ, ಸಚಿವರ ಅದಾಲತ್‌ಗೆ ಕಳುಹಿಸಲಾಗುವುದು. ತಪ್ಪಿದರೆ ಜನವರಿಯಲ್ಲಿಮುಖ್ಯ ಮಂತ್ರಿ ಪುತ್ತೂರಿಗೆ ಬರಲಿದ್ದಾರೆ. ಅವರ ಎದು ರಲ್ಲೇ ವಿಷಯ ಇತ್ಯರ್ಥ ಪಡಿಸಲಾಗುವುದು ಎಂದು ತಹಶೀಲ್ದಾರ್‌ಗೆ ತಿಳಿಸಿದರು. ತಹಶೀಲ್ದಾರ್‌ ಅನಂತಶಂಕರ ಅವರು ಮಾತನಾಡಿ, ಎರಡು ದಿನದಲ್ಲಿ ಅರ್ಜಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಅದಾಲತ್‌ ನಡೆಸಿ
ಪುತ್ತೂರು ತಾಲೂಕಿನ ಹಲವಾರು 94ಸಿ ಅರ್ಜಿಗಳು ಅರಣ್ಯ ವ್ಯಾಪ್ತಿ ಎಂದು ಬಾಕಿ ಉಳಿದಿವೆ. ವಾಸ್ತವದಲ್ಲಿ ಇದು ಸಮಸ್ಯೆಯೇ ಅಲ್ಲ. ಆದರೆ ಅರಣ್ಯ- ಕಂದಾಯ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ. ಆದ್ದರಿಂದ ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳು, ಉಸ್ತುವಾರಿ ಸಚಿವರ ಅದಾಲತನ್ನು ಶಾಸಕಿ ಕರೆಯಬೇಕು. ಈ ಅದಾಲತ್‌ ನಲ್ಲಿ ಬಾಕಿಯಾಗಿರುವ ಎಲ್ಲ ಕಡತ ಗಳನ್ನು ವಿಲೇವಾರಿ ಮಾಡಬೇಕು ಎಂದು ಕಾಂಗ್ರೆಸ್‌ ಮುಖಂಡ ಇಸಾಕ್‌ ಸಾಲ್ಮರ ಅವರು ಆಗ್ರಹಿಸಿದರು.

Advertisement

ಅರ್ಜಿಯೇ ನಾಪತೆ?
ಕುಮ್ಕಿಯ ಅಕ್ರಮ ಸಕ್ರಮಕ್ಕೆ 1991ರಲ್ಲೇ ಅರ್ಜಿ ನೀಡಿದ್ದೇನೆ.ಬಳಿಕ ಕಂದಾಯ ಇಲಾಖೆಯಲ್ಲಿ ವಿಚಾರಿಸಿದರೆ ಅರ್ಜಿಯೇ ನೀಡಿಲ್ಲ ಎನ್ನುತ್ತಾರೆ. ಇ-ಮೇಲ್‌ ಮಾಡಿದರೆ, ಹಿಂದಿನ ತಹಶೀಲ್ದಾರ್‌ ಕುಳ್ಳೇಗೌಡ ಅವರ ಖಾತೆಗೆ ಸಂದೇಶ ರವಾನೆಯಾಗುತ್ತದೆ. ಅಂದರೆ ಇ-ಮೇಲ್‌ ಕೂಡ ಅಪ್‌ಡೇಟ್‌ ಆಗುತ್ತಿಲ್ಲ. ನೀಡಿದ ಅರ್ಜಿಯ ಬಗ್ಗೆ ಏನು ಕ್ರಮ ಕೈಗೊಳ್ಳುವುದು ಎಂದೇ ತಿಳಿಯುತ್ತಿಲ್ಲ ಎಂದು ಡಾ| ಎಸ್‌. ಎಸ್‌. ಶರ್ಮ ಅಲವತ್ತುಕೊಂಡರು. ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಅನಂತಶಂಕರ, ತುಂಬಾ ಹಿಂದೆ ನೀಡಿದ ಕಡತವಿದು. ಈಗ ಅರ್ಜಿಯ ಪ್ರತಿ ನೀಡಿದರೆ ಹಿಂಬರಹ ನೀಡಬಹುದಷ್ಟೇ. ಅದನ್ನು ಎಸಿ, ಡಿಸಿಗೆ ಅಪೀಲು ಮಾಡಬೇಕು ಎಂದು ಸಲಹೆ ನೀಡಿದರು .

Advertisement

Udayavani is now on Telegram. Click here to join our channel and stay updated with the latest news.

Next