Advertisement
ಮಾರ್-ಕೆಟ್ಟು ಕರೆಕ್ಷನ್- ನೀವು ಷೇರು ಕೊಂಡ ಮರುದಿನ ನಡೆಯುವಂತದ್ದು!! – ಅನಾಮಿಕ“ಬಲ್ಲಿರೇನಯ್ಯ?’
“ಹೂಂ’
“ಈ ಭರತ ಖಂಡದಲ್ಲಿ. . .’
“ಹೂಂ’
“ಈ ಜಂಬೂ ದ್ವೀಪದಲ್ಲಿ. . .’
“ಹೂಂ’
“ಈ ಷೇರುಕಟ್ಟೆಯೆಂಬ ಮಾಯಾನಗರಿಗೆ. . .’
“ಹೂಂ’
“ಒಡೆಯನು ಯಾರೆಂದು ಕೇಳಿ ಬಲ್ಲಿರಿ??’
“FII ಎಂಬುದಾಗಿ ಕೇಳಿ ಬಲ್ಲೆವು’
Related Articles
Advertisement
ನಿರಂತರವಾಗಿ ನಡೆಯುತ್ತಾ ಬಂದ ಉದಾರೀಕರಣ ಮತ್ತು ಸಡಿಲೀಕರಣ ನೀತಿಗಳು, “”The Indian Growth story’ಯ ಜತೆಜತೆಗೆ ಇನ್ನಷ್ಟೂ ವಿದೇಶಿ ಹೂಡಿಕೆಯನ್ನು ಆಕರ್ಷಿ ಸತೊಡಗಿದವು. ಆ ರೀತಿ ಕಳೆದ 2 ದಶಕಗಳಲ್ಲಿ ವಿದೇಶಿ ಹಣವು ನಮ್ಮ ದೇಶಕ್ಕೆ ಸಾಕಷ್ಟು ಹರಿದು ಬಂದಿದೆ. 2007ರಿಂದ ಈಚೆಗೆ ವಾರ್ಷಿಕ ನಿವ್ವಳ ಒಳಹರಿವು 17 ಬಿಲಿಯ ಡಾಲರ್ ರೇಖೆಯನ್ನು ಮೀರಿ ನಿಂತಿದೆ. ಆದರೆ 2008ರಲ್ಲಿ ರಿಸೆಶನ್ ಸಲುವಾಗಿ ಸುಮಾರು 12 ಬಿಲಿಯ ಡಾಲರ್‌ಗಳಷ್ಟು ಹಿಂಪಡೆದು ನಮ್ಮ ಮಾರುಕಟ್ಟೆ ಕುಸಿಯುವುದಕ್ಕೂ ಕಾರಣರಾಗಿದ್ದಾರೆ. ಈ ವರ್ಷ ಈವರೆಗೆ ಸುಮಾರು 25 ಬಿಲಿಯ ಡಾಲರ್‌ಗಳಷ್ಟು ಅಂದರೆ 1 ಟ್ರಿಲಿಯನ್ ಅಥವಾ 1 ಲಕ್ಷ ಕೋಟಿ ರೂಪಾಯಿಗಳಷ್ಟು ವಿದೇಶಿ ದುಡ್ಡು ನಮ್ಮ ಮಾರುಕಟ್ಟೆಗೆ ಅವರು ಪಂಪ್ ಮಾಡಿದ್ದಾರೆ. ಇಂದಿಗೆ ಮಾರುಕಟ್ಟೆಯಲ್ಲಿ ಈ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಪಾತ್ರ ಬಹಳ ಮಹತ್ತರವಾದದ್ದು. ಸದ್ಯಕ್ಕೆ ನಮ್ಮ ಮಾರುಕಟ್ಟೆ ಬಹುತೇಕ ಅವರ ನಿಯಂತ್ರಣದಲ್ಲಿದೆ.
