Advertisement
ನಾಲ್ಕೈದು ಡಿಗ್ರಿ ಪಡೆದು, ದಪ್ಪದಪ್ಪ ಪದಕಗಳನ್ನು ಕೊರಳಿಗೆ ಹಾಕಿಕೊಂಡವರ ಬದುಕು ಕೂಡ ಪದಕದ ಮೇಲಿನ ಬಂಗಾರದಂತೆ ಚೆಂದವಾಗಿರುತ್ತದಾ? ಗೊತ್ತಿಲ್ಲ. ಅದು ಬಿಡಿ, ಓದುವುದು ಒಳ್ಳೆಯದು ತಾನೆ? ಹೌದು. ತುಂಬಾ ಜಾಸ್ತಿನೇ ಓದುವುದು? ಅದು ಕೂಡ ಒಳ್ಳೆಯದೇ.. ಆದರೆ.. ಒಂದೆರಡು ಉದಾಹರಣೆಗಳನ್ನು ಕೊಡದೆ ಹೇಳ ಹೊರಟ ಈ ವಿಷಯದ ಸಂಕಟ ನಿಮಗೆ ಅರ್ಥವಾಗಲಿಕ್ಕಿಲ್ಲ. ಆವತ್ತೂಂದಿನ ಮಗುವಿನ ಅಡ್ಮಿಷನ್‌ಗೆ ಅಂತ ಮಗುವನ್ನು ಕರೆದುಕೊಂಡು ಬಂದಿದ್ದ ವ್ಯಕ್ತಿ ಮತ್ತು ಅವರ ಪಕ್ಕದಲ್ಲಿದ್ದ ಮಗುವನ್ನು ನೋಡಿ, “ಏನು ಮೊಮ್ಮಗನನ್ನು ಸೇರ್ಸೋಕೆ ಬಂದ್ರಾ?’ ಅನ್ನುತ್ತಾ ನಕ್ಕೆ.
Related Articles
Advertisement
ಬದುಕು ಒಂದು ; ಓದು ಹಲವು: ಓದು ಒಳ್ಳೆಯದು ಮತ್ತು ಮನುಷ್ಯ ಕಡ್ಡಾಯವಾಗಿ ಓದಲೇಬೇಕು. ಆದರೆ, ಅದು ನಮ್ಮ ಬದುಕುನ್ನು ಪಕ್ಕಕ್ಕೆ ಸರಿಸುವಷ್ಟಲ್ಲ. ಇರುವುದು ಒಂದೇ ಬದುಕು. ಅದಕ್ಕೆ ಪರ್ಯಾಯವಾದ್ದದ್ದು ಇಲ್ಲ. ಓದಿನ ಹೆಚ್ಚುಗಾರಿಕೆಯು ತನ್ನೊಂದಿಗೆ ತಂದು ಹಾಕುವ ವಿಚಿತ್ರ ಸಂಗತಿಗಳು ಓದಿದವನ ಬದುಕಿನ ರುಚಿಯನ್ನು ತೀರಾಸಪ್ಪೆಗೊಳಿಸಬಲ್ಲವು. ಹೆಚ್ಚಿನ ಓದುಗಾರಿಕೆ ಮತ್ತು ಬದುಕು ಈ ಎರಡನ್ನೂ ಸಮತೋಲಿಸಿಕೊಂಡವರು ಬಹಳ ಕಡಿಮೆ.
ಓದಿನ ಹುಚ್ಚಿನಲ್ಲಿ ಮುಳುಗಿ ಬದುಕನ್ನು ಸೈಡಿಗಿಟ್ಟವರು ಹಲವರು. ಬದುಕು ಮುಗಿದರೂ ಓದುವುದು ಮುಗಿಯುವುದಿಲ್ಲ. ಅದಕ್ಕಾಗಿ ಬದುಕನ್ನು ಮುಗಿಸಿಕೊಳ್ಳುತ್ತಾ ಓದುತ್ತಾ ಕೂರುವುದಲ್ಲ. ಆಸೆಬುರುಕತನಕ್ಕೆ ಬಿದ್ದು ಪರೀಕ್ಷೆಗಳ ಮೇಲೆ ಪರೀಕ್ಷೆಗಳನ್ನು ತೆಗೆದುಕೊಂಡು ರ್‍ಯಾಂಕ್ ಮೇಲೆ ರ್‍ಯಾಂಕ್‌ಗಳನ್ನು ಕೊರಳಿಗೆ ನೇತುಹಾಕಿಕೊಂಡು ಒಂದೊಳ್ಳೆ ಜಾಬ್ ಹುಡುಕುವಲ್ಲೇ ಬದುಕಿನ ಬಹುಪಾಲು ಸಮಯವನ್ನು ಮುಗಿಸಿಬಿಟ್ಟರೆ ಹೇಗೆ? ಓದು ಎಂದಿಗೂ ಮುಗಿಯುವುದಿಲ್ಲ.
