Advertisement

ಇನ್ನೆಷ್ಟು ಜನ ಪ್ರಾಣ ತೆರಬೇಕು : ಕೇಂದ್ರದ ವಿರುದ್ಧ ರಾಜ್ಯ ಹೈಕೋರ್ಟ್‌ ಕಿಡಿ

12:25 AM May 05, 2021 | Team Udayavani |

ಬೆಂಗಳೂರು: ಆಮ್ಲಜನಕದ ಕೊರತೆಯಿಂದ ಇನ್ನೂ ಎಷ್ಟು ಜನ ಪ್ರಾಣ ತೆರಬೇಕು?- ಇದು ಕರ್ನಾಟಕ ಹೈಕೋರ್ಟ್‌ ಕೇಂದ್ರ ಸರಕಾರಕ್ಕೆ ಕೇಳಿದ ಪ್ರಶ್ನೆ. ರಾಜ್ಯಕ್ಕೆ ಆಮ್ಲಜನಕ ಹಂಚಿಕೆ ಪ್ರಮಾಣವನ್ನು ಹೆಚ್ಚಿಸುವ ವಿಚಾರದಲ್ಲಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌, ಎಷ್ಟು ಜನ ಸತ್ತ ಮೇಲೆ ರಾಜ್ಯದ ಆಮ್ಲಜನಕ ಕೋಟಾ ಹೆಚ್ಚಳ ಮಾಡುತ್ತೀರಿ ಎಂದು ಪ್ರಶ್ನಿಸಿದೆ.

Advertisement

ರಾಜ್ಯಕ್ಕೆ ಆಮ್ಲಜನಕ ಹಂಚಿಕೆ ಪ್ರಮಾಣ ಹೆಚ್ಚಿಸುವ ಬಗ್ಗೆ ಬುಧವಾರ ಬೆಳಗ್ಗೆ 10.30ಕ್ಕೆ ಸ್ಪಷ್ಟ ಉತ್ತರ ನೀಡಬೇಕು. ಇಲ್ಲದಿದ್ದರೆ ಕೇಂದ್ರದ ವಿರುದ್ಧ ಆದೇಶ ನೀಡಲಾಗುವುದು ಎಂದೂ ಅದು ಎಚ್ಚರಿಕೆ ನೀಡಿದೆ.

ಸೋಂಕು ನಿಯಂತ್ರಣ, ಚಿಕಿತ್ಸೆಗೆ ಸಂಬಂಧಿಸಿದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕುರಿತಂತೆ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಆಮ್ಲಜನಕ ಪೂರೈಕೆಯನ್ನು ಒಂದೇ ಇಲಾಖೆ ನಿರ್ಧರಿಸುವುದಿಲ್ಲ. ಹೀಗಾಗಿ ಸ್ಪಷ್ಟ ಮಾಹಿತಿ ನೀಡಲು ಕಾಲಾವಕಾಶ ಬೇಕು ಎಂದು ವಿಚಾರಣೆ ಸಂದರ್ಭ ಕೇಂದ್ರದ ಪರ ವಕೀಲರು ಕೋರಿದರು. ಕೇಂದ್ರವು ಬುಧವಾರವೇ ರಾಜ್ಯಕ್ಕೆ ಆಮ್ಲಜನಕ ಪೂರೈಕೆ ಹೆಚ್ಚಿಸಬೇಕು. ಇಲ್ಲದಿದ್ದರೆ ತಾನೇ ಈ ಸಂಬಂಧ ಆದೇಶ ಹೊರಡಿಸಲಿದೆ ಎಂದು ಹೇಳಿದ ಕೋರ್ಟ್‌ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

ಚಾ. ಜನಗರ ಘಟನೆ ಬಗ್ಗೆ ಕಳವಳ :

Advertisement

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲ ಜನಕ ಕೊರತೆಯಿಂದ ಕೋವಿಡ್‌ ಪೀಡಿತರು ಪ್ರಾಣ ಕಳೆದುಕೊಂಡ ಬಗ್ಗೆ ಹೈಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದಿರುವ ಅದು, ನಿಲುವು ತಿಳಿಸುವಂತೆ ಸರಕಾರಕ್ಕೆ ಸೂಚಿಸಿದೆ.

ವಿಚಾರಣೆ ವೇಳೆ ಅಡ್ವೋಕೇಟ್‌ ಜನರಲ್‌ ಅವರು, ಹಿರಿಯ ಐಎಎಸ್‌ ಅಧಿಕಾರಿ ಶಿವಯೋಗಿ ಕಳಸದ ಅವರನ್ನು ತನಿಖೆಗೆ ನೇಮಕ ಮಾಡಿರುವ ಬಗ್ಗೆ ಗಮನಕ್ಕೆ ತಂದರು.

ಇದು ನ್ಯಾಯಾಂಗ ತನಿಖೆಗೆ ವಹಿಸಲು ಸೂಕ್ತ ಪ್ರಕರಣ. ಮೇಲಾಗಿ ಜನರ ಜೀವನ್ಮರಣದ ಪ್ರಶ್ನೆ. ಆದ್ದರಿಂದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕಿದೆ ಎಂದ ನ್ಯಾಯಪೀಠ, ವಿಚಾರಣೆಯನ್ನು ಮೇ 5ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next