ಬೆಂಗಳೂರು: ಕ್ಲಿನಿಕಲ್ ಪರೀಕ್ಷೆಗಳನ್ನು ನಡೆಸುವಾಗ ಪದೇ ಪದೇ ನಿಯಮಗಳನ್ನು ಉಲ್ಲಂಘಿಸುತ್ತಿರುವ ರಾಜೀವಗಾಂಧಿ ಆರೋಗ್ಯ ವಿವಿಯಿಂದ ನೇಮಕಗೊಂಡಿರುವ ಪ್ರಾಯೋಗಿಕ ಪರೀಕ್ಷೆಗಳ ಪರಿವೀಕ್ಷಕರನ್ನು ಕಪ್ಪು ಪಟ್ಟಿಗೆ ಸೇರಿಸಲು ಇದು ಸಕಾಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಎಂಬಿಬಿಎಸ್ ನಾಲ್ಕನೇ ವರ್ಷದ ವಿದ್ಯಾರ್ಥಿಗಳಾದ ದಾಸರಿ ಚಕ್ರಧರ್ ಮತ್ತು ಶಶಿಕುಮಾರ್ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಕೃಷ್ಣಭಟ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ರೀತಿ ಅಭಿಪ್ರಾಯಪಟ್ಟಿತು. ಅಲ್ಲದೇ ಮೂರು ವಾರಗಳಲ್ಲಿ ಅರ್ಜಿದಾರರಿಗೆ ಕ್ರಮವಾಗಿ ಶಸ್ತ್ರಚಿಕಿತ್ಸೆ ಮತ್ತು ಪೀಡಿಯಾಟ್ರಿಕ್ಸ್‌ನ ಅನುತ್ತೀರ್ಣ ವಿಷಯಗಳಿಗೆ ಹೊಸದಾಗಿ ಪ್ರಾಯೋಗಿಕ ಪರೀಕ್ಷೆ ನಡೆಸುವಂತೆ ರಾಜೀವಗಾಂಧಿ ಆರೋಗ್ಯ ವಿವಿಗೆ ಆದೇಶಿಸಿತು.
ವಿಶ್ವವಿದ್ಯಾಲಯ ನೇಮಿಸಿರುವ ಪ್ರಾಯೋಗಿಕ ಪರೀಕ್ಷೆಗಳ ಪರೀಕ್ಷಕರು ಕ್ಲಿನಿಕಲ್ ಪರೀಕ್ಷೆಗಳನ್ನು ನಡೆಸುವಾಗ ವಿವಿ ಹೊರಡಿಸಿದ ಮಾರ್ಗಸೂಚಿಗಳನ್ನು ಪದೇ ಪದೇ ಉಲ್ಲಂಘಿಸುತ್ತಿದ್ದಾರೆ. ಈ ಬಗ್ಗೆ ದೂರುಗಳೂ ಬರುತ್ತಿವೆ, ನ್ಯಾಯಾಲಯವೂ ಇದನ್ನು ಗಮನಿಸಿದೆ, ಇಂತಹ ಕಾರ್ಯವನ್ನು ಸಹಿಸಲಾಗದು. ವಿಶ್ವವಿದ್ಯಾನಿಲಯವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಇಂತಹ ಉಲ್ಲಂಘನೆಗಳು ಮತ್ತೆ ಆಗದಂತೆ ಖಾತ್ರಿಪಡಿಸಿಕೊಳ್ಳಬೇಕು. ಪದೇ ಪದೇ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಮ ಕೈಗೊಳ್ಳಲು ಇದು ಸಕಾಲ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಇದನ್ನೂ ಓದಿ : ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಮಂಗಳೂರಿನ ಮಹಿಳೆ ಸಾವು
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 2020ರ ಡಿಸೆಂಬರ್‌ನಲ್ಲಿ ಮತ್ತೆ ಪ್ರಾಯೋಗಿಕ ಪರೀಕ್ಷೆಗಳನ್ನು ಮಾಡುವಂತೆ ನ್ಯಾಯಾಲಯ ಈ ಹಿಂದೆ ನೀಡಿದ್ದ ಆದೇಶವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಅಲ್ಲದೆ, ಪದೆ ಪದೇ ಪರಿವೀಕ್ಷಕರು ಮಾಡುವ ಈ ನಿಯಮ ಉಲ್ಲಂಘನೆಯ ಅಸಮರ್ಪಕ ಕಾರ್ಯಗಳಿಂದಾಗಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.