ಆದ್ಯತೆಗಳು ಬದಲಾಗಿವೆ: ಕಾಲ ಬದಲಾದಂತೆ, ಮನುಷ್ಯನ ಆದ್ಯತೆಗಳು ಕೂಡ ಬದಲಾಗುತ್ತವೆ. ಇದು ಹೆಚ್ಚು ಹೆಚ್ಚು ಓದಿಕೊಳ್ಳುತ್ತಿರುವ ಜಗತ್ತು. ಅದೇ ಓದು ಬದಲಾವಣೆಗೆ ಮತ್ತಷ್ಟು ವೇಗ ನೀಡಿದೆ. ಜಾಗತೀಕರಣ ಈಗ ಮನೆಯಂಗಳದ ಗಿಡ. ಹೆಚ್ಚು ಓದಿದ ಹುಡುಗ- ಹುಡುಗಿಯರು, ತಮ್ಮಿಷ್ಟದ ಬದುಕನ್ನು ತುಳಿಯಲು ಬಯಸುತ್ತಾರೆ. ಉದಾಹರಣೆಗೆ- ಮದುವೆ ಈಗ ಅವರಿಗೆ ಬದುಕಿನ ಮೊದಲ ಆದ್ಯತೆಯಾಗಿ ಉಳಿದಿಲ್ಲ. ಹಳೆಯ ಸಿಕ್ಕುಗಳಲ್ಲೇ ಉಳಿದುಬಿಡಲು ಅವರಿಗೆ ಮನಸ್ಸಿಲ್ಲ. ಪ್ರತಿಷ್ಠೆ ಮತ್ತು ಗುರುತಿಸಿಕೊಳ್ಳುವಿಕೆ ಮೊದಲ ಸಾಲಿನಲ್ಲಿ ಬಂದು ಕೂತಿದೆ. ನಾನು ಹೆಚ್ಚು ಓದಿಕೊಂಡಿದ್ದೇನೆ ಎನ್ನುವ ಭಾವವೇ ಬದುಕಿನ ಆದ್ಯತೆಗಳಲ್ಲಿ ಏರುಪೇರು ತಂದಿದೆ.
ಉದ್ಯೋಗದ ಕಳವಳಗಳು: ನಮ್ಮಲ್ಲಿ ಹೆಚ್ಚು ಹೆಚ್ಚು ಪದವಿ ಪಡೆದವರಿಗೆ ಬೇಗ ಒಂದು ನೌಕರಿ ಸಿಗುತ್ತದೆ ಅನ್ನೋದು ಅನುಮಾನ. ಗೆಳೆಯರಲ್ಲಿ ಕೆಲವರು ಕ್ಯಾಂಪಸ್ ಸೆಲೆಕ್ಷನ್ ಆಗಿ ಕೆಲಸ ಮಾಡಲು ಹೋದರೆನ್ನಿ, ಆಗ ಮನಸ್ಸು ನಾನು ಮಾತ್ರ ಹೈಯರ್ ಸ್ಟಡೀಸ್ ಅಂತ ಇದ್ದೇನೆ. ಓದು ಮುಗಿದ ಮೇಲೆ ಕೆಲಸ ಸಿಗದೇ ಹೋದರೆ ಅಂತ ಕೊರಗುತ್ತಿರುತ್ತದೆ. ಉದ್ಯೋಗ ಸಿಗದೇ ತನ್ನ ಬದುಕುನ್ನಾದ್ರೂ ಆತ ಹೇಗೆ ಕಟ್ಟಿಕೊಳ್ಳುವುದು? ಹೀಗಾಗಿ, ಆತ ಅಥವಾ ಅವಳು ಹೆಚ್ಚು ಓದಿದ್ದರೂ, ಕಡಿಮೆ ಓದಿಗೆ ಸಿಗಬಹುದಾದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಅವರೊಳಗೊಂದು ವಿಚಿತ್ರ ತಳಮಳ ಏಳುವುದು ಆಗಲೇ.
