ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸ್ಥಿತಿ ನೋಡಿ ಸಾಕಾಗಿ ಹೋಗಿದೆ ಎಂದು ಅಸಮಾಧಾನ ಹೊರಹಾಕಿರುವ ಹೈಕೋರ್ಟ್, ನ್ಯಾಯಾಲಯದ ನಿರ್ಬಂಧದ ಹೊರತಾಗಿಯೂ ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಘನತ್ಯಾಜ್ಯ ಸುರಿಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಕೋರ್ಟ್, ಕಾನೂನಿಗಿಂತ ಮೇಲಿದ್ದೇವೆಂದು ಭಾವಿಸುತ್ತಿರುವ ಪಾಲಿಕೆ ಅಧಿಕಾರಿಗಳಿಗೆ ಹೈಕೋರ್ಟ್ ಎಂದರೇನು, ಅದರ ಆದೇಶ ಪಾಲಿಸುವುದು ಹೇಗೆ, ಕಾನೂನು ಎಂದರೇನು ಎಂಬ ಬಗ್ಗೆ ಅರ್ಥ ಮಾಡಿಸುವುದಾಗಿ ಗುಡುಗಿದೆ. ಅಲ್ಲದೇ ಬಿಬಿಎಂಪಿ ಅಧಿಕಾರಿಗಳನ್ನು ಜೈಲಿಗೆ ಕಳಿಸುವ ದಿನಗಳು ಹತ್ತಿರವಾಗಿವೆ ಎಂದು ಹೈಕೋರ್ಟ್ ಎಚ್ಚರಿಕೆಯನ್ನೂ ನೀಡಿತು.
ಬೆಂಗಳೂರಿನಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ 2012ರಲ್ಲಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿತು. ಈ ವೇಳೆ ಪದೇ ಪದೆ ನ್ಯಾಯಾಲಯದ ಆದೇಶ ಉಲ್ಲಂಘಿಸುತ್ತಿರುವ ಪಾಲಿಕೆಯ ಕಾರ್ಯ ವೈಖರಿಯನ್ನು ತೀವ್ರವಾಗಿ ನ್ಯಾಯಪೀಠ ಖಂಡಿಸಿತು.
ಇದನ್ನೂ ಓದಿ : ‘ಹೋಮ್ ಮಿನಿಸ್ಟರ್’ ಆಗಿ ಉಪ್ಪಿ ಏಪ್ರಿಲ್ 1 ರಿಂದ ಚಿತ್ರಮಂದಿರಗಳಲ್ಲಿ!
ಆಯುಕ್ತ ಗುಪ್ತಾಗೆ ತರಾಟೆ: ವಿಚಾರಣೆಗೆ ಖುದ್ದು ಹಾಜರಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ನ್ಯಾಯಪೀಠ ತೀವ್ರ ತರಾಟೆಗೆ ತೆಗೆದುಕೊಂಡಿತು. ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ನಗರದ ಘನತ್ಯಾಜ್ಯ ಸುರಿಯದಂತೆ ನ್ಯಾಯಾಲಯದ ನಿರ್ಬಂಧ ಇದ್ದರೂ ಅದನ್ನು ಉಲ್ಲಂಘಿಸಲಾಗಿದೆ. ತ್ಯಾಜ್ಯ ಸುರಿಯುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಪಾಲಿಕೆಗೆ ಅನುಮತಿಸಿರಲಿಲ್ಲ. ಹೀಗಿದ್ದರೂ, ತ್ಯಾಜ್ಯ ಸುರಿಯುವ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲಾಗಿದೆ. ಪ್ರತಿದಿನ ಬಿಬಿಎಂಪಿಯದ್ದು ಇದೇ ಸಮಸ್ಯೆಯಾಗಿದೆ. ನಮಗೂ ಇದನ್ನೆಲ್ಲ ನೋಡಿ ಸಾಕಾಗಿ ಹೋಗಿದೆ. ಘನ ತ್ಯಾಜ್ಯ ಸುರಿಯುವ ವಿಚಾರದಲ್ಲಿ ನ್ಯಾಯಾಲಯದ ಆದೇಶ ಸಂಧರ್ಬೋಚಿತವಾಗಿದೆ. ಅದನ್ನು ಉಲ್ಲಂಘಿಸುವ ಮೂಲಕ ಅಧಿಕಾರಿ ದುರ್ನಡತೆ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿತು.
ನಮ್ಮ ಕೆಲಸ ಮಾಡಿಯೇ ತೀರುತ್ತೇವೆ: ಸಿಜೆ: ಪಾಲಿಕೆ ಕಾರ್ಯವೈಖರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನಾನು ರಾಜ್ಯ ಹೈಕೋರ್ಟ್‌ಗೆ ಬಂದಾಗಿನಿಂದಲೂ ಗಮನಿಸುತ್ತಿದ್ದೇನೆ. ಬಿಬಿಎಂಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ . ಪಾಲಿಕೆ ಅಧಿಕಾರಿಗಳು ದಪ್ಪ ಚರ್ಮದವರಾಗಿದ್ದಾರೆ ಎಂದು ಅನ್ನಿಸಿದೆ. ಅಧಿಕಾರಿಗಳಿಗೆ ನಿಮಗೆ ಹಾಗೆ ಅನ್ನಿಸದಿರಬಹುದು. ಕೆಲ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಸಮಯ ಬಂದಿದೆ. ಅವರಿಗೆ ತಪ್ಪು-ಸರಿಯ ಅನುಭವವಾಗುವಂತೆ ಮಾಡಬೇಕಿದೆ. ಅಧಿಕಾರಿಗಳು ಕಾನೂನಿಗಿಂತ ಮೇಲಿದ್ದೇವೆ ಎಂದು ಭಾವಿಸಿದ್ದಾರೆ. ಕಾನೂನು ಎಂದರೆ ಏನು ಎಂಬುದನ್ನು ಅಧಿಕಾರಿಗಳಿಗೆ ಅರ್ಥ ಮಾಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ಆ ಕೆಲಸವನ್ನು ನಾವು ಮಾಡಿಯೇ ತೀರುತ್ತೇವೆ ಎಂದು ಗುಡುಗಿದರು.