Advertisement

ಚಳಿಯ ಅಬ್ಬರಕ್ಕೆ ತತ್ತರಿಸಿದ ಹೈನೋದ್ಯಮ

06:05 AM Jan 23, 2018 | |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಸಂಕ್ರಾಂತಿ ಹಬ್ಬದ ನಂತರವೂ ಚಳಿಯ ಅಬ್ಬರ ಜೋರಾಗಿದ್ದು, ಹೈನೋದ್ಯಮ ತತ್ತರಗೊಳ್ಳುವಂತಾಗಿದೆ. ಕಳೆದೊಂದು ತಿಂಗಳಿಂದ ಚಳಿಯ ತೀವ್ರತೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆಯಾಗುತ್ತಿರುವ ಹಳೆ ಮೈಸೂರು ವಿಭಾಗ ಹಾಗೂ ಬಯಲುಸೀಮೆ ಜಿಲ್ಲೆಗಳಲ್ಲಿ ಕುಸಿತಗೊಂಡಿರುವುದು ಕೆಎಂಎಫ್ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. 

Advertisement

ಇದರಿಂದಾಗಿ ಕೆಲ ಹಾಲು ಒಕ್ಕೂಟಗಳು ಆರ್ಥಿಕ ಸಂಕಷ್ಟದ ಭೀತಿ ಎದುರಿಸುತ್ತಿವೆ. ಆದರೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಚಳಿಯ ಪ್ರಭಾವ ಹೈನೋದ್ಯಮದ ಮೇಲೆ ಯಾವುದೇ ಪರಿಣಾಮ ಬಿದ್ದಿಲ್ಲ. ಧಾರವಾಡ, ವಿಜಯಪುರ, ಬೆಳಗಾವಿ, ಕಲಬುರಗಿ ಹಾಲು ಒಕ್ಕೂಟಗಳಲ್ಲಿ ಹಾಲಿನ ಉತ್ಪಾದನೆ ಯಥಾಸ್ಥಿತಿಯಲ್ಲಿ ಇದೆ.

ಕ್ಷೀರಕ್ರಾಂತಿಯಲ್ಲಿ ಮುಂಚೂಣಿಯಲ್ಲಿರುವ ರಾಜಧಾನಿ ಬೆಂಗಳೂರು ಹಾಗೂ 2 ನೇ ಸ್ಥಾನದಲ್ಲಿರುವ ಅವಿಭಜಿತ ಕೋಲಾರ ಹಾಲು ಒಕ್ಕೂಟಗಳಲ್ಲಿ ಈಗ ಪ್ರತಿನಿತ್ಯ ತಲಾ ಒಂದು ಲಕ್ಷ ಲೀ. ಹಾಲು ಉತ್ಪಾದನೆ ಕಡಿಮೆಯಾಗಿದೆ. ರಾಜ್ಯದಲ್ಲಿ 72 ಲಕ್ಷ ಲೀಟರ್‌ ಪೈಕಿ ಈಗ ನಿತ್ಯ 66 ರಿಂದ 67 ಲಕ್ಷ ಲೀ. ಹಾಲು ಮಾತ್ರ ಹಾಲು ಒಕ್ಕೂಟಗಳಿಗೆ ಪೂರೈಕೆಯಾಗುತ್ತಿದ್ದು, ಉಳಿದ 5 ರಿಂದ 6 ಲಕ್ಷ ಲೀ. ಹಾಲು ಉತ್ಪಾದನೆ ಕುಸಿತಗೊಂಡಿದೆ.

ಯಾವ ಒಕ್ಕೂಟದಲ್ಲಿ ಎಷ್ಟು?: ಕೆಎಂಎಫ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಪ್ರತಿನಿತ್ಯ ಸರಾಸರಿ 15 ಲಕ್ಷ ಲೀ.ಹಾಲು ಉತ್ಪಾದಿಸುತ್ತಿದ್ದ ಬೆಂಗಳೂರು ಹಾಲು ಒಕ್ಕೂಟಕ್ಕೆ ಈಗ 14 ಲಕ್ಷ ಲೀ. ಹಾಲು ಮಾತ್ರ ಪೂರೈಕೆಯಾಗುತ್ತಿದೆ. ನಿತ್ಯ 10 ಲಕ್ಷ ಲೀ.ಹಾಲು ಹರಿದು ಬರುತ್ತಿದ್ದ ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಈಗ ಕೇವಲ 9 ಲಕ್ಷ ಲೀ.ಹಾಲು ಮಾತ್ರ ಪೂರೈಕೆಯಾಗುತ್ತಿದೆ.