ಅದು ಹೇಗೆ ಇಷ್ಟು ದುಡ್ಡು ಬರುತ್ತದೆ? ಅದೆಲ್ಲಿಂದ ಬರುತ್ತದೆ?ಗ್ಲೋಬಲ್ ವಿಲೇಜ್ ಅಥವಾ ಇಡೀ ಜಗತ್ತೇ ಒಂದು ಪುಟ್ಟ ಹಳ್ಳಿ ಎಂಬ ಪರಿಕಲ್ಪನೆ ಬಂದ ಮೇಲೆ ವಿದೇಶೀಯರು- ಮುಖ್ಯವಾಗಿ ಅಮೆರಿಕನ್ನರು ತಮ್ಮ ಹೂಡಿಕೆಯನ್ನು ಅತ್ಯಂತ ಜಾಸ್ತಿ ಪ್ರತಿಫಲ ಇರುವ ಯಾವುದೇ ಹೂಡಿಕೆಯಲ್ಲಾದರೂ ಸುಲಭವಾಗಿ ಹಾಕುತ್ತಾರೆ. ಮತ್ತು ಬೇಕಾದಂತೆ ಸಂದರ್ಭಾನುಸಾರ ಅದನ್ನು ಬದಲಾಯಿಸುತ್ತಾರೆ ಕೂಡ. ಕಳೆದೆರಡು ದಶಕಗಳಿಂದ ಅಮೆರಿಕ, ಯುರೋಪ್, ಜಪಾನ್ ಇತ್ಯಾದಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಪ್ರಗತಿ ತೀರಾ ಕಡಿಮೆ. ಒಂದೆರಡೂ ಶೇಕಡಾ ಜಿ.ಡಿ.ಪಿ. ಗ್ರೋಥ್ ಬಂದರೆ ಅದೇ ಭಾಗ್ಯ. ಆದರೆ ಅಭಿವೃದ್ಧಿಶೀಲ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಇಂಡಿಯಾ, ಚೈನಾ (ಇವನ್ನು BRICS countries ಕರೆಯುತ್ತಾರೆ) ಗಳಲ್ಲಿ 6-10% ಅಥವಾ ಇನ್ನೂ ಸ್ವಲ್ಪ ಹೆಚ್ಚು ಪ್ರಗತಿ ಕಾಣಿಸುತ್ತಿದೆ. ಹಾಗಾಗಿ ಆ ಊರಿನವರು ಸಾಧ್ಯವಾದಷ್ಟು ಮಟ್ಟಿಗೆ ಲೋಕಲ್ ದುಡ್ಡನ್ನು ಎತ್ತಿ ಇಂತಹ ಹೈ ಗ್ರೋಥ್ ಮಾರುಕಟ್ಟೆಗಳಲ್ಲಿ ಬಿತ್ತುತ್ತಾರೆ. ಸದ್ಯಕ್ಕೆ ಭಾರತ ಜಿ.ಡಿ.ಪಿ. ಪ್ರಗತಿಯೊಂದಿಗೆ ಒಂದು ಅತ್ಯಾಕರ್ಷಕ ಮಾರುಕಟ್ಟೆ ಎಂಬುದರಲ್ಲಿ ಯಾರಿಗೂ ಸಂಶಯವಿಲ್ಲ. ಹಾಗಾಗಿ ಜಗತ್ತಿನ ಎಲ್ಲೆಡೆಗಳಿಂದಲೂ ದುಡ್ಡು ಇಂದು ಭಾರತವನ್ನು ಅರಸಿ ಬರುತ್ತಿದೆ. ಇದು ಒಂದು ಸಾಧಾರಣವಾದ ಜನರಲ್ ಮಾತಾಯಿತು. ಇನ್ನೂ ಕೂಲಂಕಷವಾಗಿ ಹೋದರೆ ಇದರ ಇನ್ನೊಂದು ಮಜಲು ಗೋಚರಿಸತೊಡಗುತ್ತದೆ. ಭಾರತದ ಷೇರುಗಳಲ್ಲಿ ಹೂಡಿದಾಗ ಭಾರತದ ತೀವ್ರ ಪ್ರಗತಿಯ ಲಾಭ ಷೇರು ಬೆಲೆ ವೃದ್ಧಿಯಲ್ಲಿ ದೊರೆಯುವುದಲ್ಲದೆ ತೆರೆಯ ಮರೆಯಲ್ಲಿ ನಡೆಯುವ ಇನ್ನೊಂದು ಭಾರೀ ಲಾಭ ಕೂಡ ಇವರಿಗೆ ದಕ್ಕುತ್ತದೆ. ಆ ಲಾಭ ರುಪಾಯಿಯ ವಿನಿಮಯ ದರದಿಂದ ಬರುವಂಥದ್ದು. ಹೂಡಿಕೆಗಾಗಿ ಡಾಲರ್‌ನ ಮಹಾಪೂರ ಬರತೊಡಗಿದಾಕ್ಷಣ ರೂಪಾಯಿಗೆ ಬೇಡಿಕೆ ಜಾಸ್ತಿಯಾಗಿ ಅದರ ಬೆಲೆ ವೃದ್ಧಿಯಾಗುತ್ತದೆ ಹಾಗೂ ಡಾಲರ್ಗೆ ಬೇಡಿಕೆ ಕಡಿಮೆಯಾಗಿ ಅದರ ಬೆಲೆ ಕಡಿಮೆಯಾಗುತ್ತದೆ. ಹಾಗಾಗಿ FIIಯವರು ಭಾರತಕ್ಕೆ ಹೂಡಿಕೆ ತರುವಾಗ ಇದ್ದ ವಿನಿಮಯ ದರಕ್ಕಿಂತ ಆಕರ್ಷಕ ವಿನಿಮಯ ದರ ಹೂಡಿಕೆ ಹಿಂದೆಗೆಯುವಾಗ ಅವರಿಗೆ ದಕ್ಕುತ್ತದೆ. ಹೀಗೆ ಭಾರತದಲ್ಲಿ ಅಥವಾ ಇನ್ನಾವುದೇ ಅಭಿವೃದ್ಧಿಶೀಲ ದೇಶದಲ್ಲಿ ಹೂಡಿದಾಗ ಷೇರುಗಳಲ್ಲಿ ಗಳಿಕೆ ಮತ್ತು ವಿನಿಮಯದರದಲ್ಲಿ ಗಳಿಕೆ ಹೀಗೆ ಡಬಲ್ ಬೆನಿಫಿಟ್ ಸಿಗುತ್ತದೆ. ರಿಸೆಶನ್ ಸಮಯದಲ್ಲಿ ಅಮೆರಿಕ ಸರಕಾರ ಘೋಷಿಸಿದ ಸನಿಹ-ಶೂನ್ಯ ಬಡ್ಡಿಯ ಸಾಲದ ಬಹುತೇಕ ದುಡ್ಡು ಈ ರೀತಿ ಡಬಲ್ ಬೆನಿಫಿಟೊಸ್ಕರ ನಮ್ಮೂರು ಪ್ರವೇಶಿಸಿದೆ. ಇದನ್ನು ಡಾಲರ್ ಕ್ಯಾರೀ ಟ್ರೇಡ್ ((Dollar carry trade) ಎಂದು ಜ್ಞಾನಿಗಳು ಕರೆಯುತ್ತಾರೆ. ಈ ಎಲ್ಲ ಪರಿಸ್ಥಿತಿಯಿಂದ ಉಂಟಾಗುವ ಪರಿಣಾಮವೇನೆಂದರೆ ಮಾರುಕಟ್ಟೆ ಇಂದು ಬಹುತೇಕ ಜಾಗತಿಕ ಕೈಗಳಲ್ಲಿ ಸೇರಿಹೋಗಿದೆ. ಮಾರುಕಟ್ಟೆ ಇಂದಿಗೆ ಪ್ರತಿಯೊಂದು ವಿಷಯಕ್ಕೂ ಅವರ ಕೈಸನ್ನೆಯಂತೆ ನೃತ್ಯ ಮಾಡುತ್ತಿದೆ. ವಿದೇಶೀ ಹಣ ಬರುವಾಗ-2007 ರಲ್ಲಿ ಬಂದಂತೆ- ಮಾರುಕಟ್ಟೆ ಏರುತಿಹುದು ಹಾರುತಿಹುದು ನೋಡಿ ನಮ್ಮ ಬಾವುಟ. ಅದರೆ 2008ರಲ್ಲಿ ಆದಂತೆ ಹಣ ವಾಪಾಸು ಹೋಗುವಾಗ ಆಗುವುದು ಎಲ್ಲ ತಟಪಟ. ಜಗತ್ತಿನ ಯಾವ ಮೂಲೆಯಲ್ಲೂ ನಡೆಯಬಹುದಾದ ಯಾವುದೇ ಆಪಘಾತಕ್ಕೆ ಇಂದು ನಾವು ದಂಡ ತೆರಲು ಸಿದ್ಧವಾಗಿರ ಬೇಕು. ಜಾಗತಿಕ ದುಡ್ಡಿನ ಮಜಾ ಮಾತ್ರ ಸವಿಯುತ್ತೇವೆ ಎಂದರೆ ಆಗದು. ಅಮೆರಿಕ, ಜಪಾನ್, ದುಬಾೖ, ಗ್ರೀಸ್ – ಹೀಗೆ ಎಲ್ಲೇ ಆರ್ಥಿಕ ಬಿಕ್ಕಟ್ಟು ಬಂದರೂ ಅದನ್ನು ರಿಪೇರಿ ಮಾಡಲು ನಮ್ಮಲ್ಲಿ ಹೂಡಿದ್ದ ಷೇರುಗಳನ್ನು ಮಾರಿ ದುಡ್ಡನ್ನು ಅಲ್ಲಿಗೆ ನಿರ್ದಾಕ್ಷಿಣ್ಯವಾಗಿ ಕೊಂಡೊಯ್ಯುತ್ತಾರೆ. ಅಷ್ಟೇ ಏಕೆ? FIIಯವರು ದಿನಾ ಎಂಬಂತೆ ಜಗತ್ತಿನ ಎಲ್ಲ ಮಾರುಕಟ್ಟೆಗಳನ್ನೂ ತುಲನೆ ಮಾಡುತ್ತಾ ಇರುತ್ತಾರೆ. ಯಾವುದೇ ಸಮಯದಲ್ಲಿ ಯಾವುದೇ ಮಾರುಕಟ್ಟೆ ಜಾಸ್ತಿ ಆಕರ್ಷಕವಾಗಿ ಕಂಡುಬಂದರೂ ಸ್ವಲ್ಪ ದುಬಾರಿ ಎನಿಸಿದ ಮಾರುಕಟ್ಟೆಯಲ್ಲಿ ಷೇರು ಮಾರಿ ಆಕರ್ಷಕ ಬೆಲೆಗಳಿರುವ ಮಾರುಕಟ್ಟೆಗೆ ಕೊಂಡು ಹೋಗಿ ಅಲ್ಲಿ ದುಡ್ಡು ಸುರಿಯುತ್ತಾರೆ. ಮತ್ತದು ಸಾಕಷ್ಟು ಏರಿದ ಅನಂತರ ನಿರ್ಭಾವುಕರಾಗಿ ಅವನ್ನು ಅಲ್ಲಿ ಮಾರಿ ಲಾಭ ಕಿಸಿಗಿಳಿಸಿ ಅಲ್ಲಿಂದ ಇನ್ನೊಂದು ಮಾರುಕಟ್ಟೆಯತ್ತ ಹೋಗುತ್ತಾರೆ. ಲಕ್ಷ್ಮೀ ಚಂಚಲೆ ಎನ್ನುವುದನ್ನು ಬಿಳಿ ಬಣ್ಣದವರೂ ಸಾಧಿಸಿ ತೋರಿಸುತ್ತಾರೆ. ಅಲ್ಲವೇ? ಬೇರೆ ಬೇರೆ ದೇಶಗಳ ಷೇರು ಮಾರುಕಟ್ಟೆಗಳನ್ನು ಮಾತ್ರವೇ ಅಲ್ಲ; ರಿಯಲ್ ಎಸ್ಟೇಟ್, ಚಿನ್ನ, ತೈಲ, ಮೆಟಲ್‌ಗಳು, ಕರೆನ್ಸಿ ಮಾರುಕಟ್ಟೆ ಇತ್ಯಾದಿ ಬೇರೆ ಬೇರೆ ಪರ್ಯಾಯ ಹೂಡಿಕಾ ಆಯ್ಕೆಗಳನ್ನು ಈ ವಿದೇಶೀ ಹೂಡಿಕೆದಾರರು ಸದಾ ತುಲನೆ ಮಾಡುತ್ತಾ ಇರುತ್ತಾರೆ. ನಾಳೆ ಎಲ್ಲಾದರು ಕ್ರೂಡ್ ತೈಲದ ಬೆಲೆ ಸಕತ್ ಏರತೊಡಗಿದರೆ ಭಾರತದಲ್ಲಿ ಹೂಡಿದ್ದ ಷೇರುಗಳನ್ನು ಮಾರಿ ತೈಲದ ಹಿಂದೆ ಹೋದಾರು. ದುಬಾೖಯಲ್ಲಿ ರಿಯಲ್ ಎಸ್ಟೇಟ್ ಪುನಃ ಓಡತೊಡಗಿದರೆ ಚಿನ್ನದ ಮೋಹ ಬಿಟ್ಟು ಅದರ ಹಿಂದೆ ಓಡಿಯಾರು. ಈ ರೀತಿ ಬೇರೆ ಬೇರೆ ಮಾರುಕಟ್ಟೆಗಳ ಏರಿಳಿತದ ರಿಸ್ಕಿಗೆ ಇಂದು ಭಾರತೀಯ ಷೇರು ಬಜಾರು ತನ್ನನ್ನು ತಾನೇ ತೆರೆದಿಟ್ಟುಕೊಂಡಿದೆ. ಇಂದಿನ ತಾರೀಖೀನಲ್ಲಿ ಭಾರತೀಯ ಷೇರುಕಟ್ಟೆಯಲ್ಲಿ ದುಡ್ಡು ಹಾಕುವ ಯಾವುದೇ ಬಡಪಾಯಿ ಜಾಗತಿಕ ಮಟ್ಟದಲ್ಲಿ ಷೇರು, ತೈಲ, ಚಿನ್ನ, ಕರೆನ್ಸಿ ಇತ್ಯಾದಿ ಎಲ್ಲ ಹೂಡಿಕೆಗಳಲ್ಲಿ ಆಗುಹೋಗುವ ವಿದ್ಯಮಾನಗಳನ್ನು ಅರಿತಿರಬೇಕು. ಈಗೀಗ ಜೀವನ ಮೊದಲಿನಷ್ಟು ಸುಲಭವಲ್ಲ. ಪ್ರಸಂಗದ ಇನ್ನೊಂದು ಮಜಲನ್ನು ಹೇಳದೆ ಹೋದರೆ ಇವತ್ತಿನ ಪ್ರಸಂಗ ಪೂರ್ಣವೆನಿಸದು. ನಮ್ಮ ವಿತ್ತ ಮಂತ್ರಾಲಯಕ್ಕೂ FIIಗಳಿಗೂ ಅಗಾಗ್ಗೆ ಚಕಮಕಿ ನಡೆಯುವುದನ್ನು ನೀವೆಲ್ಲರೂ ಓದಿರಬಹುದು. ಜಾಗತಿಕ ಕರಸ್ವರ್ಗಗಳೆಂದು ಹೆಸರುವಾಸಿಯಾದ ಮಾರಿಶಸ್, ಸ್ವಿಸ್, ಕಿಟ್ಸ್ ಇತ್ಯಾದಿ ನೆಲೆಗಳಲ್ಲಿ ಜನ್ಮವೆತ್ತುವ ಹೆಚ್ಚಿನ FIIಗಳ ಮುಖವಾಡದ ಹಿಂದಿರುವ ಅಸಲಿ ಹೂಡಿಕೆದಾರರು ಯಾರು ಎಂಬ ಸಮಸ್ಯೆ ನಮ್ಮ ಸರಕಾರವನ್ನು ಯಾವತ್ತೂ ಕಾಡುತ್ತಿರುತ್ತದೆ. ಅದಕ್ಕಾಗಿ ಅವರು ತಮ್ಮ ಮುಖವಾಡ