ಹೆಚ್ಚು ಓದುವುದೇ ಬೇಡ್ವ?: ಬೇಡ ಅಂತ ಹೇಳಿದರೆ ಅದು ಮೂರ್ಖತನವಾದೀತು. ಓದು ಬೇಕು ಬದುಕಿಗೆ ಆದರೆ ಅದೇ ಬದುಕಾಗಬಾರದು ಅಲ್ವಾ? ಬದುಕು ಬೇಡುವ ಹಲವು ಕಾರ್ಯರೂಪಕಗಳ ನಡುವೆಯೂ ಓದನ್ನು ಒಂದು ಕಡೆ ಜತನವಾಗಿ ಸಾಕಿಕೊಳ್ಳ ಬಹುದು. ಬದುಕು ಅನ್ನೋದು ಇರೋದು ಒಂದೇ. ಇಡೀ ಬದುಕನ್ನು ಪರೀಕ್ಷೆ ಮತ್ತು ಫಲಿತಾಂಶಗಳಲ್ಲೇ ಮುಗಿಸಿ ಬಿಟ್ಟರೆ ಹೇಗೆ? ಎರಡನ್ನೂ ಬ್ಯಾಲೆನ್ಸ್ ಮಾಡುವುದು ಗೊತ್ತಿದ್ದರೆ ತುಂಬಾ ಒಳ್ಳೆಯದು. ಒಂದು ಹಂತದ ವರೆಗೆ ಬದುಕು ಕಟ್ಟಿಕೊಳ್ಳಲು ಓದಿ. ನಂತರ ಕಟ್ಟಿಕೊಂಡ ಬದುಕನ್ನು ಇನ್ನಷ್ಟು ಸುಂದರಗೊಳಿಸಿಕೊಳ್ಳಲು ನಾನ್ ಅಕಾಡೆಮಿಕ್ ಆಗಿ ಓದಿ. ತುಂಬಾ ತಿಳಿದಕೊಂಡವನ ಕಣ್ಣಿನಲ್ಲಿ ಬದುಕು ಮತ್ತು ಜಗತ್ತು ಸುಂದರವಾಗಿಯೇ ಕಾಣಿಸುತ್ತವೆ. ಬದುಕಿಗಾಗಿ ಓದನ್ನು ದೂರ ಇಡುವುದು, ಓದಿಗಾಗಿ ಬದುಕನ್ನು ಪಕ್ಕಕ್ಕಿಡುವುದು ಎರಡೂ ಸರಿ ಅಲ್ಲ. ಎರಡನ್ನೂ ಸರಿದೂಗಿಸಿಕೊಳ್ಳುವುದನ್ನು ಕಲಿಯಬೇಕು. ಆಗ ಮಾತ್ರ ಲೈಫ್ ಈಸ್ ಬ್ಯೂಟಿಫುಲ್ ಅನಿಸುತ್ತದೆ.
ಮದುವೆ ತಡವಾಗುತ್ತೆ!: ಇಷ್ಟದ ಓದಿನ ಬೆನ್ನು ಹತ್ತಿದಾಗ ಅದು ಸಾಕಷ್ಟು ಸಮಯ ಕೇಳುತ್ತದೆ. ಉದಾಹರಣೆಗೆ- ಪಿಎಚ್.ಡಿ, ಅದರಲ್ಲೂ ವಿಜ್ಞಾನದ ವಿಷಯಗಳಲ್ಲಿ ತೆಗೆದು ಕೊಂಡರೆ ಐದು ವರ್ಷದಲ್ಲಿ ಮುಗಿಯೋದು 7-8 ವರ್ಷ ಆಗಬಹುದು. ಎಷ್ಟೋ ಸಲ ಗೈಡ್‌ಗಳ ಸಮಸ್ಯೆಯಾಗಿ ಡಿಗ್ರಿ ಪಡೆಯೋದೇ ಲೇಟಾಗಬಹುದು. ಎಲ್ಲ ಅಗತ್ಯಗಳನ್ನು ಪಕ್ಕಕ್ಕೆ ಸರಿಸಿ, ಇವನ್ನು ಓದಿ ಮುಗಿಸುವುದರೊಳಗೆ ಮದುವೆ ವಯಸ್ಸು ನಿಮ್ಮನ್ನು ಬಿಟ್ಟು ಓಡಿ ಹೋಗಿರುತ್ತದೆ. ಮದುವೆಯೊಂದೇ ಬದುಕಲ್ಲ. ಆದರೆ, ಅದಿಲ್ಲದೆ ಯಶಸ್ವಿ ಬದುಕಿಲ್ಲ. ತೀರಾ ತಡವಾದ ಮದುವೆಗಳು ಒಳ್ಳೆಯ ಬದುಕಿನ ಲಕ್ಷಣದಂತೆ ತೋರಲಾರವು.
