Advertisement

ಸದೃಢ ರಾಷ್ಟ್ರ ನಿರ್ಮಾಣಕ್ಕೆ ಉನ್ನತ ಶಿಕ್ಷಣವೇ ಬಲ

09:27 PM Mar 08, 2020 | Lakshmi GovindaRaj |

ಹಾಸನ: ಬಡತನ, ಅಪರಾಧ, ಭಯೋತ್ಪಾದನೆ ಮುಕ್ತ ಸುಭದ್ರ ಮತ್ತು ಸದೃಢ ರಾಷ್ಟ ನಿರ್ಮಾಣವಾದರೆ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್‌ ಅಧ್ಯಕ್ಷ ಪ್ರೊ. ಕೆ.ಎಸ್‌.ರಂಗಪ್ಪ ಅಭಿಪ್ರಾಯಪಟ್ಟರು.

Advertisement

ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಸ್ವಾಯತ್ತ ಕಾಲೇಜಿನ ಪ್ರಥಮ ಪದವಿ ಪ್ರದಾನ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, 30 ವರ್ಷದ ಹಿಂದೆ ಚೀನಾ ದೇಶದ ಸ್ಥಿತಿ ಮತ್ತು ಪ್ರಸ್ತುತ ಚೀನಾದ ಸ್ಥಿತಿಯನ್ನು ಹೋಲಿಕೆ ಮಾಡಿದರೆ ಚೀನಾ ಕಳೆದ 30 ವರ್ಷಗಳಲ್ಲಿ ಅದ್ಭುತ ಸಾಧನೆ ಮಾಡಿ ಸದೃಢ ರಾಷ್ಟ್ರವಾಗಿ ರೂಪುಗೊಂಡಿದೆ. ಆ ದೇಶ ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನೆಗೆ ಹೆಚ್ಚು ಒತ್ತು ನೀಡಿದ್ದರಿಂದ ಆ ದೇಶ ವಿಶ್ವದ ಮುಂಚೂಣಿ ರಾಷ್ಟ್ರವಾಗಿ ರೂಪುಗೊಳ್ಳಲು ಸಾಧ್ಯವಾಯಿತು.

ಹಾಗಾದರೆ ಭಾರತಕ್ಕೆ ಏಕೆ ಅದು ಸಾಧ್ಯವಿಲ್ಲ ಎಂದು ಪ್ರಶ್ನಿಸಿಕೊಂಡರೆ, ಭಾರತದಲ್ಲಿಯೂ ಅದು ಸಾಧ್ಯವಿದೆ. ಆದರೆ ನಾವು ಯಾವುದಕ್ಕೆ ಆದ್ಯತೆ ನೀಡುತ್ತೇವೆಯೋ ಅದನ್ನು ಅವಲಂಬಿಸಿರುತ್ತದೆ ಎಂದರು. ಶೈಕ್ಷಣಿಕ ಪ್ರಗತಿಯನ್ನು ವಿಶ್ವದ ಮುಂಚೂಣಿ ರಾಷ್ಟ್ರಗಳಿಗೆ ಹೋಲಿಸಿ ನೋಡಿದಾಗ ಅಮೆರಿಕ, ಚೀನಾ ನಂತರ ಭಾರತ ಮೂರನೇ ಸ್ಥಾನದಲ್ಲಿ ನಿಲ್ಲುತ್ತದೆ. ಆ ರಾಷ್ಟ್ರಗಳಲ್ಲಿ 100 ವರ್ಷ ಮೀರಿದ ವಿಶ್ವ ವಿದ್ಯಾಲಗಳಿವೆ.

ಭಾರತವು ಸಂಶೋಧನೆಯಲ್ಲಿ ಹಿಂದುಳಿದೆ. ಭಾರತದಲ್ಲಿ ಸಂಶೋಧನೆಯ ಜಿಡಿಪಿ ಕೇವಲ 0.62 ಮಾತ್ರ ಆದರೆ ಅಮೆರಿಕ ಮತ್ತು ಚೀನಾ ದೇಶಗಳ ಸಂಶೋಧನೆಯ ಜಿಡಿಪಿ 5 ಕ್ಕಿಂತಲೂ ಹೆಚ್ಚಿದೆ. ಹಾಗಾಗಿ ಭಾರತವು ಉನ್ನತ ಶಿಕ್ಷಣ ಹಾಗೂ ಸಂಶೋಧನೆಗಳಿಗೆ ಹೆಚ್ಚು ಒತ್ತು ನೀಡಿದರೆ ಮುಂದಿನ 25 ವರ್ಷಗಳಲ್ಲಿ ಅಮೇರಿಕಾ ಮತ್ತು ಚೀನಾವನ್ನು ಎಲ್ಲ ಕ್ಷೇತ್ರಗಳಲ್ಲೂ ಹಿಂದಿಕ್ಕಿ ಉನ್ನತ ಸ್ಥಾನಕ್ಕೇರಲು ಸಾಧ್ಯವಿದೆ ಎಂದು ಹೇಳಿದರು.

