ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿ ಕಾಲೇಜುಗಳ ದಾಖಲಾತಿ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ದಾಖಲಾತಿ ಪ್ರಕ್ರಿಯೆಗೆ ಪ್ರಾಂಶುಪಾಲರ ನೇತೃತ್ವದ ತಟಸ್ಥ ತಂಡವನ್ನು ನಿಯೋಜಿಸಲು ಉನ್ನತ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ವಿದ್ಯಾರ್ಥಿಗಳ ಪ್ರವೇಶದ ಸಂದರ್ಭದಲ್ಲಿ ಕೆಲವು ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುತ್ತಿರುವ ಪ್ರಕರಣಗಳು ವರದಿ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರವೇಶ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳ ಭವಿಷ್ಯ ಸ್ನೇಹಿಯನ್ನಾಗಿಸುವುದು ಮತ್ತು ಸರಿಯಾದ ಮಾರ್ಗದರ್ಶನ ನೀಡುವ ಉದ್ದೇಶದಿಂದ ಉನ್ನತ ಶಿಕ್ಷಣ ಇಲಾಖೆ ಈ ಕ್ರಮ ಕೈಗೊಳ್ಳಲಿದೆ.
ಪ್ರಥಮ ದರ್ಜೆ ಕಾಲೇಜುಗಳಿಗೆ ಬಡ ಕೌಟುಂಬಿಕ ಹಿನ್ನೆಲೆಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುತ್ತಾರೆ. ಉನ್ನತ ಶಿಕ್ಷಣ ಇಲಾಖೆ ಬಳಿಯಿರುವ ಮಾಹಿತಿ ಪ್ರಕಾರ ಪ್ರಥಮ ದರ್ಜೆ ಕಾಲೇಜುಗಳಿಗೆ ಪ್ರವೇಶ ಪಡೆಯುವವರಲ್ಲಿ ಶೇ. 75ಕ್ಕಿಂತ ಹೆಚ್ಚು ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ, ಅಲ್ಪಸಂಖ್ಯಾಕ ವರ್ಗಕ್ಕೆ ಸೇರಿದರು. ಇದರ ಜತೆಗೆ ಶೇ. 51ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ಅವರಿಗೆ ಏನು ಓದಿದರೆ ಯಾವ ರೀತಿಯ ವೃತ್ತಿ ಅವಕಾಶಗಳಿರುತ್ತವೆ ಎಂಬ ಸರಿಯಾದ ಮಾಹಿತಿ ಇರುವುದಿಲ್ಲ.
ಇಂತಹ ವಿದ್ಯಾರ್ಥಿಗಳು ಪಿಯುಸಿ ಮುಗಿಸಿ ಪ್ರಥಮ ದರ್ಜೆ ಕಾಲೇಜುಗಳಿಗೆ ದಾಖಲಾಗುವ ಸಂದರ್ಭದಲ್ಲಿ ದಾಖಲಾತಿ ಪ್ರಕ್ರಿಯೆ ನಡೆಯುವಾಗ ಹಾಜರಿರುವ ಕೆಲವು ವಿಷಯಗಳ ಪ್ರಾಧ್ಯಾಪಕರು ತಮ್ಮ ವಿಷಯಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದರೆ ಆಥವಾ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದನ್ನು ಗಮನಿಸಿ ತಮ್ಮ ಡಿಪಾರ್ಟ್‌ಮೆಂಟ್ ಮುಚ್ಚಬಹುದು, ನಮ್ಮನ್ನು ಬೇರೆ ಕಡೆ ಎತ್ತಂಗಡಿ ಮಾಡಬಹುದೆಂಬ ಭಯದಿಂದ ತಾವು ಪಾಠ ಮಾಡುವ ವಿಷಯಗಳನ್ನು ಆಯ್ದುಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪುಸಲಾಯಿಸುವುದು, ಒತ್ತಡ ಹಾಕುವುದು ಮುಂತಾದ ಚಟುವಟಿಕೆ ನಡೆಸುತ್ತಿರುವುದು ಉನ್ನತ ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ದಾಖಲಾತಿ ಪ್ರಕ್ರಿಯೆ ಸಂದರ್ಭದಲ್ಲಿ ಪ್ರಾಧ್ಯಾಪಕರ ಇಂತಹ ದುರುದ್ದೇಶದ ಪ್ರಭಾವ ವಿದ್ಯಾರ್ಥಿಗಳ ಮೇಲೆ ಬೀಳದೆ ಅವರು ತಮ್ಮ ಆಸಕ್ತಿ, ಉದ್ಯೋಗಾವಕಾಶ, ಕೌಶಲ, ಭವಿಷ್ಯವನ್ನು ಗಮನಿಸಿ ಮಾಹಿತಿ ಆಧಾರಿತವಾಗಿ ತಮ್ಮ ತೀರ್ಮಾನ ಕೈಗೊಳ್ಳುವಂತೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಲು ತಟಸ್ಥ ತಂಡ ರಚಿಸಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕಾರ್ಯನಿರ್ವಹಣೆ
ತಟಸ್ಥ ತಂಡ ರಚನೆ ಬಗ್ಗೆ ಪ್ರಾಂಶುಪಾಲರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತೇವೆ. ಕಾಲೇಜು ಪ್ರವೇಶ ಪಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ ಸಿಗಬೇಕು. ಪ್ರಾಧ್ಯಾಪಕರು ತಾವು ಬೋಧಿಸುವ ವಿಷಯವನ್ನು ಕಾಲೇಜಿನಲ್ಲಿ ಉಳಿಸಿಕೊಳ್ಳಲು ವಿದ್ಯಾರ್ಥಿಗಳ ದಾರಿ ತಪ್ಪಿಸುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ತಟಸ್ಥ ತಂಡ ದಾಖಲಾತಿ ಸಂದರ್ಭದಲ್ಲಿ ಕಾರ್ಯನಿರ್ವಹಣೆ ಆರಂಭಿಸಲಿದೆ.
– ಜಗದೀಶ್ ಜಿ., ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ
-ರಾಕೇಶ್ ಎನ್.ಎಸ್.