ಶ್ರೀರಂಗಪಟ್ಟಣ: ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಸ್ವಂತ ಕಾಲ ಮೇಲೆ ನಿಂತು ಆರ್ಥಿಕ ಸಬಲರನ್ನಾಗಿ ಮಾಡಬೇಕು ಎಂದು ಪ್ರಾದೇಶಿಕ ನಿರ್ದೇಶಕ ಡಾ.ಸುಧಾಕರ್ ಹೇಳಿದರು. ಪಟ್ಟಣದ ಸಂದಲ್ ಕೋಟೆ ಆವರಣದಲ್ಲಿ ರಂಗನಾಯಕಿ ಸ್ತ್ರೀ ಸಮಾಜ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿವಿಧ ಆಟೋಟಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ದೇಶದ ರಾಷ್ಟ್ರಪಿತ ಮಹಾತ್ಮಗಾಂಧಿ, ಸ್ವಾಮಿ ವಿವೇಕಾನಂದ, ಡಾ.ಅಂಬೇಡ್ಕರ್ ಅವರು ಮಹಿಳೆಯರನ್ನು ಗೌರವಿಸುತ್ತಿದ್ದರು. ದೇಶದಲ್ಲಿ ಹೆತ್ತ ತಾಯಿಗೆ ಮೊದಲ ಸ್ಥಾನ ನೀಡುತ್ತೇವೆ. ನಂತರ ಗುರುಗಳಿಗೆ ಗೌರವ ಕೊಡಲಾಗುತ್ತದೆ. ಮಹಿಳೆಯರು ಇವತ್ತಿನ ದಿನದಲ್ಲಿ ಎಲ್ಲಾ ಸಮಾಜದ ವಾಹಿನಿಯಲ್ಲಿ ಗಂಡಿಗಿಂತಲೂ ಮುಂದುವರಿಯುವ ಅವಕಾಶವನ್ನು ನಮ್ಮ ದೇಶದ ಸಂವಿಧಾನ ಕಲ್ಪಿಸಲಾಗಿದೆ. ಗಂಡು ಹೆಣ್ಣೆಂಬ ಭೇದಭಾವನೆಯಿಲ್ಲದೆ ಸಮಾನವಾಗಿ ಮಹಿಳೆಯರನ್ನು ಗೌರವಿಸಬೇಕು ಎಂದು ಹೇಳಿದರು.
ಹೆಣ್ಣು ಸಂತತಿ ಕ್ಷೀಣ: ಜನವಾದಿ ಸಂಘಟನೆ ಮುಖ್ಯಸ್ಥೆ ಕುಮಾರಿ ಮಾತನಾಡಿ, ಸಮಾಜದಲ್ಲಿ ಹಿಂದಿನಿಂದಲೂ ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ ಎಂಬ ಭಾವನೆಯಲ್ಲಿ ಗಂಡನ್ನು ಪ್ರಧಾನವಾಗಿ ನೋಡಲಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆ ಪರಿಣಾಮ ಹೆಣ್ಣು ಸಂತತಿಯೇ ಇಳಿಮುಖವಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಹೆಣ್ಣಿನ ಸಂಖ್ಯೆ ಇಳಿಮುಖವಾಗುತ್ತಿದೆ. ಅದರಲ್ಲೂ ಮಂಡ್ಯದಲ್ಲಿ ಕೊನೆಯ ಸ್ಥಾನದಲ್ಲಿದೆ. ಪಾಂಡವಪುರ ಹಾಗೂ ಶ್ರೀರಂಗಪಟ್ಟಣದಲ್ಲಿ ಮಹಿಳೆಯರ ಸಂಖ್ಯೆ ತುಂಬಾ ಕಡಿಮೆ ಇದೆ ಎಂದು ಆತಂಕವ್ಯಕ್ತಪಡಿಸಿದರು.
ಮಹಿಳೆಯರು ಶ್ರಮಿಕರು: ಗ್ರಾಮೀಣ ಮಹಿಳೆಯರು ಶ್ರಮಿಕ ಜೀವಿಗಳು. ಮನೆಯ ಒಳಗೆ ಮತ್ತು ಹೊರಗೆ ಎರಡೂ ಕಡೆ ದುಡಿದರೂ ಅವರ ದುಡಿಮೆಗೆ ಬೆಲೆ ಇಲ್ಲ. ಅಲ್ಲದೆ ಅದನ್ನು ಪರಿಗಣಿಸುತ್ತಿಲ್ಲ. ಕೆಲಸದ ಒತ್ತಡದಲ್ಲಿ ಸಿಲುಕುವ ಮಹಿಳೆಯರು ಆರೋಗ್ಯವನ್ನೂ ನಿರ್ಲಕ್ಷಿಸುತ್ತಿದ್ದಾರೆ. ಆರೋಗ್ಯವಿದ್ದರೆ ಮಾತ್ರ ದುಡಿಯಲಾಗುತ್ತದೆ. ದುಡಿಮೆಯಷ್ಟೇ ಆರೋಗ್ಯದತ್ತಲೂ ಕಾಳಜಿ ವಹಿಸಬೇಕು. ಯಾವುದೇ ಕಷ್ಟಗಳು ಬಂದರೂ ಅದನ್ನು ನೀಗಿಸುವ ಜವಾಬ್ದಾರಿ ನಿಮ್ಮದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗನಾಯಕಿ ಸ್ತ್ರೀಸಮಾಜದ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ ವಹಿಸಿದ್ದರು. ಜಿಲ್ಲಾ ಮಹಿಳಾ ಸಂಘಟನಾ ಅಧ್ಯಕ್ಷ ಅನುಪಮ, ಸಮಾಜದ ಗೌರವಾಧ್ಯಕ್ಷೆ ಪದ್ಮ, ದೈಹಿಕ ಶಿಕ್ಷಕಿ ಸುಮತಿ, ಗಂಗಾ, ಪ್ರಿಯಾ ಉಪಸ್ಥಿತಿಯಲ್ಲಿ ಮಹಿಳಾ ವಕೀಲರು ಸೇರಿದಂತೆ ಹಲವು ಮಹಿಳಾ ಸಂಘಟನೆಗಳ ಮಹಿಳೆಯರು ಭಾಗವಹಿಸಿದ್ದರು.