ಕಲಬುರಗಿ: ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್ ಸೋಂಕು ಮತ್ತಷ್ಟು ಆತಂಕ ತಂದೊಡ್ಡಿದೆ. ಗುರುವಾರ ಮತ್ತೆ 48 ಜನರಿಗೆ ಸೋಂಕು ದೃಢಪಟ್ಟಿದ್ದು, ರಾಜ್ಯದ ಕೋವಿಡ್ ಸೋಂಕಿತ ಜಿಲ್ಲೆಗಳ ಪಟ್ಟಿಯಲ್ಲಿ ಕಲಬುರಗಿ ಅಗ್ರಸ್ಥಾನಕ್ಕೇರಿದೆ.
48 ಹೊಸ ಕೋವಿಡ್ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,074ಕ್ಕೆ ಏರಿಕೆಯಾಗಿದೆ. 1,039 ಕೋವಿಡ್ ಪ್ರಕರಣಗಳನ್ನು ಹೊಂದಿರುವ ಉಡುಪಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಇದೇ ವೇಳೆ ಸೇಡಂ ತಾಲೂಕಿನಲ್ಲಿ ಕೋವಿಡ್ ವೈರಾಣುವಿನಿಂದ ಮೊದಲು ಸಾವು ದಾಖಲಾಗಿದೆ.
ಗೋಕನಪಲ್ಲಿ ಗ್ರಾಮದ 50 ವರ್ಷದ ವ್ಯಕ್ತಿ (ಪಿ-7907) ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದಾರೆ. ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಈ ವ್ಯಕ್ತಿ ಜೂ.13ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜೂ.15ರಂದು ಅಸುನೀಗಿದ್ದು, ಇದೀಗ ಈತನಿಗೆ ಕೋವಿಡ್ ಸೋಂಕಿತ್ತು ಎಂಬುದು ಖಚಿತವಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
48 ಸೋಂಕಿತರ ಪೈಕಿ 18 ಮಕ್ಕಳೂ ಸೇರಿದ್ದಾರೆ. ಅತ್ಯಧಿಕ 22 ಜನ ಸೋಂಕಿತರು ಸೇಡಂ ತಾಲೂಕಿನವರೇ ಆಗಿದ್ದಾರೆ. ಉಳಿದಂತೆ ಕಲಬುರಗಿ ತಾಲೂಕಿನ 10, ಕಾಳಗಿ ತಾಲೂಕಿನ 9, ಚಿಂಚೋಳಿ ತಾಲೂಕಿನ 2 ಮತ್ತು ಆಳಂದ, ಜೇವರ್ಗಿ ಹಾಗೂ ಚಿತ್ತಾಪುರ ತಾಲೂಕಿನ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಇದರಲ್ಲಿ 24 ಜನರ ಸೋಂಕಿನ ಮೂಲವೇ ಇನ್ನೂ ಪತ್ತೆಯಾಗಿಲ್ಲ. ಕಲಬುರಗಿಯ ಅಂಬಿಕಾ ನಗರದ 11 ವರ್ಷದ ಬಾಲಕ, ನಂದಿಕೂರ ಗ್ರಾಮದ ಒಂದು ವರ್ಷದ ಹೆಣ್ಣು, ಕಾಳಗಿ ತಾಲೂಕಿನ ಬುಗಡಿ ತಾಂಡಾದ ಮೂರು ವರ್ಷದ ಹೆಣ್ಣು ಮಗು, ಸೇಡಂನಲ್ಲಿ ನಾಲ್ವರು ಮಕ್ಕಳು ಹಾಗೂ ಕಾಳಗಿ ತಾಲೂಕಿನ ಬುಗಡಿ ತಾಂಡಾದ 60 ವರ್ಷ ಮತ್ತು 75 ವರ್ಷದ ವೃದ್ಧರೂ ಸೇರಿದ್ದು, ಇವರಿಗೆ ಸೋಂಕು ಹೇಗೆ ಹರಡಿದೆ ಎನ್ನುವುದು ಗೊತ್ತಾಗಿಲ್ಲ. ಉಳಿದಂತೆ ಮಹಾರಾಷ್ಟ್ರದಿಂದ ಆಗಮಿಸಿರುವ 18 ಜನರು ಹಾಗೂ ಸೋಂಕಿತರ ಸಂಪರ್ಕಕ್ಕೆ ಬಂದ ಆರು ಜನರಿಗೆ ಕೋವಿಡ್ ವಕ್ಕರಿಸಿದೆ. ಅಲ್ಲದೇ, 12 ಜನ ಸೋಂಕಿತರು ಗಂಭೀರ ಸ್ಥಿತಿಯಲ್ಲಿದ್ದು, ಇವರಿಗೆ ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಇನ್ನು ಗುರುವಾರ ಮತ್ತೆ 32 ಜನ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಆಸ್ಪತ್ರೆಯಲ್ಲೇ ಗಂಟಲು ದ್ರವ ಸಂಗ್ರಹ : ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಜ್ವರ, ಉಸಿರಾಟದ ತೊಂದರೆ, ಶೀತ ಹಾಗೂ ಕೆಮ್ಮು ಸಂಬಂಧಿಸಿದ ಚಿಕಿತ್ಸೆಗಾಗಿ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಸಾರ್ವಜನಿಕರು ಹಾಗೂ ರೋಗಿಗಳು ಹೋಗಿದ್ದಲ್ಲಿ ಅದೇ ಆಸ್ಪತ್ರೆಯಲ್ಲಿ ಗಂಟಲು ದ್ರವ ಸಂಗ್ರಹಿಸಲಾಗುತ್ತದೆ. ಕೊರೊನಾ ಲಕ್ಷಣಗಳಿದ್ದಲ್ಲಿ ಆಸ್ಪತ್ರೆಯ ವೈದ್ಯಾಧಿ ಕಾರಿಗಳ ತೀರ್ಮಾನದ ಮೇರೆಗೆ ರೋಗಿಗಳನ್ನು ತಾಪಸಣೆಗೊಳಪಡಿಸಲಾಗುತ್ತದೆ. ಈ ಪರೀಕ್ಷೆ ಉಚಿತ ಮತ್ತು ಕಡ್ಡಾಯ.
– ಶರತ್ ಬಿ., ಜಿಲ್ಲಾಧಿಕಾರಿ