ಹುಡುಗಿಯರ ಪಾಲಿಗಂತೂ ಈ ವಿಚಾರ ದೊಡ್ಡ ಸವಾಲೇ ಸರಿ! ನಿನ್ನ ಗೆಳತಿಯರೆಲ್ಲಾ ಮದುವೆಯಾಗುತ್ತಿದ್ದಾರೆ. ನೀನೂ ಆಗು ಅಂತಾರೆ. ಆದರೆ ಈ ಹುಡುಗಿಗೆ, ಕಣ್ಣ ಮುಂದಿರುವ ಹೈಯರ್‌ಸ್ಟಡಿ/ ಪ್ರಮೋಷನ್‌ನ ಕನಸು ಹೊಳೆಯುತ್ತಿರುತ್ತದೆ. ಹೀಗಾಗಿ, ಹೆತ್ತವರು ತೋರಿಸಿದ ಗಂಡನ್ನು ಮನಸ್ಸು ಒಪ್ಪೊಲ್ಲ, ತಾವು ನೋಡಿಕೊಳ್ಳಲು ಸಮಯ ಇರೋಲ್ಲ. ತೀರಾ ಡಬ್ಬಲ್, ಥ್ರಿಬಲ್ ಡಿಗ್ರಿ, ಡಾಕ್ಟರಿಕೆ ಓದಿಕೊಂಡಿರುವ ವಧು, ತನಗಿಂತ ಕಡಿಮೆ ಓದಿದವನನ್ನು ಒಪ್ಪಲಾರಳು. ಗಂಡಿನ ವಯಸ್ಸು ಹೆಣ್ಣಿಗಿಂತ ಕಡಿಮೆ ಇರಬೇಕು ಅನ್ನೋ ನಿಯಮದಂತೆ, ಅವಳ ಓದಿಗಿಂತ ಹೆಚ್ಚಿಗೆ ಓದಿದ ವರನನ್ನೇ ಹುಡುಕುವುದು ಅಲಿಖೀತ ನಿಯಮವಾಗಿದೆ. ಎಷ್ಟೋ ಸಲ, ವಯಸ್ಸು, ಜಾತಕ ಹೊಂದಾಣಿಕೆ ಆದರೂ, ಓದುಗಳು ಹೊಂದಾಣಿಕೆ ಆಗೋಲ್ಲ.
ಯಾರ ಜೊತೆಗೂ ಸೇರಲ್ಲ: ಹೆಚ್ಚು ಓದಿಕೊಂಡಿರುವವರು ಒಂಥರಾ “ಬುದ್ಧಿಜೀವಿ’ಗಳಂತಾಗಿ ಬಿಟ್ಟಿರುತ್ತಾರೆ. ತಮಗೆ ಎಲ್ಲವೂ ತಿಳಿದಿದೆ. ನಾವು ತಿಳಿದಿರುವುದೇ ಎಲ್ಲರಿಗಿಂತ ಶ್ರೇಷ್ಠ. ಏಕೆಂದರೆ, ಹೆಚ್ಚಿಗೆ ಓದಿದ್ದೇನೆ ಎಂಬ ಮನೋ ಧೋರಣೆಯ ಬೇಲಿ ಹಾಕಿಕೊಂಡಿರುತ್ತಾರೆ. ಇದು ಅವನನ್ನು ಬೇರೆಯವರೊಂದಿಗೆ ಮುಕ್ತವಾಗಿ ಬೆರೆಯಲು ಅಡ್ಡಿಪಡಿಸುತ್ತದೆ. ಬುದ್ಧಿವಂತ ಅನ್ನೋ ಅತಿಯಾದ ಅಹಂ ಅವನನ್ನು ಒಂಟಿ ಮಾಡುತ್ತದೆ. ಆಗ ಭಾವನಾತ್ಮಕವಾಗಿ ಕೆಲವು ವಿಚಾರಗಳು ಸವಾಲಾಗಬಹುದು. ಸಾಧನೆ ಮಾಡಲಿಕ್ಕೆ ದೊಡ್ಡ ದೊಡ್ಡ ಓದಿನ ಪದವಿಗಳೇ ಬೇಕು ಅಂತೇನೂ ಇಲ್ಲ. ಸ್ಟೀವ್ ಜಾಬ್ಸ್, ಮಾರ್ಕ್ ಜುಗರ್ ಬರ್ಗ್ ಅವರು ಸಾಧನೆ ಮಾಡುವ ಹೊತ್ತಿಗೆ ತುಂಬಾ ದೊಡ್ಡ ಓದಿನ ಪದವಿಗಳನ್ನೇನೂ ಪಡೆದಿರಲಿಲ್ಲ.
* ಸದಾಶಿವ ಸೊರಟೂರು