ಕಂಪೆನಿಗಳ (ಶೆಲ್ ಕಂಪೆನಿ) ಹಿಂದೆ ಇರುವ ನಿಜವಾದ ಹೂಡಿಕೆ ದಾರರ ಸಬ್-ಅಕೌಂಟ್ ಮತ್ತು ಅವರಿಗೆ ನೀಡಿರುವ P&Note (Participatory Note) ಬಗ್ಗೆ ಮಾಹಿತಿ ನೀಡಬೇಕು ಎಂಬಿತ್ಯಾದಿ ತಗಾದೆಗಳನ್ನು ನಮ್ಮ ಮಂತ್ರಾಲಯ ಆಗಿಂದಾಗ್ಗೆ ಎತ್ತುತ್ತಾ ಇರುತ್ತದೆ. ಹಾಗೆ ಎತ್ತಿದಾಗಲೆಲ್ಲ ಮಾರುಕಟ್ಟೆ ಸ್ವಲ್ಪ ಕುಸಿಯುತ್ತದೆ. ಒಮ್ಮೊಮ್ಮೆ ಅವರುಗಳ ಹಣದ ಒಳಹರಿವಿನ ಮೇಲೆ ಕಡಿವಾಣ ಹಾಕಬೇಕೇ ಬೇಡವೇ ಎಂಬ ಚರ್ಚೆ ಕೂಡ ಜೀವಂತವಾಗುತ್ತದೆ. ಅಗಲೂ ಮಾರುಕಟ್ಟೆ ಕುಸಿಯುವ ಅಂಚಿಗೆ ಬರುತ್ತದೆ. ಭಾರತದ್ದೇ ಕಪ್ಪುಹಣ ಈ ಕರಸ್ವರ್ಗಗಳಿಗೆ ಹವಾಲ ದಾರಿಯ ಮೂಲಕ ಹೋಗಿ ಅಲ್ಲಿಂದ FIIಮುಖವಾಡದಲ್ಲಿ ವಾಪಾಸು ಭಾರತದ ಷೇರುಕಟ್ಟೆಗೆ ಬರುವುದರ ಬಗ್ಗೆ ಸಾಕಷ್ಟು ಗುಸುಗುಸು ಮಾತು ಕೇಳಿಬರುತ್ತಿವೆ. ಇದಕ್ಕೆ Round tripping ಎನ್ನುತ್ತಾರೆ. ಅಲ್ಲದೆ, ಮಫಿಯಾ ಮತ್ತು ಕ್ರೈಮ್ ದುಡ್ಡು ಕೂಡಾ ಇವುಗಳ ಹಿಂದೆ ಅವಿತಿರಬಹುದು ಎನ್ನುತ್ತಾರೆ ಬಲ್ಲಿದರು. ಹೀಗೆ ಹೂಡಿಕೆದಾರರು ಭಾರತೀಯ ಷೇರುಕಟ್ಟೆಯ ಪ್ರಸಂಗದಲ್ಲಿ ಈ FIIಎಂಬ ಅಧಿಕ ಪ್ರಸಂಗವನ್ನೂ ಒಟ್ಟಾರೆ ಗಮನದಲ್ಲಿಟ್ಟುಕೊಂಡಿರಲೇಬೇಕು.
ಇತಿ FII ಮಹಾತ್ಮೆ. ಮಂಗಳಂ. ಶುಭ ಮಂಗಳಂ !! ಜಯದೇವ ಪ್ರಸಾದ ಮೊಳೆಯಾರ