ಮೈಸೂರು ಹಾಲು ಒಕ್ಕೂಟದಲ್ಲಿ ಸರಾಸರಿ 5.15 ಲಕ್ಷ ಲೀ. ಪೈಕಿ ಈಗ 4.39 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ತುಮಕೂರು ಹಾಲು ಒಕ್ಕೂಟದಲ್ಲಿ ಸರಾಸರಿ 6.14 ಲಕ್ಷ ಲೀ.ಹಾಲಿನ ಪೈಕಿ 5.78 ಲಕ್ಷ ಉತ್ಪಾದನೆಯಾಗುತ್ತಿದೆ. ಬಳ್ಳಾರಿ ಹಾಲು ಒಕ್ಕೂಟದಲ್ಲಿ 1.86 ಲಕ್ಷ ಲೀ.ಇದ್ದ ಹಾಲು ಉತ್ಪಾ ದನೆ 1.60 ಲಕ್ಷ ಲೀ.ಗೆ ಇಳಿದಿದೆ.

Advertisement

ಮಂಡ್ಯದಲ್ಲಿ ತಿಂಗಳಲ್ಲಿ 34 ಸಾವಿರ ಲೀಟರ್‌ ಹಾಲು ಉತ್ಪಾದನೆ ಕಡಿಮೆಯಾಗಿದೆ. ಶಿವಮೊಗ್ಗದಲ್ಲಿ 5.18 ಲಕ್ಷ ಲೀ. ಪೈಕಿ ಈಗ ಕೇವಲ 4.67 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಹಾಸನದಲ್ಲಿ 50 ಸಾವಿರ ಲೀಟರ್‌ ಹಾಲು ಕಡಿಮೆಯಾಗಿದೆ. ಇದರಿಂದಾಗಿ ಹೈನೋದ್ಯಮವನ್ನೇ ನಂಬಿರುವ ಉತ್ಪಾದಕರಿಗೂ ಹೊಡೆತ ಬೀಳುತ್ತಿದೆ. ಚಳಿಯಿಂದ ರಾಸುಗಳು ಹೆಚ್ಚಿನ ಪ್ರಮಾಣದಲ್ಲಿ ಪಶು ಆಹಾರ ತಿಂದರೂ ನಿರೀಕ್ಷಿತ ಮಟ್ಟದಲ್ಲಿ ಹಾಲು ಕೊಡುತ್ತಿಲ್ಲ.

10 ಲೀ. ಹಾಲು ಕೊಡುವ ಹಸು ಚಳಿಗಾಲದಿಂದ 6 ರಿಂದ 7 ಲೀ.ಹಾಲನ್ನಷ್ಟೇ ನೀಡುತ್ತಿವೆ ಎನ್ನುತ್ತಾರೆ ರೈತರು. ಚಳಿಗಾಲದ ಸಂದರ್ಭ ಹಾಲು ಉತ್ಪಾದನೆ ಕುಸಿತ ಮಾಮೂಲಿ ಎನ್ನುತ್ತಾರೆ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಶೇಖರಣಾ ಹಾಗೂ ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಡಾ.ವಿ.ಎಂ. ರಾಜು. ದಿಢೀರನೆ ಹಾಲು ಉತ್ಪಾದನೆಯಲ್ಲಿ ಕುಸಿತ ಕಂಡರೆ ಒಕ್ಕೂಟಗಳ ಆರ್ಥಿಕ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಕೆಎಂಎಫ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ಕಳೆದ ವರ್ಷ ಹೋಲಿಸಿದರೆ ಈ ವರ್ಷ ಚಳಿಯ ತೀವ್ರತೆ ಹೆಚ್ಚಾಗಿರುವುದರಿಂದ ಹಾಲು ಉತ್ಪಾದನೆಯಲ್ಲಿ
ಸಾಕಷ್ಟು ಕುಸಿತ ಕಂಡಿದೆ.

– ಕೆ.ವಿ.ನಾಗರಾಜ್‌, ಕೋಲಾರ-
ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next