ಮೈಸೂರು ವಿವಿ ಪದವಿ ಪಡೆಯುವುದೇ ಹೆಮ್ಮೆ: ಮೈಸೂರು ವಿಶ್ವ ವಿಶ್ವವಿದ್ಯಾಲಯವು ಉನ್ನತ ಘನತೆ ಹಾಗೂ ಪರಂಪರೆಯನ್ನು ಹೊಂದಿದೆ. ಈ ವಿಶ್ವ ವಿಶ್ವವಿದ್ಯಾಲಯದ ಹುಟ್ಟು, ಪ್ರಗತಿಗೆ ದುಡಿದ ಡಾ.ರಾಧಾಕೃಷ್ಣನ್‌, ಸಿ.ಎನ್‌.ಆರ್‌.ರಾವ್‌, ಸರ್‌.ಎಂ. ವಿಶ್ವೇಶ್ವರಯ್ಯ ಅವರು ಭಾರತ ರತ್ನ ಪುರಸ್ಕೃತರಾಗಿದ್ದಾರೆ. ಇಂತಹ ವಿಶ್ವ ವಿಶ್ವವಿದ್ಯಾಲಯದಲ್ಲಿ ಕಲಿತು ಪದಿವಿ ಪಡೆವ ವಿದ್ಯಾರ್ಥಿಗಳು ಹೆಮ್ಮೆಪಡಬೇಕು ಎಂದ ಅವರು, ಈ ವಿಶ್ವ ವಿಶ್ವವಿದ್ಯಾಲಯದ ಘನತೆ ಇನ್ನಷ್ಟು ಉತ್ತುಂಗಕ್ಕೇರಬೇಕು. ಆ ನಿಟ್ಟಿನಲ್ಲಿ ವಿಶ್ವ ವಿಶ್ವವಿದ್ಯಾಲಯ ಹಾಗೂ ಅದರ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

Advertisement

ತಾವು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ ಹಾಸನದ ಸರ್ಕಾರಿ ಕಲಾ ಕಾಲೇಜು ಸ್ವಾಯತ್ತತೆ ಪಡೆಯಲು ಸಹಕಾರ ನೀಡಿದೆ. ಈಗ ಈ ಕಾಲೇಜು ಉತ್ತಮವಾಗಿ ನಡೆಯುತ್ತಿದ್ದು, ಇದರ ಪ್ರಗತಿಗೆ ಪೂರಕವಾಗಿ ವಿಜ್ಞಾನದ ಕೋರ್ಸುಗಳೂ ಸೇರಿದಂತೆ ಇನ್ನಷ್ಟು ಹೊಸ ಕೋರ್ಸುಗಳ ಶಿಕ್ಷಣ ಹಾಗೂ ಬೋಧಕ ವರ್ಗ ಮತ್ತು ಮೂಲ ಸೌಕರ್ಯಕ್ಕೆ ಸ್ಥಳೀಯ ಶಾಸಕರು ನೆರವಾಗಬೇಕು ಎಂದೂ ಹೇಳಿದರು.

ಸರ್ಕಾರಿ ಕೆಲಸಕ್ಕೆ ಜೋತು ಬೀಳಬೇಡಿ: ಪದವೀಧರ ಯುವ ಜನರು ಸರ್ಕಾರಿ ಕೆಲಸವನ್ನೇ ಹುಡುಕದೇ ಸಿಕ್ಕ ಕೆಲಸವನ್ನೇ ಗೌರವಿಸಿ, ಶ್ರದ್ಧೆ, ಪ್ರಾಮಾಣಿಕತೆಯಿಂದ ದುಡಿದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯವಿದೆ ಎಂದು ಮೈಸೂರು ವಿಶ್ವ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ. ಹೇಮಂತ್‌ ಕುಮಾರ್‌ ಹೇಳಿದರು.

ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಸ್ವಾಯತ್ತ ಕಾಲೇಜಿನ ಪ್ರಥಮ ಪದವಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಪದವಿ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ಶ್ರದ್ಧೆ ಮತ್ತು ಪರಿಶ್ರಮದಿಂದ ದುಡಿದರೆ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದರು.

30 ವರ್ಷಗಳ ಹಿಂದೆ ನಡೆದ ಸಂಶೋಧನೆಯ ಫ‌ಲದಿಂದಾಗಿ ಇಂದು ತಂತ್ರಜ್ಞಾನದಲ್ಲಿ ಬಹಳಷ್ಟು ಆವಿಷ್ಕಾರಗಳನ್ನು ಕಾಣುತ್ತಿದ್ದೇವೆ. ಈಗ ನಡೆಸುವ ಸಂಶೋಧನೆ ಮುಂದಿನ ಪೀಳಿಗೆಗೆ ಫ‌ಲ ಕೊಡುತ್ತದೆ. ಹಾಗಾಗಿ ತಂತ್ರಜ್ಞಾನದ ಬೆಳವಣಿಗೆ ಹಾಗೂ ಸಂಶೋಧನೆಗೆ ಆದ್ಯತೆ ನೀಡಬೇಕು. ಯಾವುದೇ ಸಂಶೋಧನೆಯಾದರೂ ಅದು ಜನರಿಗೆ ತಲಪಬೇಕು. ಆಗ ಮಾತ್ರ ಅಂತಹ ಸಂಶೋಧನೆಗೆ ಮೌಲ್ಯ ಬರುತ್ತದೆ ಎಂದು ಹೇಳಿದರು.

ಯಾವುದೇ ಕಾಲೇಜು ಸ್ವಾಯತ್ತ ಶಿಕ್ಷಣ ಸಂಸ್ಥೆಯಾಗಿ ಮಾನ್ಯತೆ ಪಡೆಯುವುದು ಸುಲಭದ ಕೆಲಸವಲ್ಲ. ಪ್ರಾಧ್ಯಾಪಕರ ಮತ್ತು ಪ್ರಾಂಶುಪಾಲರ ಶ್ರಮ, ವಿಶ್ವ ವಿಶ್ವವಿದ್ಯಾಲಯದ ಕುಲಪತಿಯ ಹೊಣೆಗಾರಿಕೆ ಹೆಚ್ಚಿರುತ್ತದೆ. ಇದೆಲ್ಲದರ ಪರಿಣಾಮವಾಗಿ ಹಾಸನದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಸ್ವಾಯತ್ತತೆ ಪಡೆದಿದೆ ಎಂದ ಪ್ರೊ.ಹೇಮಂತ್‌ ಕುಮಾರ್‌ ಅವರು, ಸ್ವಾಯತ್ತತೆಯಿಂದ ಕಾಲೇಜಿಗೆ ಶೈಕ್ಷಣಿಕ ಸ್ವಾತಂತ್ರ್ಯ ಸಿಗುತ್ತದೆ. ಆದರೆ ಜವಾಬ್ದಾರಿಯೂ ಹೆಚ್ಚಿರುತ್ತದೆ. ಎಚ್ಚರಿಕೆಯಿಂದ ಶಿಕ್ಷಣದ ಗುಣಮಟ್ಟವನ್ನು ಕಾಪಾಡಿಕೊಂಡು ಉನ್ನತ ಸ್ಥಾನಕ್ಕೇರಬೇಕಾಗುತ್ತದೆ ಎಂದರು.

ಹಾಸನದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜನ್ನು ಮಾದರಿ ಶಿಕ್ಷಣ ಸಂಸ್ಥೆಯಾಗಿ ರೂಪಿಸಬೇಕೆಂಬ ಮಹದಾಸೆಯಿಂದ ಕಾಲೇಜಿಗೆ ಸ್ವಾಯತ್ತತೆ ಪಡೆಯಬೇಕೆಂದು ಶ್ರಮಿಸಿದ ಎಲ್ಲರನ್ನೂ ಕುಲಪತಿಗಳು ಅಭಿನಂದಿಸಿ ಕಾಲೇಜಿನ ಪ್ರಗತಿ ಉತ್ತುಂಗಕ್ಕೇರಲಿ ಎಂದು ಶುಭ ಹಾರೈಸಿದರು.

ಕಾಲೇಜಿನ ನಿಕಟಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ.ಡಿ.ಜಿ.ಕೃಷ್ಣೇಗೌಡ ಮಾತನಾಡಿ, 2015 -16 ನೇ ಸಾಲಿನಿಂದ ಸ್ವಾಯತ್ತತೆ ಪಡೆದ ಹಾಸನದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ರಾಜ್ಯದ 5 ಅತ್ಯುತ್ತಮ ಕಾಲೇಜುಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಕಾಲೇಜಿನಲ್ಲಿ ಈಗ 2,500 ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳನ್ನು ವ್ಯಾಸಂಗ ಮಾಡುತ್ತಿದ್ದು, 2000 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಹೊಂದಿರುವ ರಾಜ್ಯದ ಏಕೈಕ ಕಾಲೇಜು ಎಂಬುದು ನಮ್ಮ ಹೆಮ್ಮೆ. ಈಗ ಪ್ರಥಮ ಪದವಿ ಪ್ರದಾನ ಸಮಾರಂಭ ನಡೆಯುತ್ತಿರುವುದು ತಮಗೆ ಸಂತೋಷವನ್ನುಂಟು ಮಾಡಿದೆ ಎಂದರು.

ಶಾಸಕ ಶಾಸಕ ಪ್ರೀತಂ ಜೆ. ಗೌಡ ಮಾತನಾಡಿ, ವಿದ್ಯಾರ್ಥಿಗಳಿಗೆ ಪದವಿ ಪಡೆಯುವುದು ಜೀವನದ ಪ್ರಮಖ ಘಟ್ಟವಾಗಿದೆ. ಪದವಿ ಪಡೆದ ನಂತರ ಸಮಾಜದಲ್ಲಿ ಹೇಗೆ ತಾವು ಸಮಾಜಮುಖೀಯಾಗಿ ತೊಡಗಿಸಿಕೊಳ್ಳಬೇಕೆಂದು ಇಲ್ಲೇ ನಿರ್ಧರಿಸಿ ಹೊರ ಹೋಗಬೇಕಿದೆ. ಈ ಹಿನ್ನೆಲೆಯಲ್ಲಿ ಇಂದಿನ ಯುವ ಜನತೆ ದೃಧ ನಿರ್ಧಾರದೊಂದಿಗೆ ಸಮಜಕ್ಕೆ ಕೊಡಗೆ ನೀಡಲು ಕಟ್ಟಿಬದ್ಧರಾಗಬೇಕೆಂದು ಆಶಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಪ್ಪ, ಡೀನ್‌ ಮಹೇಂದ್ರಕುಮಾರ್‌, ಪರೀಕ್ಷಾಂಗ ವಿಭಾಗದ ನಿಯಂತ್ರಕ‌ ಟಿ.ಪಿ. ಪುಟ್ಟರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

406 ವಿದ್ಯಾರ್ಥಿಗಳು ಪದವಿ ಸ್ವೀಕಾರ: ಪದವಿ ಮತ್ತು ಸ್ನಾಕೋತ್ತರ ಪದವಿ ಕೋರ್ಸ್‌ಗಳಲ್ಲಿ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ವಿವಿಧ ದತ್ತಿ ನಗದು ಬಹುಮಾನಗಳನ್ನು ವಿತರಿಸಲಾಯಿತು. 5 ವಿದ್ಯಾರ್ಥಿಗಳು ಚಿನ್ನದ ಪದಕ, 6 ದತ್ತಿ ಪ್ರಶಸ್ತಿ ಸ್ವೀಕರಿಸಿದರು.

ಕಲಾ ವಿಭಾಗದಿಂದ-132, ವಾಣಿಜ್ಯಶಾಸ್ತ್ರ ವಿಭಾಗದಿಂದ-171, ಸ್ನಾತಕೋತ್ತರ ಪದವಿಯ ಅರ್ಥಶಾಸ್ತ್ರ ವಿಭಾಗದಿಂದ 30, ರಾಜ್ಯಶಾಸ್ತ್ರ ಭಾಗದಿಂದ 24, ಸಮಾಜಶಾಸ್ತ್ರ ವಿಭಾಗದಿಂದ 25 ಹಾಗೂ ಇಂಗ್ಲಿಷ್‌ ವಿಭಾಗದ 13 ವಿದ್ಯಾರ್ಥಿಗಳು ಪದವಿ ಪ್ರಮಾಣವನ್ನು ಸಮಾರಂಭದಲ್ಲಿ ಪಡೆದುಕೊಂಡ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಪದವಿ ಪ್ರದಾನ ಸಮಾರಂಭದ ಅಂಗವಾಗಿ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next